ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸ್ಫೋಟ ಪ್ರಕರಣ: ಮೊಬೈಲ್– ಸಿಮ್‌ ಕಾರ್ಡ್‌ ಜಜ್ಜಿದ ನಾಸಿರ್‌

Published 7 ಆಗಸ್ಟ್ 2023, 0:30 IST
Last Updated 7 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಸಂತೋಷ ಜಿಗಳಿಕೊಪ್ಪ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದುಕೊಂಡು ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರ ಟಿ. ನಾಸೀರ್, ತನ್ನ ಮೊಬೈಲ್ ಹಾಗೂ ಸಿಮ್‌ಕಾರ್ಡ್ ಜಜ್ಜಿ ಪುಡಿ ಮಾಡಿ ಸಾಕ್ಷ್ಯ ನಾಶ ಮಾಡಿರುವುದು ಸಿಸಿಬಿ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.

‘ಬೆಂಗಳೂರಿನಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಟಿ. ನಾಸೀರ್, ಜೈಲಿನಲ್ಲಿದ್ದುಕೊಂಡೇ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದ. ಪ್ರಕರಣದಲ್ಲಿ ಸಿಕ್ಕಿ ಬೀಳುವ ಭಯದಲ್ಲಿ ಮೊಬೈಲ್ ಹಾಗೂ ಸಿಮ್‌ಕಾರ್ಡ್ ನಾಶ ಮಾಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಾಸೀರ್ ವಿರುದ್ಧ ಕರ್ನಾಟಕ ಹಾಗೂ ಕೇರಳದಲ್ಲಿ 36 ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಈತನಿಗೆ ಜೀವಾವಧಿ ಶಿಕ್ಷೆಯೂ ಆಗಿದೆ. ಇದೇ ಕಾರಣಕ್ಕೆ ಈತ ಮೇಲಿಂದ ಮೇಲೆ ಭಯೋತ್ಪಾದನಾ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ. ತನಗೆ ಕಾನೂನಿನ ಭಯವೂ ಇಲ್ಲವೆಂದು ಈತ ಹೇಳುತ್ತಿದ್ದಾನೆ’ ಎಂದು ತಿಳಿಸಿವೆ.

‘ಹೆಬ್ಬಾಳ ಠಾಣೆ ವ್ಯಾಪ್ತಿಯ ಸುಲ್ತಾನ್‌ಪಾಳ್ಯದ ಮನೆಯೊಂದರ ಮೇಲೆ ಜುಲೈ 18ರಂದು ದಾಳಿ ನಡೆಸಿ, ಶಂಕಿತರಾದ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ (30) ಹಾಗೂ ಮೊಹಮ್ಮದ್ ಉಮರ್‌ನನ್ನು ಬಂಧಿಸಲಾಗಿತ್ತು. ಇವರೆಲ್ಲರಿಗೂ ಟಿ. ನಾಸೀರ್ ನಿರ್ದೇಶನ ನೀಡುತ್ತಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿತ್ತು.’

‘ಬಾಡಿ ವಾರೆಂಟ್ ಮೂಲಕ ಟಿ. ನಾಸೀರ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಹಲವು ಮಾಹಿತಿ ಬಾಯ್ಬಿಟ್ಟಿದ್ದಾನೆ. ತಾನು ಉಪಯೋಗಿಸುತ್ತಿದ್ದ ಮೊಬೈಲ್ ಹಾಗೂ ಸಿಮ್‌ಕಾರ್ಡ್‌ ನಾಶ ಮಾಡಿರುವುದಾಗಿ ತಪ್ಪೊಪ್ಪಿಕೊಳ್ಳುತ್ತಿದ್ದಾನೆ. ಮೊಬೈಲ್ ಚೂರುಗಳನ್ನು ಬೇರೆ ಬೇರೆ ಕಡೆ ಎಸೆದಿದ್ದಾನೆ. ಅವುಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

‘ಜೈಲಿನಿಂದಲೇ ಜುಲೈ 16 ಹಾಗೂ 17ರಂದು ಶಂಕಿತ ಉಗ್ರ ಮಹಮ್ಮದ್ ಉಮರ್‌ಗೆ ಕರೆ ಮಾಡಿದ್ದ ಟಿ. ನಾಸೀರ್, ಹಲವು ನಿಮಿಷ ಮಾತನಾಡಿದ್ದ. ಸ್ಫೋಟದ ಬಗ್ಗೆ ಚರ್ಚಿಸಿದ್ದ. ಮೊಬೈಲ್ ಕರೆಗಳ ಸುಳಿವು ಆಧರಿಸಿ, ಶಂಕಿತ ಉಗ್ರರನ್ನು ಸೆರೆ ಹಿಡಿಯಲಾಗಿದೆ. ಇದೇ ಕರೆಗಳು, ಪ್ರಕರಣದ ಮಹತ್ವದ ಸಾಕ್ಷ್ಯಗಳು. ಇದನ್ನು ಅರಿತಿದ್ದ ನಾಸೀರ್, ಮೊಬೈಲ್ ಹಾಗೂ ಸಿಮ್‌ಕಾರ್ಡ್‌ ಜಜ್ಜಿ ನಾಶ ಮಾಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

3 ಆ್ಯಪ್‌ಗಳ ಮೂಲಕ ಮಾತುಕತೆ

‘ಮೊಬೈಲ್‌ ಮೂಲಕ ಆರಂಭದಲ್ಲಿ ಸಾಮಾನ್ಯ ಕರೆ ಮಾಡುತ್ತಿದ್ದ ನಾಸೀರ್, ಪೊಲೀಸರಿಗೆ ಸುಳಿವು ಸಿಗಬಹುದೆಂದು ತಿಳಿದಿದ್ದ. ಮೂರು ಪ್ರತ್ಯೇಕ ಮೊಬೈಲ್‌ ಆ್ಯಪ್‌ಗಳ ಮೂಲಕ ಜೈಲಿನಿಂದ ಇತರರಿಗೆ ಕರೆ ಮಾಡುತ್ತಿದ್ದ. ಇಂಥ ಕರೆಗಳ ವಿವರಗಳನ್ನೂ ಈಗಾಗಲೇ ಸಂಗ್ರಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಜೈಲಿನಲ್ಲಿ ಮಹಜರು

‘ಐವರು ಶಂಕಿತರ ಉಗ್ರರ ಜೊತೆಯಲ್ಲಿ ಟಿ. ನಾಸೀರ್‌ನನ್ನೂ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿತ್ತು. ಇದೇ ಸಂದರ್ಭದಲ್ಲಿ ನಾಸೀರ್‌ನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದು ಮಹಜರು ನಡೆಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ನಾಸೀರ್ ಹಾಗೂ ಜುನೇದ್ ಭೇಟಿಯಾಗಿದ್ದ ಸ್ಥಳ, ಇತರೆ ಶಂಕಿತರ ಜೊತೆ ನಾಸೀರ್ ಮಾತುಕತೆ ನಡೆಸಿದ್ದ ಸ್ಥಳ ಸೇರಿದಂತೆ ಹಲವು ಕಡೆಗಳಲ್ಲಿ ಮಹಜರು ಮಾಡಲಾಗಿದೆ’ ಎಂದು ಹೇಳಿವೆ.

ಹಣದ ವಹಿವಾಟು: ದುಬೈ ಬ್ಯಾಂಕ್‌ಗೆ ಇ–ಮೇಲ್

‘ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತರ ಉಗ್ರರಿಗೆ ದುಬೈನಿಂದ ಹಣ ಬಂದಿರುವುದಕ್ಕೆ ದಾಖಲೆ ಲಭ್ಯವಾಗಿದೆ. ದುಬೈನಲ್ಲಿರುವ ಬ್ಯಾಂಕೊಂದರ ಮೂಲಕ ಶಂಕಿತರ ಖಾತೆಗಳಿಗೆ ಹಣ ಜಮೆ ಆಗಿದೆ. ಹೀಗಾಗಿ ಜಮೆ ಮಾಡಿದವರು ಯಾರು? ಅವರ ವಿಳಾಸವೇನು ? ಎಂಬುದನ್ನು ತಿಳಿಸುವಂತೆ ದುಬೈನ ಬ್ಯಾಂಕ್‌ಗೆ ಇ–ಮೇಲ್ ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಪರಪ್ಪನ ಅಗ್ರಹಾರ ಕಾರಾಗೃಹ ಬಳಿಯ ಅಂಗಡಿಯೊಂದರ ಮಾಲೀಕ ಟಿ ನಾಸೀರ್‌ಗೆ ಹಣ ನೀಡುತ್ತಿದ್ದ ಮಾಹಿತಿ ಲಭ್ಯವಾಗಿದೆ. ಕಮಿಷನ್ ಆಸೆಗಾಗಿ ಜೈಲಿನಲ್ಲಿದ್ದ ನಾಸೀರ್‌ಗೆ ಆಗಾಗ ಹಣ ಕೊಡುತ್ತಿದ್ದ ಮಾಲೀಕನ ಹಿನ್ನೆಲೆ ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿವೆ.

ಎನ್‌ಐಎ ತನಿಖೆ ಸಾಧ್ಯತೆ

‘ಪ್ರಕರಣದ ಆರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದ ಪ್ರಕರಣದ ಸಂಪೂರ್ಣ ತನಿಖೆ ಹೊಣೆಯನ್ನು ಎನ್‌ಐಎ ಅಧಿಕಾರಿಗಳು ವಹಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT