ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾಬುಡನ್‌ ಗಿರಿ: ಬಾಷಾ ಸೇರಿ 8 ಸದಸ್ಯರ ಸಮಿತಿ

Last Updated 18 ನವೆಂಬರ್ 2022, 21:39 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದ ಆಡಳಿತ ನಿರ್ವಹಣೆಗೆ ಅಲ್ಲಿನ ಎಸ್‌.ಎಂ. ಬಾಷಾ ಸೇರಿದಂತೆ ಎಂಟು ಸದಸ್ಯರ ವ್ಯವಸ್ಥಾಪನಾ ಸಮಿತಿ ಯನ್ನು ನೇಮಿಸಿ ರಾಜ್ಯ ಧಾರ್ಮಿಕ ಪರಿಷತ್ತು ಶುಕ್ರವಾರ ಆದೇಶ ಹೊರಡಿಸಿದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ 2011ರ ಸೆಕ್ಷನ್‌ 25ರ ಅಡಿಯಲ್ಲಿ ಈ ನೇಮಕ ಮಾಡಲಾಗಿದೆ.

ಎಂಟು ಮಂದಿಯ ಪೈಕಿ ಏಳು ಮಂದಿ ಹಿಂದೂ ಧರ್ಮೀಯರು. ಅವರಲ್ಲಿ ಇಬ್ಬರು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ/ ಪಂಗಡಗಳಿಗೆ ಸೇರಿದ ಒಬ್ಬರು ಇದ್ದಾರೆ. ಮೂರು ವರ್ಷಗಳ ಅವಧಿಗೆ ಈ ಸಮಿತಿಯು ಕಾರ್ಯನಿರ್ವಹಿಸಲಿದೆ.

ಚಿಕ್ಕಮಗಳೂರು ತಾಲ್ಲೂಕು ಅತ್ತಿಗುಂಡಿಯ ಸತೀಶ್‌ ಕೆ., ಕೈಮರ ಬಾಗಡೇಹಳ್ಳಿಯ ಲೀಲಾ ಸಿ.ಜಿ., ಯರೇಹಳ್ಳಿ ಸಮೀಪದ ಅರೇ ಹಳ್ಳಿಯ ಶೀಲಾ, ಚಿಕ್ಕಮಗಳೂರಿನ ವಿಜಯಪುರದ ತಿಲಕ್‌ ಪಾರ್ಕ್ ರಸ್ತೆಯ ಸುಮಂತ್‌ ಎನ್‌.ಎಸ್‌., ರಾಮನ ಹಳ್ಳಿಯ ಹನುಮಂತನಗರದ ಕೆ.ಎಸ್‌. ಗುರುವೇಶ್‌, ರತ್ನಗಿರಿ ಬಡಾವಣೆಯ ಜಿ.ಎಚ್‌. ಹೇಮಂತ್‌ ಕುಮಾರ್‌ ಮತ್ತು ನರಿಗುಡ್ಡೇನಹಳ್ಳಿಯ ಜ್ಯೋತಿನಗರದ ಸಿ.ಎಸ್‌. ಚೇತನ ವ್ಯವಸ್ಥಾಪನಾ ಸಮಿತಿಯ ಇತರ ಸದಸ್ಯರು.

‘ಹೈಕೋರ್ಟ್‌ನಲ್ಲಿ ದಾಖಲಾಗಿರುವ ರಿಟ್‌ ಅರ್ಜಿ ಸಂಖ್ಯೆ 1110/2022ಕ್ಕೆ ಸಂಬಂಧಿಸಿದ ಅಂತಿಮ ಆದೇಶಕ್ಕೆ ಒಳಪಟ್ಟು ಈ ನೇಮಕಾತಿ ಆದೇಶ ಹೊರಡಿಸಲಾಗಿದೆ. ಈ ಸದಸ್ಯರು ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿ ಆಗಿರುವುದು ಕಂಡುಬಂದಲ್ಲಿ ಅಂಥವರ ಸದಸ್ಯತ್ವವು ಸಹಜವಾಗಿಯೇ ರದ್ದಾಗುವುದು’ ಎಂದು ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಆದೇಶದಲ್ಲಿ ತಿಳಿಸಿದ್ದಾರೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯು ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿರುತ್ತಾರೆ. ಈಗ ನೇಮಕಗೊಂಡಿರುವ ಸದಸ್ಯರು ತಮ್ಮ ಪ್ರಥಮ ಸಭೆಯಲ್ಲಿ ಒಬ್ಬರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

42 ಅರ್ಜಿ ಸಲ್ಲಿಕೆ
ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದ ಆಡಳಿತ ನಿರ್ವಹಣೆಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಹಿಂದೂ ಮತ್ತು ಮುಸ್ಲಿಂ ಭಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಒಟ್ಟು 42 ಮಂದಿ ಅರ್ಜಿ ಸಲ್ಲಿಸಿದ್ದರು ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ರೋಹಿಣಿ ಸಿಂಧೂರಿತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿದ್ದ ವ್ಯಕ್ತಿಗಳ ಅರ್ಹತೆ ಕುರಿತು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಹಾಗೂ ಎಸ್‌ಪಿಯವರಿಂದ ವರದಿ ಪಡೆಯಲಾಗಿತ್ತು.‌ ವರದಿಗಳ ಕುರಿತು ರಾಜ್ಯ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಚರ್ಚಿಸಿದ ಬಳಿಕ ಎಂಟು ಸದಸ್ಯರ ವ್ಯವಸ್ಥಾಪನಾ ಸಮಿತಿ ನೇಮಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT