ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಹ್ಯಾಂಡಲ್‌ ಲಾಕ್ ಮುರಿದು ಆಟೊ ಕಳವು

ಮಂಡ್ಯದ ಆರೋಪಿ ಬಂಧನ: ₹12 ಲಕ್ಷ ಮೌಲ್ಯದ 7 ಆಟೊಗಳು ಜಪ್ತಿ
Published 21 ಮಾರ್ಚ್ 2024, 14:04 IST
Last Updated 21 ಮಾರ್ಚ್ 2024, 14:04 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಸ್ಥಳ ಹಾಗೂ ಮನೆಗಳ ಮುಂದೆ ನಿಲ್ಲಿಸುತ್ತಿದ್ದ ಆಟೊಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ನಿಯಾಮತ್‌ ಖಾನ್ (28) ಎಂಬುವವರನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯದ ಕುತ್ತಲು ಸಾದತ್‌ನಗರದ ನಿಯಾಮತ್ ಖಾನ್, ಹಲವು ವರ್ಷಗಳಿಂದ ಕಳ್ಳತನ ಎಸಗುತ್ತಿದ್ದ. ಈತನಿಂದ ₹12 ಲಕ್ಷ ಮೌಲ್ಯದ 7 ಆಟೊಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ರಫೀಕ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ವಾಲ್ಮೀಕಿ ನಗರದ ಸುಹೇಲ್ ಅಹಮ್ಮದ್ ಅವರು ತಮ್ಮ ಆಟೊವನ್ನು ಮೈಸೂರು ರಸ್ತೆಯ ಟೋಲ್‌ಗೇಟ್‌ ಬಳಿ ಮಾರ್ಚ್ 18ರಂದು ನಿಲ್ಲಿಸಿದ್ದರು. ಕೆಲಸದ ನಿಮಿತ್ತ ಬೇರೆಡೆ ಹೋಗಿದ್ದರು. ಅವರು ವಾಪಸು ಬರುವಷ್ಟರಲ್ಲಿ ಆಟೊ ಕಳ್ಳತನವಾಗಿತ್ತು. ಈ ಬಗ್ಗೆ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

‘ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ಸುಳಿವು ಲಭ್ಯವಾಗುತ್ತಿದ್ದಂತೆ ಆರೋಪಿಯನ್ನು ಸೆರೆಹಿಡಿಯಲಾಗಿದೆ’ ಎಂದರು.

‘ಹ್ಯಾಂಡಲ್ ಲಾಕ್ ಮುರಿಯುವುದರಲ್ಲಿ ನಿಯಾಮತ್ ಖಾನ್ ಪರಿಣತನಾಗಿದ್ದ. ನಗರದ ಹಲವು ಕಡೆಗಳಲ್ಲಿ ಆಟೊಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿದ್ದ. ಅದೇ ಆಟೊಗಳನ್ನು ಹಾಗೂ ಬಿಡಿಭಾಗಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದ. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಹಣ ಖಾಲಿಯಾಗುತ್ತಿದ್ದಂತೆ ಪುನಃ ಕಳ್ಳತನ ನಡೆಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಪೀಣ್ಯ ಹಾಗೂ ಇತರೆ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿರುವುದು ಗೊತ್ತಾಗಿದೆ. ಚಾಲಕರು ತಮ್ಮ ಆಟೊಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಯಾರಾದರೂ ಅಪರಿಚಿತರು ಕಂಡುಬಂದರೆ ಠಾಣೆಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT