ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಬುಲೆನ್ಸ್ ಮಾಫಿಯಾ ತಪ್ಪಿಸಬೇಕಿದೆ: ಡಿ.ಕೆ. ಶಿವಕುಮಾರ್ ಅಭಿಮತ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಮತ *ಬೆಂಗಳೂರು, ಬಳ್ಳಾರಿ ಟೆಲಿ ಐಸಿಯು ಕ್ಲಸ್ಟರ್ ಉದ್ಘಾಟನೆ
Published 2 ಫೆಬ್ರುವರಿ 2024, 16:02 IST
Last Updated 2 ಫೆಬ್ರುವರಿ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರದ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಆಂಬುಲೆನ್ಸ್‌ಗಳು ಖಾಸಗಿ ಆಸ್ಪತ್ರೆ ಹಾಗೂ ಮಾಫಿಯಾಗಳ ಜತೆಗೆ ಕೈಜೋಡಿಸುವುದನ್ನು ತಪ್ಪಿಸಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. 

ಆರೋಗ್ಯ ಇಲಾಖೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬೆಂಗಳೂರು ಹಾಗೂ ಬಳ್ಳಾರಿ ಟೆಲಿ ಐಸಿಯು ಕ್ಲಸ್ಟರ್ ಉದ್ಘಾಟಿಸಿ ಅವರು ಮಾತನಾಡಿದರು. 

‘ಆಂಬುಲೆನ್ಸ್ ಚಾಲಕರು ಖಾಸಗಿ ವ್ಯವಸ್ಥೆ ಜತೆಗೆ ಕೈಜೋಡಿಸಿ, ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಈ ಮಾಫಿಯಾಕ್ಕೆ ಕಡಿವಾಣ ಹಾಕಬೇಕು. ಇತ್ತೀಚೆಗಷ್ಟೇ ಅತ್ಯಾಧುನಿಕ ಸೌಲಭ್ಯ ಹೊಂದಿರುವ ನೂರಾರು ಆಂಬುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ವೈದ್ಯಕೀಯ ಕ್ಷೇತ್ರದ ಪ್ರಗತಿಗೆ ಇವು ಸಹಕಾರಿಯಾಗಿವೆ’ ಎಂದು ಹೇಳಿದರು. 

‘ಗ್ರಾಮೀಣ ಪ್ರದೇಶದ ರೋಗಿಗಳನ್ನು ಬೆಂಗಳೂರಿಗೆ ತರುವಷ್ಟರಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ತಾಲ್ಲೂಕು ಮಟ್ಟದಲ್ಲಿ ಐಸಿಯು ಕೇಂದ್ರಗಳನ್ನು ಸ್ಥಾಪಿಸಿ, ತಂತ್ರಜ್ಞಾನದ ನೆರವಿನಿಂದ ಇಲ್ಲಿಂದಲೇ ಅವುಗಳನ್ನು ಪರಿಶೀಲಿಸುವ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಕ ಹೆಜ್ಜೆ. ತಾಲ್ಲೂಕು ಮಟ್ಟದಲ್ಲಿ 5-10 ಐಸಿಯು ಬೆಡ್‌ಗಳ ಘಟಕ ಸ್ಥಾಪಿಸಿ, ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಹಾಗೂ ಗಾಯಾಳುಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ಒದಗಿಸಲಾಗುತ್ತದೆ. ಅಗತ್ಯ ಮಾರ್ಗದರ್ಶನವನ್ನು ಟೆಲಿ ಐಸಿಯು ಕ್ಲಸ್ಟರ್ ಮೂಲಕ ಮಾಡಲಾಗುತ್ತದೆ’ ಎಂದು ತಿಳಿಸಿದರು. 

ಟೆಲಿ ಐಸಿಯು ವ್ಯವಸ್ಥೆ ವಿಸ್ತರಣೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ನಮ್ಮ ಗ್ರಾಮೀಣ ಪ್ರದೇಶದ ಜನರಿಗೂ ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆ ದೊರೆಯುವಂತಾಗಬೇಕು. ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಪಡೆಯಲು ದೂರದ ಜಿಲ್ಲೆಗಳಿಗೆ ತೆರಳುವುದು ಹಳ್ಳಿಗಾಡಿನ ಜನರಿಗೆ ಕಷ್ಟವಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿಯೇ ಸೂಪರ್ ಸ್ಪೆಷಾಲಿಟಿ ಆರೈಕೆ ಒದಗಿಸಲು ಟೆಲಿ ಐಸಿಯು ವ್ಯವಸ್ಥೆ ಸಹಕಾರಿ. ಆದ್ದರಿಂದ ತಾಲ್ಲೂಕು ಮಟ್ಟದಲ್ಲಿ ಟೆಲಿ ಐಸಿಯು ಕೇಂದ್ರಗಳನ್ನು ಸ್ಥಾಪಿಸಿ, ಇಲ್ಲಿಂದಲೇ ಅವುಗಳನ್ನು ಪರಿಶೀಲಿಸುವಂತಹ ತಂತ್ರಜ್ಞಾನಗಳ ಬಳಕೆ ಕಾರ್ಯಕ್ಕೆ ನಾವು ಒತ್ತು ನೀಡಿದ್ದೇವೆ. ಹಂತ ಹಂತವಾಗಿ ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಹೇಳಿದರು. 

‘ಟೆಲಿ ಐಸಿಯು ಸೇವೆಗೆ ಸಂಬಂಧಿಸಿದಂತೆ ಬೆಂಗಳೂರು ಹಾಗೂ ಬಳ್ಳಾರಿ ಕ್ಲಸ್ಟರ್‌ಗೆ ತಲಾ 9 ತಾಲ್ಲೂಕು ಆಸ್ಪತ್ರೆಗಳನ್ನ ಜೋಡಿಸಲಾಗಿದ್ದು, ಹುಬ್ಬಳ್ಳಿಯ ಕಿಮ್ಸ್‌ಗೆ 10 ಹಾಗೂ ಮೈಸೂರು ವೈದ್ಯಕೀಯ ಸಂಸ್ಥೆಗೆ 13 ತಾಲ್ಲೂಕು ಆಸ್ಪತ್ರೆಗಳನ್ನು ಜೋಡಣೆ ಮಾಡಲಾಗಿದೆ. ಮುಂದಿನ ವರ್ಷ 60 ತಾಲ್ಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

‘41 ಆಸ್ಪತ್ರೆಗಳಲ್ಲಿ ಸೇವೆ’

‘ಟೆಲಿ ಐಸಿಯು ಸೇವೆಯನ್ನು ಈಗಾಗಲೇ ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಜಾರಿಗೆ ತರಲಾಗಿದೆ. ಈಗ ಬೆಂಗಳೂರಿನ ವಿಕ್ಟೋರಿಯಾ ಹಾಗೂ ಬಳ್ಳಾರಿ ವೈದ್ಯಕೀಯ ಕಾಲೇಜಿನಲ್ಲಿ ಅನುಷ್ಠಾನಗೊಳಿಸಿದ್ದೇವೆ. ಒಟ್ಟು ನಾಲ್ಕು ಸರ್ಕಾರಿ ವೈದ್ಯಕೀಯ ಸಂಸ್ಥೆಗಳನ್ನು ಹಬ್‌ಗಳಾಗಿ ರಚಿಸಲಾಗಿದ್ದು ಇವುಗಳಿಗೆ 41 ತಾಲ್ಲೂಕು ಆಸ್ಪತ್ರೆಗಳನ್ನ ಜೋಡಣೆ ಮಾಡಲಾಗಿದೆ. ಈ 41 ತಾಲ್ಲೂಕು ಆಸ್ಪತ್ರೆಗಳಲ್ಲಿ 10 ಟೆಲಿ ಐಸಿಯು ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ನೆರವಿನಿಂದ ತಜ್ಞ ವೈದ್ಯರ ಸಲಹೆಗಳು ರೋಗಿಗಳಿಗೆ ದೊರೆಯಲಿವೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT