ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಸವಾಡಿ ಕೆರೆ: ತೆರವಾದ ಸ್ಥಳದಲ್ಲೇ ಮತ್ತೆ ಒತ್ತುವರಿ

ಬಾಣಸವಾಡಿ ಕೆರೆ: ಏಳು ವರ್ಷಗಳ ಹಿಂದೆ ತೆರವು, ಇದೀಗ ಮತ್ತೆ ಕಟ್ಟಡಗಳ ನಿರ್ಮಾಣ
Last Updated 16 ಅಕ್ಟೋಬರ್ 2022, 21:17 IST
ಅಕ್ಷರ ಗಾತ್ರ

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಕೆರೆ–ಕಾಲುವೆ ಒತ್ತುವರಿ ತೆರವು ಮಾಡುವುದೇ ದೊಡ್ಡ ಕಾರ್ಯ. ಇಂತಹ ಸಾಧನೆಯನ್ನು ಮಾಡಿದ ಮೇಲೆ ಅದನ್ನು ಉಳಿಸಿಕೊಳ್ಳದೆ ಹೋದರೆ ಮತ್ತೆ ಅತಿಕ್ರಮವಾಗುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಬೆಂಗಳೂರು ಪೂರ್ವ ವಲಯದಲ್ಲಿರುವ ಬಾಣಸವಾಡಿ ಕೆರೆ ಅಂಗಳ.

ಬೆಂಗಳೂರು ಪೂರ್ವ ತಾಲ್ಲೂಕು ಕೃಷ್ಣರಾಜಪುರ ಬಾಣಸವಾಡಿ ಸರ್ವೆ ನಂ. 211ರಲ್ಲಿ 40 ಎಕರೆ 20 ಗುಂಟೆಯಲ್ಲಿದ್ದ ಕೆರೆಯ ವ್ಯಾಪ್ತಿಯಲ್ಲಿ ಸರ್ಕಾರ ಮತ್ತು ಬಿಡಿಎ ಒತ್ತುವರಿ ಮಾಡಿಕೊಂಡಿರುವ ಪ್ರದೇಶ 22 ಎಕರೆ 19 ಗುಂಟೆ. ಬಿಡಿಎ ರಸ್ತೆ ಮಾಡಿ, ಕಲ್ಯಾಣನಗರ ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಂಚಿದೆ. ಖಾಸಗಿ ಒತ್ತುವರಿ 2 ಎಕರೆ 1 ಗುಂಟೆ. ಇದನ್ನು 2015ರಲ್ಲಿ ತಾಲ್ಲೂಕು ಆಡಳಿತ ತೆರವು ಮಾಡಿತ್ತು. ಆದರೆ ಅದಕ್ಕೊಂದು ಬೇಲಿ ಹಾಕಿ, ರಕ್ಷಿಸುವಲ್ಲಿ ಬಿಡಿಎ ಹಾಗೂ ಬಿಬಿಎಂಪಿ ವಿಫಲವಾಗಿರುವುದರಿಂದ ಅಲ್ಲಿ ಮತ್ತೆ ಅಕ್ರಮವಾಗಿ ದೇವಸ್ಥಾನ, ಹಲವು ರೀತಿಯ ಷೋರೂಂ, ಸರ್ವೀಸ್‌ ಸೆಂಟರ್‌, ಖಾಸಗಿ ನರ್ಸರಿಗಳು ತಲೆಎತ್ತಿವೆ.

ಹಿಂದೆಯೂ ನಡೆದಿತ್ತು ಸರ್ವೆ: ವಿಧಾನಸಭೆ ಸದನ ಸಮಿತಿ ಸೂಚನೆಯಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರ ಆದೇಶದಂತೆ 2015ರಲ್ಲಿ ಬಾಣಸವಾಡಿ ಕೆರೆಯ ಸರ್ವೆ ನಡೆದಿತ್ತು. ಈ ಸರ್ವೆಯನ್ನು ಪೂರ್ವ ತಾಲ್ಲೂಕಿನ
ಭೂದಾಖಲೆ ಅಧಿಕಾರಿಗಳು ಹಾಗೂ ಬಿಡಿಎ ಅಧಿಕಾರಿ ಕೂಡ ಅನುಮೋದಿಸಿದ್ದರು. ತೆರವು ಕಾರ್ಯವು ನಡೆದಿತ್ತು. ಆದರೆ ಈ ಸರ್ವೆಯಂತೆ ಎಲ್ಲ ಒತ್ತುವರಿ ತೆರವಾಗಿಲ್ಲ. ಸದನ ಸಮಿತಿಗೆ ತಪ್ಪುಮಾಹಿತಿ ನೀಡಿದಂತಾಗುವುದಿಲ್ಲವೇ ಎಂಬುದು ಸ್ಥಳೀಯರ ಪ್ರಶ್ನೆ. ಕೆರೆ
ಒತ್ತುವರಿ ಬಗ್ಗೆ ಶಾಸಕ ಕೆ.ಜೆ.ಜಾರ್ಜ್‌ ಪ್ರಸ್ತಾಪಿಸಿದ್ದರು.

ಮೂಲೆಗೆ ಬಿದ್ದಿರುವ ಸೂಚನೆ: ‘ಬಾಣಸವಾಡಿ ಗ್ರಾಮದ ಸ.ನಂ. 211ರ 42 ಎಕರೆ 38 ಗುಂಟೆ ಸರ್ಕಾರಿ ಕೆರೆ ಅಂಗಳ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ’ ಎಂಬ ನಗರ ಜಿಲ್ಲಾಧಿಕಾರಿಯವರ ಆದೇಶದ ಸೂಚನಾ ಫಲಕ ಅಳವಡಿಸಿದ್ದ ಸ್ಥಳದಿಂದ ಬಹಳಷ್ಟು ಹಿಂದೆ ಸರಿದು ಮೂಲೆ ಸೇರಿದೆ. ಹಾಕಿದ್ದ ಬೇಲಿ ಕೂಡ ಕತ್ತರಿಸಿ ಖಾಸಗಿಯವರು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಜಮೀನು ಎಂಬ ಫಲಕವಿದ್ದರೂ ನಿತ್ಯವೂ ಒತ್ತುವರಿ ಹೆಚ್ಚಾಗುತ್ತಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂಬುದು ಸ್ಥಳೀಯ ವಾಸಿಗಳ ಆರೋಪ.

ಕಸ ವಿಂಗಡಣೆಗೆ ಬಳಕೆ: ಕೆರೆ ಅಭಿವೃದ್ಧಿ ಮಾಡುವ ಜವಾಬ್ದಾರಿ ಹೊತ್ತಿರುವ ಬಿಬಿಎಂಪಿ, ಮುಖ್ಯ ಆಯುಕ್ತರ ಸೂಚನೆಯನ್ನೂ ಧಿಕ್ಕರಿಸಿ ಕೆರೆ ಅಂಗಳದಲ್ಲಿರುವ ಒತ್ತುವರಿ ತೆರವು ಮಾಡುವಲ್ಲಿ ವಿಫಲರಾಗಿದ್ದಾರೆ. ಕೆರೆ ಅಂಗಳದಲ್ಲೇ ಕಸ ವಿಂಗಡಣೆ ಮಾಡುತ್ತಾರೆ. ತ್ಯಾಜ್ಯವನ್ನು ಕೆರೆಗೇ ಸುರಿಯುತ್ತಿದ್ದಾರೆ. ಬೆಂಕಿಯನ್ನೂ ಹಚ್ಚುತ್ತಿದ್ದಾರೆ. ಇನ್ನು, ಗಣೇಶ ಹಬ್ಬದ ಸಂದರ್ಭದಲ್ಲಿ ಮೂರ್ತಿಗಳ ವಿಸರ್ಜನೆಗೆ ಕೆರೆಯಲ್ಲಿ ಒಂದಷ್ಟು ಜಾಗ ಮಾಡಿ ನೀರು ತುಂಬಲಾಗಿತ್ತು. ಸ್ಥಳೀಯರ ಮುಖಂಡರಿಗೆ ಆಗ ಮಾತ್ರ ಕೆರೆ ಇಲ್ಲಿದೆ ಎಂಬ ನೆನಪಾಗಿತ್ತು. ನಂತರ, ಕೆರೆ ತ್ಯಾಜ್ಯದ ಗುಂಡಿಯಾಗಿರುವುದು ಯಾರ ಗಮನಕ್ಕೂ ಬಂದಿಲ್ಲ.

ಯಾರಿಂದ ಒತ್ತುವರಿ?

ದೇವಸ್ಥಾನ– 6.12 ಗುಂಟೆ, ಪೆಟ್ರೋಲ್‌ ಬಂಕ್‌ ಮತ್ತು ಕಟ್ಟಡಗಳು– 1 ಎಕರೆ 28.9 ಗುಂಟೆ, ಬಿಡಿಎ– ನಿವೇಶನ 12 ಎಕರೆ 33 ಗುಂಟೆ, ರಸ್ತೆ– 7 ಎಕರೆ 31 ಗುಂಟೆ, ಚರಂಡಿ– 24.08 ಗುಂಟೆ... ಇತ್ಯಾದಿಗಳಿಗೆ ‍ಒತ್ತುವರಿಯಾಗಿದೆ ಎಂದು ಬಿಬಿಎಂಪಿ ವರದಿ ಮಾಡಿದೆ.

‘ಒತ್ತುವರಿಗೆ ಅಧಿಕಾರಿಗಳ ನೆರವು’

‘ಲಿಂಗರಾಜ‍ಪುರ ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಹೋರಾಡಿ, ಅದನ್ನು ಉಳಿಸಿ ಸುಮಾರು 10 ಸಾವಿರ ಚದರ ಅಡಿಯಲ್ಲಿ ಆಸ್ಪತ್ರೆ ಕಟ್ಟಲು ನೆರವಾಗಿದ್ದೇವೆ. ಆದರೆ, ಅದೇ ರೀತಿ ಬಾಣಸವಾಡಿ ಕೆರೆ ಒತ್ತುವರಿಯನ್ನೂ ತೆರವು ಮಾಡಲಾಗಿತ್ತು. ಅದಕ್ಕೆ ಸೂಕ್ತ ಬೇಲಿ, ಯೋಜನೆ ತರದೆ ಬಿಡಿಎ, ಬಿಬಿಎಂಪಿ ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಮತ್ತೆ ಒತ್ತುವರಿಯಾಗಲು ನೆರವಾಗಿದ್ದಾರೆ’ ಎಂದು ಸ್ಥಳೀಯ ಮುಖಂಡ ಮುರಳೀಧರ್‌ ದೂರಿದರು.

‘ಆಯುಕ್ತರ ಸೂಚನೆಗೂ ಬೆಲೆ ಇಲ್ಲ’

‘ಬಿಬಿಎಂಪಿ ಆಯುಕ್ತರು ‘ವಲಯದ ಕಡೆಗೆ ಆಯುಕ್ತರ ನಡೆ’ ಎಂಬ ಹೆಸರಿನಲ್ಲಿ ಜುಲೈನಲ್ಲಿ ಈ ಭಾಗದಲ್ಲಿ ನಾಗರಿಕರ ಅಹವಾಲು ಆಲಿಸಿದ್ದರು. ಆಗ ಬಾಣಸವಾಡಿ ಕೆರೆ ಅಂಗಳದ ಒತ್ತುವರಿಯನ್ನು ಗಮನಕ್ಕೆ ತಂದಾಗ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿಶೇಷ ಆಯುಕ್ತ, ಜಂಟಿ ಆಯುಕ್ತರಾದ ಶಿಲ್ಪಾ ಸೇರಿ ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದರು. ಮೂರು ತಿಂಗಳಾದರೂ ಒಬ್ಬ ಅಧಿಕಾರಿ ಇತ್ತ ಸುಳಿದಿಲ್ಲ. ಸ್ಥಳೀಯ ಅಧಿಕಾರಿಗಳು, ಯಾರು ಸೂಚನೆ ನೀಡಿದರೂ ಕೆಲಸ ಮಾಡುತ್ತಿಲ್ಲ. ಎಲ್ಲರೂ ಒತ್ತುವರಿದಾರರ ಜೊತೆಗೆ ಶಾಮೀಲಾಗಿದ್ದಾರೆ’ ಎಂದು ಬಾಣಸವಾಡಿ ನಿವಾಸಿ ಗೋಪಾಲ ರೆಡ್ಡಿ ಆರೋಪಿಸಿದರು.

ಜಂಟಿ ಸರ್ವೆ ಅಗತ್ಯ: ತಹಶೀಲ್ದಾರ್‌

‌‘ಬಾಣಸವಾಡಿ ಕೆರೆಯ ಅಂಗಳದಲ್ಲಿ ಒತ್ತುವರಿಯನ್ನು ಒಂದು ಬಾರಿ ತಾಲ್ಲೂಕು ಆಡಳಿತ ತೆರವು ಮಾಡಿದೆ. ಮತ್ತೆ ಒತ್ತುವರಿಯಾಗಿರುವುದೂ ನಿಜ. ನಾವು ಒತ್ತುವರಿ ತೆರವು ಮಾಡಿದ ಮೇಲೆ ರಕ್ಷಣೆ ಮಾಡಿಕೊಳ್ಳುವುದು ಬಿಡಿಎ ಅಥವಾ ಬಿಬಿಎಂಪಿ ಜವಾಬ್ದಾರಿ. ಅದಾಗದಿರುವುದರಿಂದ ಮತ್ತೆ ಅತಿಕ್ರಮವಾಗಿದೆ. ಈ ಕೆರೆ ಅಂಗಳವನ್ನು ಬಿಡಿಎ, ಬಿಬಿಎಂಪಿಯೊಂದಿಗೆ ಜಂಟಿ ಸರ್ವೆ ಮಾಡಬೇಕಾಗಿದೆ. ಅವರಿಗೆ ತಿಳಿಸಲಾಗಿದೆ. ಅಲ್ಲಿಂದ ಉತ್ತರ ಬಂದಿಲ್ಲ. ಎಲ್ಲರೂ ಸೇರಿ ಜಂಟಿ ಸರ್ವೆ ಮಾಡಿದರೆ ಎಲ್ಲ ಒತ್ತುವರಿಯನ್ನೂ ತೆರವು ಮಾಡಬಹುದು’ ಎಂದು ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್‌ ಎಸ್‌. ಅಜಿತ್‌ಕುಮಾರ್‌ ರೈ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT