ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು 'ಕೇಂದ್ರ' | ಗೆಲುವು ತೂಗುಯ್ಯಾಲೆ: ಕೊನೆಯಲ್ಲಿ ಅರಳಿದ 'ಕಮಲ'

Published 4 ಜೂನ್ 2024, 15:21 IST
Last Updated 4 ಜೂನ್ 2024, 15:21 IST
ಅಕ್ಷರ ಗಾತ್ರ

ಬೆಂಗಳೂರು: ವಸಂತನಗರದ ಮೌಂಟ್ ಕಾರ್ಮೆಲ್‌ ಕಾಲೇಜಿನಲ್ಲಿ ಮಂಗಳವಾರ ನಡೆದ ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ತೀವ್ರ ಕುತೂಹಲ ಹಾಗೂ ಅಭ್ಯರ್ಥಿಗಳು– ಕಾರ್ಯಕರ್ತರ ಎದೆಬಡಿತ ಹೆಚ್ಚಿಸಿತ್ತು.

ಎಣಿಕೆಯ ಉದ್ದಕ್ಕೂ ತೂಗುಯ್ಯಾಲೆ ಆಡುತ್ತಿದ್ದ ಜಯವು ಕೊನೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರ ಪಾಲಾಯಿತು. ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಮನ್ಸೂರ್ ಅಲಿಖಾನ್ ಅವರು ಸೋತರು.

ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ಮತ ಎಣಿಕೆ ಹಲವು ಸುತ್ತುಗಳಲ್ಲಿ ಸವಾಲೊಡ್ಡುವಂತೆ ಸ್ಪರ್ಧೆ ಏರ್ಪಟ್ಟಿತ್ತು. ಏಣಿಕೆಯು ಹಾವು–ಏಣಿ ಆಟದಂತೆ ಏರಿಳಿತ ಕಾಣಿಸುತ್ತಿತ್ತು. ಮುನ್ನಡೆ– ಹಿನ್ನಡೆ ಆಗುತ್ತಿದ್ದಂತೆಯೇ ಪರಸ್ಪರ ಬೆಂಬಲಿತ ಕಾರ್ಯಕರ್ತರು ಕೇಕೆ ಹಾಕಿ ಸಂಭ್ರಮಿಸುತ್ತಿದ್ದರು. ಮತ ಎಣಿಕೆಯು ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ತರುತ್ತಿತ್ತು. 

ಮಂಗಳವಾರ ಬೆಳಿಗ್ಗೆ ಭದ್ರತಾ ಕೊಠಡಿ ತೆರೆದ ಮೇಲೆ ಅಂಚೆ ಮತ ಎಣಿಕೆ ಕಾರ್ಯ ನಡೆಯಿತು. ಒಟ್ಟು 2,648 ಅಂಚೆ ಮತಗಳು ಚಲಾವಣೆಗೊಂಡಿದ್ದವು. ಆ ಪೈಕಿ ಬಿಜೆಪಿ ಅಭ್ಯರ್ಥಿಗೆ 1,679 ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗೆ 840 ಅಂಚೆ ಮತಗಳು ಬಿದ್ದಿದ್ದವು. ಅದರಲ್ಲಿ 23 ನೋಟಾ ಚಲಾವಣೆಗೊಂಡಿದ್ದವು. ಇದರಲ್ಲಿ ಮೋಹನ್‌ 875 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರು.

ನಂತರ, ಇವಿಎಂ ತೆರೆದು ಎಣಿಕೆ ಆರಂಭಿಸಲಾಯಿತು. ಆರಂಭದಲ್ಲಿ 2,983 ಮತಗಳಿಂದ ಮೋಹನ್‌ ಮುನ್ನಡೆ ಕಾಯ್ದುಕೊಂಡಿದ್ದರು. ಆರಂಭಿಕ ಹಲವು ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಹೆಚ್ಚಿಸಿಕೊಳ್ಳುತ್ತಲೇ ಸಾಗಿತು.

ಸರ್ವಜ್ಞನಗರ, ಶಿವಾಜಿನಗರ, ಶಾಂತಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಣಿಕೆ ಕಾರ್ಯ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ಗೆ ಮುನ್ನಡೆ ಬರಲು ಆರಂಭಿಸಿತು. ಆಗ ಕೈ ಕಾರ್ಯಕರ್ತರು ಸಂಭ್ರಮಿಸಲು ಆರಂಭಿಸಿದರು. ಮುನ್ನಡೆಯು 68 ಸಾವಿರದಿಂದ 72,583ಕ್ಕೆ ಜಿಗಿಯಿತು. ಸಂಭ್ರಮ ಇನ್ನಷ್ಟು ಹೆಚ್ಚಾಯಿತು. ಆಗ ಎಣಿಕೆ ಕೇಂದ್ರದ ಸುತ್ತ ಕಾಂಗ್ರೆಸ್‌ ಕಾರ್ಯಕರ್ತರು ಜಮಾವಣೆಗೊಳ್ಳಲು ಆರಂಭಿಸಿದರು. ಕೊನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಲೆಕ್ಕಾಚಾರ ಉಲ್ಟಾ ಆಯಿತು.

ಕೊನೆಯಲ್ಲಿ ಚಿತ್ರಣವೇ ಬದಲು...:

ಮಹದೇವಪುರ ವಿಧಾನಸಭಾ ಕ್ಷೇತ್ರದ ಎಣಿಕೆ ಆರಂಭವಾದ ಮೇಲೆ ಬಿಜೆಪಿ ಮತ್ತೆ ಮೇಲುಗೈ ಸಾಧಿಸಿತು. ಮೋಹನ್‌ ಅವರು ಮುನ್ನಡೆ ಪಡೆದುಕೊಂಡರು. ಮುನ್ನಡೆ ಮಾಹಿತಿ ತಿಳಿಯುತ್ತಿದ್ಧಂತೆಯೇ ಹೊರಕ್ಕೆ ತೆರಳಿದ್ದ ಕಾರ್ಯಕರ್ತರು ಹಾಗೂ ಮುಖಂಡರು ಎಣಿಕೆ ಕೇಂದ್ರದ ಬಳಿಗೆ ವಾಪಸ್ಸಾದರು. ಮಹದೇವಪುರ ವಿಧಾನಸಭಾ ಕ್ಷೇತ್ರವು ಬಿಜೆಪಿಗೆ 1,18,046 ಮತಗಳ ಮುನ್ನಡೆ ತಂದು ಗೆಲುವಿನ ದಡ ಮುಟ್ಟಿಸಿತು. ಕೇಂದ್ರದಲ್ಲಿ ಮತ್ತೊಮ್ಮೆ ಕಮಲ ಅರಳುತ್ತಿದ್ದಂತೆ ಕಾರ್ಯಕರ್ತರು ಸಿಹಿ ಹಂಚಿದರು. 32,707 ಮತಗಳ ಅಂತರದಿಂದ ಗೆದ್ದ ಮೋಹನ್‌ ಅವರು ಕಾರ್ಯಕರ್ತರೊಂದಿಗೆ ಸಂಭ್ರಮಿಸಿದರು.

ಕೇಂದ್ರದ ಸುತ್ತಮುತ್ತ ಬಂದೋಬಸ್ತ್‌:

ಮತ ಎಣಿಕೆ ಕೇಂದ್ರದ ಸುತ್ತಮುತ್ತ ಭಾರಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಅಧಿಕೃತ ಗುರುತಿನ ಚೀಟಿ ಹೊಂದಿದ್ದವರಿಗೆ ಮಾತ್ರ ಪ್ರವೇಶ ಎಣಿಕೆ ಕೇಂದ್ರಕ್ಕೆ ಪ್ರವೇಶ ಕಲ್ಪಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT