ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಪುಸ್ತಕ ಮೇಳಕ್ಕೆ ಚಾಲನೆ

Last Updated 2 ಅಕ್ಟೋಬರ್ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: ತಾಳೆಗರಿಯಲ್ಲಿ ಋಷಿ ಮುನಿಗಳು ಸೃಷ್ಟಿಸಿದ ಸಾಹಿತ್ಯದಿಂದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆವರೆಗೆ ವಿವಿಧ ವಿಷಯ, ಭಾಷೆ ಹಾಗೂ ಸಾಹಿತ್ಯ ಪ್ರಕಾರಗಳನ್ನೊಳಗೊಂಡ ಪುಸ್ತಕಗಳ ರಾಶಿ ಒಂದೇ ಸೂರಿನಡಿ ಅನಾವರಣಗೊಂಡಿದೆ.

ದಿ ಬೆಂಗಳೂರು ಬುಕ್‌ ಸೆಲ್ಲರ್ಸ್‌ ಮತ್ತು ಪಬ್ಲಿಷರ್ಸ್‌ ಅಸೋಸಿಯೇಷನ್‌ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಏಳು ದಿನಗಳ 14ನೇ ‘ಬೆಂಗಳೂರು ಪುಸ್ತಕ ಮೇಳ’ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಬುಧವಾರ ಚಾಲನೆ ನೀಡಿ, ಮಾತನಾಡಿದರು.

‘ಪುಸ್ತಕಗಳನ್ನು ಓದುತ್ತಿರುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಆನ್‌ಲೈನ್‌ನಲ್ಲಿ ಪುಸ್ತಕಗಳು ಲಭ್ಯವಾದರೂ ಕೈಯಲ್ಲಿ ಹಿಡಿದು ಓದುವಷ್ಟು ಖುಷಿ ಸಿಗುವುದಿಲ್ಲ. ಹಾಗಾಗಿ, ನಗರದ ಜನತೆ ಪುಸ್ತಕೋತ್ಸವದ ಸದುಪಯೋಗ ಪಡೆದುಕೊಳ್ಳಬೇಕು. ಅದರಲ್ಲೂ ಯುವಜನತೆಗೆ ಇದು ಮಾಹಿತಿಯ ಕಣಜವಾಗಲಿದೆ’ ಎಂದು ಹೇಳಿದರು.

ಶೇ70ರಷ್ಟು ಮಾರಾಟ ಕುಸಿತ: ಅಸೋಸಿಯೇಷನ್‌ ಅಧ್ಯಕ್ಷ ಎ.ಎನ್. ರಾಮಚಂದ್ರ, ‘ಪುಸ್ತಕೋತ್ಸವಕ್ಕೆ ಪ್ರತಿನಿತ್ಯ ಸರಾಸರಿ 4 ಸಾವಿರ ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಈ ವರ್ಷ ಕನ್ನಡ ಪುಸ್ತಕಗಳ ಮಳಿಗೆಗಳನ್ನು ಹೆಚ್ಚಿಸಲಾಗಿದೆ. ಸರ್ಕಾರ ಅಗತ್ಯ ಪ್ರೋತ್ಸಾಹ ನೀಡಿದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಪುಸ್ತಕೋತ್ಸವ ಮಾಡಲು ಸಾಧ್ಯವಾಗಲಿದೆ. ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ಪುಸ್ತಕೋತ್ಸವಕ್ಕೆ ₹ 1 ಕೋಟಿವರೆಗೆ ಅನುದಾನ ನೀಡುತ್ತವೆ. ಹೀಗಾಗಿ, ಅಲ್ಲಿ ಒಂದು ತಿಂಗಳು ಪುಸ್ತಕೋತ್ಸವ ನಡೆಯುತ್ತದೆ’ ಎಂದರು.

‘ಪುಸ್ತಕಗಳ ಮಾರಾಟದಲ್ಲಿ ಶೇ 70ರಷ್ಟು ಕುಸಿತವಾಗಿದೆ. ಆನ್‌ಲೈನ್‌ನಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗಿದೆ. ಗ್ರಂಥಾಲಯಗಳಿಗೆ ಸರ್ಕಾರ ಇ–ಪುಸ್ತಕಗಳನ್ನು ಖರೀದಿಸುವ ಬದಲು ಮುದ್ರಿತ ಪುಸ್ತಕವನ್ನು ಖರೀದಿಸಿದಲ್ಲಿ ನಮಗೂ ಪ್ರೋತ್ಸಾಹ ಸಿಗುತ್ತಿತ್ತು. ಇದೀಗ ಪ್ರಕಾಶಕರು ಹಾಗೂ ಮಾರಾಟಗಾರರು ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ’ ಎಂದು ತಿಳಿಸಿದರು.

ಶೇ 50ರವರೆಗೆ ರಿಯಾಯಿತಿ

ಪುಸ್ತಕೋತ್ಸವದಲ್ಲಿ ಕನ್ನಡ, ಇಂಗ್ಲಿಷ್, ತಮಿಳು, ತೆಲಗು, ಹಿಂದಿ ಸೇರಿದಂತೆ ವಿವಿಧ ಭಾಷೆಯ ಪುಸ್ತಕಗಳು ಲಭ್ಯ ಇವೆ.‍ಪ್ರತಿ ಪುಸ್ತಕದ ಮೇಲೆ ಶೇ 20ರಿಂದ ಶೇ 50ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಪುಸ್ತಕ ಹಾಗೂ ಆಟಿಕೆಗಳಮಳಿಗೆಗಳು ಪುಸ್ತಕೋತ್ಸವದಲ್ಲಿ ಇವೆ. ಪ್ರತಿ ಮಳಿಗೆಯಲ್ಲೂ ಡಿಜಿಟಲ್‌ ಹಣ ಪಾವತಿಗೆ ಅವಕಾಶ ನೀಡಲಾಗಿದೆ.

ಗಾಂಧಿ ಸ್ಮಾರಕ ನಿಧಿಯ ಮಳಿಗೆಯಲ್ಲಿ ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ ಹಾಗೂ ಗಾಂಧಿ ಬಗ್ಗೆ ಬೇರೆ ಲೇಖಕರು ಬರೆದಿರುವ ಪುಸ್ತಕಗಳು ಇವೆ. ಅದೇ ರೀತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ರಾಜ್ಯ ಸಾಹಿತ್ಯ ಅಕಾಡೆಮಿ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳ ಪುಸ್ತಕ ಮಳಿಗೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT