ಬಳ್ಳಾರಿ ರಸ್ತೆ ವಿಸ್ತರಣೆ: ವಿಶ್ವಾಸಾರ್ಹ ಅಧಿಕಾರಿಗಳ ಮೇಲ್ವಿಚಾರಣೆಗೆ ನಿರ್ದೇಶನ
ಬೆಂಗಳೂರು: ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶ್ವಾಸಾರ್ಹ ಮತ್ತು ಹಿರಿಯ ಅಧಿಕಾರಿಯ
ಮೇಲ್ವಿಚಾರಣೆಯಲ್ಲಿ ನಡೆಸಬೇಕು‘ ಎಂದು ಹೈಕೋರ್ಟ್ ಸೂಚಿಸಿದೆ.
‘ಬಳ್ಳಾರಿ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ‘ಸಮರ್ಪಣಾ’ ಸ್ವಯಂ ಸೇವಾ
ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ‘ವಾಹನ ದಟ್ಟಣೆಯಿಂದ ಬಳಲುತ್ತಿರುವ ಬಳ್ಳಾರಿ ರಸ್ತೆಯ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ವಿಸ್ತರಣೆಗೆ ಸುಪ್ರೀಂಕೋರ್ಟ್ ಈಗಾಗಲೇ ನಿರ್ದೇಶಿಸಿದೆ. ಆದರೂ, ಬಿಬಿಎಂಪಿ ಕಾಮಗಾರಿಯನ್ನು ವಿಳಂಬ ಮಾಡುತ್ತಿದೆ‘ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲರು, ‘ಮೇಖ್ರಿ ವೃತ್ತದಿಂದ ಕಾವೇರಿ ಜಂಕ್ಷನ್ ವರೆಗಿನ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ‘ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ನ್ಯಾಯಪೀಠ, ರಸ್ತೆ ವಿಸ್ತರಣೆಯ ಕಾಮಗಾರಿ ಯನ್ನು ಪಾಲಿಕೆಯ ವಿಶ್ವಾಸಾರ್ಹ ಮತ್ತು ಹಿರಿಯ ಅಧಿಕಾರಿ
ಗಳೇ ಮೇಲ್ವಿಚಾರಣೆ ನಡೆಸಬೇಕು. ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿತು. ನಾಲ್ಕು ವಾರಗಳಲ್ಲಿ ಕಾಮಗಾರಿಯ ಪ್ರಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಪಾಲಿಕೆಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.