ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಆಗದ ಅವೆನ್ಯೂ ರಸ್ತೆ; ವರ್ತಕರಿಗೆ ಜಲಾವೃತವಾಗುವ ಭಯ

ವಾಹನ ಸವಾರರಿಗೆ ಬೀಳುವ ಭೀತಿ
Last Updated 15 ಜನವರಿ 2023, 23:25 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ಬಂದರೆ ನೀರು ನುಗ್ಗುವ ಭಯ, ವಾಹನ ಸವಾರರಿಗೆ ರಸ್ತೆಯಲ್ಲಿ ಬೀಳುವ ಭೀತಿ...

ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ನಡೆಸಿದ್ದರೂ ಸ್ಮಾರ್ಟ್‌ ಆಗದ ಚಿಕ್ಕಪೇಟೆಯ ಅವೆನ್ಯೂ ರಸ್ತೆಯ ಸ್ಥಿತಿ ಇದು.

ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್‌. ಮಾರುಕಟ್ಟೆ ತನಕ 1.2 ಕಿಲೋ ಮೀಟರ್ ಉದ್ದದ ಅವೆನ್ಯೂ ರಸ್ತೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ಅಲ್ಲಲ್ಲಿ ಬಾಕಿ ಉಳಿಸಲಾಗಿದೆ. ಅವು ಗುಂಡಿಗಳ ರೂಪ ಪಡೆದುಕೊಂಡಿದ್ದು, ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ಸಂಕಷ್ಟ ಸೃಷ್ಟಿಸಿದೆ.

ಚಿಕ್ಕಪೇಟೆಯಲ್ಲಿ ಅತ್ತಿಂದಿತ್ತ ಸರಕು ಸಾಗಣೆಗೆ ಎರಡು ಚಕ್ರದ ತಳ್ಳುವ ಗಾಡಿಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಸರಕು ತುಂಬಿದ ಗಾಡಿಗಳನ್ನು ಎಳೆದು ಸಾಗಿಸಿಕೊಂಡೇ ನೂರಾರು ಜನ ಜೀವನ ನಡೆಸುತ್ತಿದ್ದಾರೆ. ಸರಕು ತುಂಬಿದ ಈ ಗಾಡಿಗಳು ಗುಂಡಿಯಲ್ಲಿ ಸಿಲುಕಿಕೊಂಡರೆ ಗಾಡಿ ಎಳೆಯುವವರು ಪರದಾಡಬೇಕಾದ ಸ್ಥಿತಿ ಇದೆ.

ಅವೆನ್ಯೂ ರಸ್ತೆಯಿಂದ ಅಕ್ಕ–ಪಕ್ಕದ ಅಡ್ಡ ರಸ್ತೆಗಳಿಗೆ ಹೋಗುವ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಅವೆನ್ಯೂ ರಸ್ತೆಯನ್ನು ಕಾಂಕ್ರೀಟ್‌ನಿಂದ ಎತ್ತರ ಮಾಡಲಾಗಿದೆ. ಈ ರಸ್ತೆಯಿಂದ ಅಡ್ಡ ರಸ್ತೆಗಳಿಗೆ ಇಳಿಯಲು ವಾಹನಗಳ ಸವಾರರು ಪರದಾಡುತ್ತಿದ್ದಾರೆ. ಚೌಡೇಶ್ವರಿ ಟೆಂಪಲ್ ರಸ್ತೆಯ ವೃತ್ತದಲ್ಲಿ ಸರಕು ಸಾಗಣೆ ಆಟೊರಿಕ್ಷಾವೊಂದು ತಿರುವು ಪಡೆಯಲು ಯತ್ನಿಸಿ ಕಳೆದ ವಾರವಷ್ಟೇ ಪಲ್ಟಿ ಹೊಡೆದಿದೆ. ಇದರ ಅಡಿಗೆ ಸಿಲುಕಿದ್ದ ಸಂಚಾರ ಪೊಲೀಸ್‌ ಸಿಬ್ಬಂದಿಯೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‌‘ಅವೈಜ್ಞಾನಿಕವಾಗಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಹಳೇ ರಸ್ತೆಯನ್ನು ಅಗೆದು ಹೊಸ ರಸ್ತೆ ನಿರ್ಮಿಸಿಲ್ಲ. ಇರುವ ರಸ್ತೆಯ ಮೇಲೆ ಕಾಂಕ್ರೀಟ್ ಹಾಕಿ ಎತ್ತರ ಮಾಡಲಾಗಿದೆ. ರಸ್ತೆಯ ಮೇಲೆ ಒಂದು ಅಡಿ ಎತ್ತರಕ್ಕೆ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಮೂರು ಮೆಟ್ಟಿಲು ಹತ್ತಿ ಬರಬೇಕಿದ್ದ ಅಂಗಡಿಗಳಿಗೆ ಈಗ ಇಳಿದು ಹೋಗಬೇಕಾಗಿದೆ. ಮಳೆ ಬಂದರೆ ನೂರಾರು ಅಂಗಡಿಗಳು ಜಲಾವೃತವಾಗುತ್ತವೆ ಎಂದು ಇಲ್ಲಿನ ವರ್ತಕರು ಹೇಳುತ್ತಾರೆ. ಈ ರೀತಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸುವುದೇ ಸ್ಮಾರ್ಟ್‌ಸಿಟಿಯೇ‌’ ಎಂದು ಅವರು ಪ್ರಶ್ನಿಸುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.

ಪಾದಚಾರಿ ಮಾರ್ಗಕ್ಕೆ ಹುಡುಕಾಟ
ಸ್ಮಾರ್ಟ್‌ಸಿಟಿ ಯೋಜನೆಯಡಿ ಪಾದಚಾರಿ ಮಾರ್ಗಗಳು ನಿರ್ಮಾಣವಾಗಿದ್ದರೂ, ಅವುಗಳನ್ನು ಪಾದಚಾರಿಗಳು ಹುಡುಕಬೇಕಾಗಿದೆ.

ಪಾದಚಾರಿ ಮಾರ್ಗವೇ ಕಾಣಿಸದಂತೆ ವ್ಯಾಪಾರ ವಹಿವಾಟನ್ನು ಕೆಲವ ಬೀದಿಬದಿ ವ್ಯಾಪಾರಿಗಳು ವಿಸ್ತರಿಸಿಕೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ಕಡೆಯಿಂದ ಬಂದು ಕೆ.ಆರ್.ಮಾರುಕಟ್ಟೆ ಮತ್ತು ಅವಿನ್ಯೂ ರಸ್ತೆ ಕಡೆಗೆ ಸಾಗುವ ಪಾದಚಾರಿಗಳಿಗಾಗಿ ಅಂಡರ್ ಪಾಸ್(ಕೆಳ ಸೇತುವೆ) ನಿರ್ಮಿಸಲಾಗಿದೆ.

ಎರಡೂ ಕಡೆಯ ಪ್ರವೇಶ ದ್ವಾರಗಳನ್ನು ಹುಡುಕಾಡಿ ಪ್ರವೇಶ ಮಾಡಬೇಕಾಗಿದೆ. ಎರಡು ಬದಿಯಲ್ಲಿನ ಅಂಗಡಿ ಮುಂಗಟ್ಟುಗಳು ಈ ದ್ವಾರಗಳನ್ನೇ ಮುಚ್ಚವಷ್ಟು ವ್ಯಾಪಿಸಿಕೊಂಡಿವೆ. ಪಾದಚಾರಿಗಳ ಸಮಸ್ಯೆ ಕಂಡರೂ ಕಾಣಿಸದಂತೆ ಪೊಲೀಸರು ಸುಮ್ಮನಿರುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ.

‘ಮೇಲಾಧಿಕಾರಿಗಳ ಗಮನಕ್ಕೆ ತಂದಾಗ ಒಂದು ದಿನ ಸಮಸ್ಯೆ ಸರಿಯಾಗುತ್ತದೆ. ಮರುದಿನ ಮತ್ತೆ ಅದೇ ಸ್ಥಿತಿಗೆ ಮರಳುತ್ತದೆ’ ಕುಸುಮ್ ಜನರಲ್ ಸ್ಟೋರ್‌ನ ಸಿ.ಬಿ.ಕೃಷ್ಣಮೂರ್ತಿ ಹೇಳುತ್ತಾರೆ.

**

ಅವೆನ್ಯೂ ರಸ್ತೆಯಲ್ಲಿ ಪಾದಚಾರಿಗಳ ಸಂಚಾರಕ್ಕೆ ತಡಕಾಟಬೇಕಾದ ಸ್ಥಿತಿ ಇದೆ. ಮೋದಿ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಾಗ ರಸ್ತೆ ರಿಪೇರಿಯಾಗುತ್ತದೆ. ಬಳಿಕ ಮತ್ತೆ ಅದೇ ಸ್ಥಿತಿ.
–ಸಿ.ಬಿ.ಕೃಷ್ಣಮೂರ್ತಿ, ಕುಸುಮ್ ಜನರಲ್ ಸ್ಟೋರ್

**

ಅವೈಜ್ಞಾನಿಕ ಕಾಮಗಾರಿ ನಿರ್ಮಿಸಲಾಗಿದ್ದು, ಮಳೆ ಬಂದರೆ ನೂರಾರು ಅಂಗಡಿಗಳು ಜಲಾವೃತ ಆಗುತ್ತವೆ. ಪೊಲೀಸ್‌ ಸಿಬ್ಬಂದಿ ಮೇಲೆ ವಾಹನ ಪಲ್ಟಿ ಹೊಡೆದು ಆಸ್ಪತ್ರೆ ಸೇರುವಷ್ಟು ಅವ್ಯವಸ್ಥೆಯಾಗಿದೆ.
–ನಂದಕುಮಾರ್, ವರ್ತಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT