ಗುರುವಾರ , ಆಗಸ್ಟ್ 11, 2022
24 °C

ಫೆಬ್ರುವರಿ ಅಂತ್ಯಕ್ಕೆ ಬೆಂಗಳೂರು ಸಿನಿಮೋತ್ಸವ: ಸಿ.ಎಂ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ ವರ್ಷ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ 13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಆಯೋಜಿಸಲು ಅನುಮತಿ ನೀಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ನೇತೃತ್ವದ ನಿಯೋಗ ಮಾಡಿದ ಮನವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹಮತ ಸೂಚಿಸಿದ್ದಾರೆ.

‘ಕೋವಿಡ್‌ ಕಾರಣದಿಂದ ಚಿತ್ರ ಮಂದಿರಗಳಿಂದ ದೂರ ಉಳಿದಿರುವ ಪ್ರೇಕ್ಷಕರನ್ನು ಮತ್ತೆ ಸೆಳೆಯಲು ಈ ಸಿನಿಮೋತ್ಸವ ಪೂರಕ ವಾತಾವರಣ ನಿರ್ಮಿಸಲಿದೆ’ ಎಂದೂ ಮುಖ್ಯಮಂತ್ರಿ ಅವರಿಗೆ ನಿಯೋಗ ಮನವರಿಕೆ ಮಾಡಿಕೊಟ್ಟಿದೆ.

12 ವರ್ಷಗಳಿಂದ ಸತತವಾಗಿ ಈ ಸಿನಿಮೋತ್ಸವ ನಡೆಯುತ್ತಿದೆ. ವಿಶ್ವದಲ್ಲಿ 5 ಸಾವಿರ ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತಿವೆ. ಆದರೆ, ಅವುಗಳಲ್ಲಿ ಕೇವಲ 45 ಚಲನಚಿತ್ರೋತ್ಸವಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿದೆ. ಇದೀಗ ಬೆಂಗಳೂರು  ಸಿನಿಮೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ದೊರೆಯುವ ಲಕ್ಷಣ ಗೋಚರಿಸುತ್ತಿವೆ. ಹೀಗಾಗಿ, ಆಯೋಜಿಸಲು ಅನುಮತಿ ನೀಡುವಂತೆ ಮತ್ತು ಅದಕ್ಕೆ ಅಗತ್ಯ ಅನುದಾನ ನೀಡುವಂತೆ ನಿಯೋಗವು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ದೇಶದಲ್ಲಿ ಕೇವಲ ನಾಲ್ಕು ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಕೇಂದ್ರ ಸರ್ಕಾರ ಗೋವಾ ಚಲನ
ಚಿತ್ರೋತ್ಸವವನ್ನು ಆಯೋಜಿಸುತ್ತದೆ. ಉಳಿದಂತೆ ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರ
ಗಳು ಚಲನಚಿತ್ರೋತ್ಸವಗಳನ್ನು ಆಯೋಜಿಸುತ್ತಿವೆ ಎಂಬ ಅಂಶವನ್ನೂ ನಿಯೋಗವು ಮುಖ್ಯಮಂತ್ರಿಯ ಗಮನಕ್ಕೆ ತಂದಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್. ಜಯರಾಜ್, ಕಲಾ ನಿರ್ದೇಶಕ ಎನ್. ವಿದ್ಯಾ
ಶಂಕರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶೃತಿ, ವಾರ್ತಾ ಇಲಾಖೆಯ ಆಯುಕ್ತ ಡಾ.ಪಿ.ಎಸ್. ಹರ್ಷ, ಪತ್ರಕರ್ತ ಮುರಳೀಧರ್ ಖಜಾನೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಿ. ಹಿಮಂತರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು