ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯಪ್ಪ ದೊರೆ ಹತ್ಯೆ ಆರೋಪಿಯಿಂದ ಪೊಲೀಸರ ಮೇಲೆ ದಾಳಿಗೆ ಯತ್ನ: ಕಾಲಿಗೆ ಗುಂಡೇಟು

Last Updated 21 ಅಕ್ಟೋಬರ್ 2019, 4:18 IST
ಅಕ್ಷರ ಗಾತ್ರ

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ (52) ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಗಣೇಶ್‌ ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ.

‘ಜೆ.ಸಿ. ನಗರದ ನಿವಾಸಿ ಗಣೇಶ್, ಪ್ರಕರಣದ ಪ್ರಮುಖ ಆರೋಪಿ ಸೂರಜ್ ಸಿಂಗ್‌ನ ಸ್ನೇಹಿತ. ಸದ್ಯ ಗಣೇಶ್‌ನ ಎಡಗಾಲಿಗೆ ಗುಂಡು ತಗುಲಿ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದರು.

‘ಅಯ್ಯಪ್ಪ ಅವರ ಕೊಲೆಗೆ ₹ 1 ಕೋಟಿ ಸುಫಾರಿ ಕೊಟ್ಟಿದ್ದ ಹಾಲಿ ಕುಲಪತಿ ಸುಧೀರ್ ಅಂಗೂರ್ ಹಾಗೂ ₹ 25 ಲಕ್ಷ ಮುಂಗಡವಾಗಿ ಪಡೆದು ಅಯ್ಯಪ್ಪ ಅವರನ್ನು ಹತ್ಯೆ ಮಾಡಿದ್ದ ಸೂರಜ್‌ನನ್ನು ಈಗಾಗಲೇ ಬಂಧಿಸಲಾಗಿದೆ. ಹತ್ಯೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಗಣೇಶ್ ಈಗ ಸಿಕ್ಕಿಬಿದ್ದಿದ್ದಾನೆ. ಇನ್ನು ಹಲವರು ತಲೆಮರೆಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಪೊಲೀಸರ ಮೇಲೆ ಹಲ್ಲೆಗೆ ಯತ್ನ: ‘ಆರ್‌.ಟಿ. ನಗರ ಎಚ್‌.ಎಂ.ಟಿ ಮೈದಾನ ಬಳಿ ಇದೇ 15ರಂದು ಅಯ್ಯಪ್ಪ ಅವರನ್ನು ಆರೋಪಿಗಳು ಕೊಲೆ ಮಾಡಿದ್ದರು. ತಲೆಮರೆಸಿಕೊಂಡಿದ್ದ ಗಣೇಶ್, ಸಂಜಯನಗರ ಸಮೀಪದ ಕರ್ನಾಟಕ ಬೀಜ ನಿಗಮ ಮಂಡಳಿಯ ಗೋದಾಮು ಬಳಿ ಇರುವ ಮಾಹಿತಿ ಭಾನುವಾರ ಸಿಕ್ಕಿತ್ತು’ ಎಂದು ಪೊಲೀಸರು ಹೇಳಿದರು.

‘ಇನ್‌ಸ್ಪೆಕ್ಟರ್ ಮಿಥುನ್ ಶಿಲ್ಪಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಲು ಸ್ಥಳಕ್ಕೆ ಹೋಗಿತ್ತು. ಡ್ರ್ಯಾಗರ್‌ ಹಿಡಿದಿದ್ದ ಆರೋಪಿ, ತನ್ನನ್ನು ಬಂಧಿಸಲು ಮುಂದಾಗಿದ್ದ ಪ್ರೊಬೇಷನರಿ ಎಸ್‌ಐ ಯಲ್ಲಮ್ಮ ಹಾಗೂ ಕಾನ್‌ಸ್ಟೆಬಲ್‌ ಮಲ್ಲಿಕಾರ್ಜುನ್ ಅವರ ಮೇಲೆ ಹಲ್ಲೆ ಮಾಡಿದ್ದ. ರಕ್ಷಣೆಗೆ ಹೋದ ಇನ್‌ಸ್ಪೆಕ್ಟರ್, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದರು. ಅವರ ಮೇಲೂ ಆತ ಹಲ್ಲೆಗೆ ಮುಂದಾಗಿದ್ದ.’

‘ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್, ಗಣೇಶ್‌ನ ಎಡಗಾಲಿಗೆ ಗುಂಡು ಹೊಡೆದಿದ್ದರು. ಸ್ಥಳದಲ್ಲೇ ಕುಸಿದು ಬಿದ್ದ ಆತನನ್ನು ಪೊಲೀಸರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು’ ಎಂದು ತಿಳಿಸಿದರು.

‘ಘಟನೆಯಲ್ಲಿ ಗಾಯಗೊಂಡಿರುವ ಪಿಎಸ್ಐ ಹಾಗೂ ಕಾನ್‌ಸ್ಟೆಬಲ್‌ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT