ಆಟೊ ಎಲ್‌ಪಿಜಿ ದರ ಏರಿಕೆ ಖಂಡಿಸಿ 9ಕ್ಕೆ ಪ್ರತಿಭಟನೆ

ಬೆಂಗಳೂರು: ‘ಆಟೊಗಳಿಗೆ ಬಳಸುವ ಎಲ್‌ಪಿಜಿ ದರವು ವರ್ಷದಲ್ಲಿ ಎರಡು ಪಟ್ಟು ಏರಿಕೆಯಾಗಿದೆ’ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಆಟೊ ಚಾಲಕರ ಘಟಕವು, ಇದನ್ನು ಖಂಡಿಸಿ ಇದೇ 9ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಆಟೊ ಚಾಲಕರ ಘಟಕದ ಅಧ್ಯಕ್ಷ ಅಯೂಬ್ ಖಾನ್, ‘ಪ್ರತಿ ಕೆ.ಜಿ. ಎಲ್‌ಪಿಜಿ ದರ ವರ್ಷದಲ್ಲಿ ₹28ರಷ್ಟು ಏರಿಕೆಯಾಗಿದೆ. ಕೇಂದ್ರ ಸರ್ಕಾರ ಎಲ್‌ಪಿಜಿ ದರವನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಆಟೊ ಚಾಲಕರ ಜೀವನದ ಜೊತೆ ಆಟವಾಡುತ್ತಿದೆ. ಪ್ರಯಾಣಿಕರು ನೀಡುವ ಹಣ ಎಲ್‌ಪಿಜಿಗೆ ಖರ್ಚಾಗುತ್ತಿದ್ದು, ಚಾಲಕರ ಬದುಕು ಆದಾಯವಿಲ್ಲದೆ ದುಸ್ತರವಾಗಿದೆ. ಆಟೊ ಚಾಲಕರ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಎಲ್‌ಪಿಜಿ ಪೂರೈಸುವ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ. ಈ ಸರ್ಕಾರಕ್ಕೆ ಆಟೊ ಚಾಲಕರು ಹಾಗೂ ಪ್ರಯಾಣಿಕರ ಹಿತ ಬೇಕಾಗಿಲ್ಲ. ಉದ್ಯಮಿಗಳು ನೀಡುವ ಹಣದ ಆಸೆಗಾಗಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ’ ಎಂದು ದೂರಿದರು.
ಆಟೊ ಚಾಲಕರ ಬೆಂಗಳೂರು ಘಟಕದ ಅಧ್ಯಕ್ಷ ವೆಂಕಟಗೌಡ, ‘ಎಲ್‌ಪಿಜಿ ದರ ಏರಿಕೆ ಖಂಡಿಸಿ ಆಟೊ ಚಾಲಕರ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಚಾಲಕರು ಕಪ್ಪು ಪಟ್ಟಿ ಧರಿಸಿ, ಆಟೊ ಚಾಲನೆ ಮಾಡುವ ಮೂಲಕ ಈ ಜನ ವಿರೋಧಿ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.