ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲೀಂಧ್ರ ಸೋಂಕು: ನಗರದಲ್ಲಿ ಮತ್ತಿಬ್ಬರು ಸಾವು

Last Updated 19 ಮೇ 2021, 17:08 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶಿಲೀಂಧ್ರ ಸೋಂಕಿಗೆ (ಮ್ಯುಕೋರ್‌ ಮೈಕೋಸಿಸ್‌-‌ಬ್ಯ್ಲಾಕ್ ಫಂಗಸ್‌) ಒಳಗಾದವರಲ್ಲಿ ಮತ್ತಿಬ್ಬರು ಬುಧವಾರ ಮೃತಪಟ್ಟಿದ್ದಾರೆ. ಇದರಿಂದಾಗಿ ಈವರೆಗೆ ಸಾವಿಗೀಡಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಕೋವಿಡ್‌ ಪೀಡಿತರಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ ಕೆಲವರಲ್ಲಿ ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದೆ. ಇಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನಗರದಲ್ಲಿ ಬುಧವಾರ 14 ಮಂದಿಯಲ್ಲಿ ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 17 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೋವಿಡ್‌ನಿಂದ ಚೇತರಿಸಿಕೊಂಡು ಶಿಲೀಂಧ್ರ ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ನೀಡಲು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ಗುರುತಿಸಿ, 10 ಹಾಸಿಗೆಗಳನ್ನು ಮೀಸಲಿಡಲಾಗಿತ್ತು. ಮೂರು ದಿನಗಳಲ್ಲೇ ಶಿಲೀಂಧ್ರ ಸೋಂಕಿಗೆ ಒಳಗಾದ 18 ಮಂದಿ ಅಲ್ಲಿ ದಾಖಲಾಗಿದ್ದಾರೆ. ಇದರಿಂದಾಗಿ ಅಲ್ಲಿ ಹಾಸಿಗೆ ಸಮಸ್ಯೆ ತಲೆದೋರಿದೆ. ಇನ್ನೊಂದೆಡೆ, ಸಮರ್ಪಕವಾಗಿ ಔಷಧ ಪೂರೈಕೆಯಾಗದ ಪರಿಣಾಮ ಲಭ್ಯವಿರುವ ಔಷಧವನ್ನೇ ವೈದ್ಯರು ನೀಡುತ್ತಿದ್ದಾರೆ.

‘ಆಸ್ಪತ್ರೆಗೆ ದಾಖಲಾದ ಎಲ್ಲರಿಗೂ ಶಸ್ತ್ರಚಿಕಿತ್ಸೆ ನಡೆಸಬೇಕಾದ ಅಗತ್ಯವಿಲ್ಲ. ಈ ಸೋಂಕಿಗೆ ಒಳಗಾಗುವರ ಸಂಖ್ಯೆ ಏರಿಕೆಯಾದಲ್ಲಿ ಚಿಕಿತ್ಸೆ ನೀಡುವುದು ಕೂಡ ಸವಾಲಾಗಲಿದೆ. ಅದೇ ರೀತಿ, ಔಷಧದ ಸಮಸ್ಯೆ ಕೂಡ ಎದುರಾಗುತ್ತದೆ’ ಎಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT