ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ್ ಪಂತ್ ವಿಶೇಷ ಸಂದರ್ಶನ| ‘ಸಮರ್ಥ ತನಿಖೆ– ಅಪರಾಧ ಕೃತ್ಯಗಳಿಗೆ ಕಡಿವಾಣ’

ನೂತನ ಪೊಲೀಸ್ ಕಮಿಷನರ್ ಕಮಲ್ ಪಂತ್ ವಿಶೇಷ ಸಂದರ್ಶನ
Last Updated 1 ಆಗಸ್ಟ್ 2020, 21:02 IST
ಅಕ್ಷರ ಗಾತ್ರ

* ಬೆಂಗಳೂರಿನ ಕಮಿಷನರ್ ಹೊಣೆ ಹೇಗನಿಸುತ್ತಿದೆ?

ಕಮಿಷನರ್ ಕಮಲ್ ಪಂತ್; ರಾಜ್ಯ ಸರ್ಕಾರ ನನಗೆ ವಹಿಸಿರುವ ಮಹತ್ತರ ಜವಾಬ್ದಾರಿಯನ್ನು ಸ್ವೀಕರಿಸಿದ ಕ್ಷಣವಿದು. ಬೆಂಗಳೂರಿನ ಜನರಿಗೆ ಹತ್ತಿರವಾಗಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವ ಅವಕಾಶವಿದು. ಇಂಥ ಅವಕಾಶ ನೀಡಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಧನ್ಯವಾದ. ನಗರದ ಜನರ ಸುರಕ್ಷತೆ ಕಾಪಾಡಲು ದಕ್ಷತೆಯಿಂದ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ

* ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸಮಯದಲ್ಲೇ ಈ ಜವಾಬ್ದಾರಿ ವಹಿಸಬೇಕಾಗಿದೆ. ಈ ಬಗ್ಗೆ ಏನಂತೀರಿ?

ನಗರದಾದ್ಯಂತ ಕೊರೊನಾ ಸೋಂಕು ಹಬ್ಬಿದೆ. ಪೊಲೀಸರೂ ಸೋಂಕಿತರಾಗಿದ್ದಾರೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇನ್ನು ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಗುಣಮುಖವಾಗಿ ಬರಲಿ ಎಂದು ಆಶಿಸುತ್ತೇನೆ. ಕೊರೊನಾ ವೈರಾಣುವಿಗೆ ಜನರು ಹೆದರಬೇಕಿಲ್ಲ. ಜನರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ನನ್ನ ಪೊಲೀಸ್ ಕುಟುಂಬ ಸದಾ ಸನ್ನದ್ಧವಾಗಿರಲಿದೆ.

* ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇವುಗಳ ನಿಯಂತ್ರಣಕ್ಕೆ ನಿಮ್ಮ ಕ್ರಮವೇನು?

ಬೆಂಗಳೂರು ದೊಡ್ಡ ನಗರ. ಇಲ್ಲಿಯ ಜನಸಂಖ್ಯೆ ಪ್ರಮಾಣವೂ ದೊಡ್ಡದು. ಠಾಣೆಗಳೂ ಹೆಚ್ಚಿವೆ. ಯಾವುದೇ ಅಪರಾಧವಾದರೂ ದೂರು ದಾಖಲಾದ ಕೂಡಲೇ ತನಿಖೆಯನ್ನು ಸಮರ್ಥವಾಗಿ ನಡೆಸಬೇಕು. ಆರೋಪಿಗಳಿಗೆ ಜಾಮೀನು ಸಿಗುವ ಅವಕಾಶಗಳು ಇರದಂತೆ ಪುರಾವೆಗಳನ್ನು ಕಲೆಹಾಕಬೇಕು. ಈ ರೀತಿಯಾದರೆ ಮಾತ್ರ ಅಪರಾಧ ಹಾಗೂ ಆರೋಪಿಗಳಿಗೆ ಕಡಿವಾಣ ಹಾಕಬಹುದು. ಇಂಥ ತನಿಖೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ.

ಕೆಲಸ ಮಾಡುತ್ತ ಹೋದಂತೆ ನಗರದ ಸ್ಥಿತಿ ತಿಳಿಯುತ್ತ ಹೋಗುತ್ತದೆ. ಕಮಿಷನರೇಟ್ ವ್ಯಾಪ್ತಿಯ ಪ್ರತಿಯೊಬ್ಬ ಸಿಬ್ಬಂದಿಯನ್ನು ಜೊತೆಯಲ್ಲಿ ಸೇರಿಸಿಕೊಂಡು ಕೆಲಸ ಮಾಡುತ್ತೇನೆ.

* ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇವುಗಳ ತಡೆಗೆ ಯಾಮ ಕ್ರಮ ಕೈಗೊಳ್ಳುತ್ತೀರಾ?

ಮಹಿಳೆ, ಮಕ್ಕಳು, ಹಿರಿಯ ನಾಗರಿಕರು ಹಾಗೂ ಎಲ್ಲ ವರ್ಗದ ಜನರಿಗೆ ಬೆಂಗಳೂರು ಸುರಕ್ಷಿತ ನಗರವಾಗಬೇಕು. ಇದಕ್ಕಾಗಿ ಪೊಲೀಸ್‌ ಇಲಾಖೆ ಹಗಲಿರುಳು ಕೆಲಸ ಮಾಡುತ್ತಿದೆ. ಅದರಲ್ಲೂ ಮಹಿಳೆ ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ತಿಂಗಳಿಗೊಮ್ಮೆ ಡಿಸಿಪಿ ಕಚೇರಿಗಳಲ್ಲಿ ಸಭೆ ನಡೆಸುತ್ತೇನೆ. ಜನರಿಂದಲೂ ಸಮಸ್ಯೆಗಳನ್ನು ಆಲಿಸುತ್ತೇನೆ. ಅಪರಾಧ ಪ್ರಕರಣಗಳ ತನಿಖೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇವೆ. ಇಂಥ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಗದಂತೆ ನೋಡಿಕೊಂಡು, ಶಿಕ್ಷೆಯಾಗುವಂತೆ ಮಾಡಿದರೆ ಉಳಿದ ಆರೋಪಿಗಳಿಗೂ ಎಚ್ಚರಿಕೆ ರವಾನೆಯಾಗಲಿದೆ

* ಬೆಂಗಳೂರು ಸೈಬರ್‌ ಅಪರಾಧಗಳ ನಗರವಾಗುತ್ತಿದೆ. ಇಂತಹ ಅಪರಾಧಗಳಿಗೆ ಕಡಿವಾಣ ಹಾಕಲು ನಿಮ್ಮ ಯೋಜನೆಗಳೇನು?

ಬೆಂಗಳೂರು ದೊಡ್ಡ ನಗರ. ತಂತ್ರಜ್ಞಾನವನ್ನು ಹೆಚ್ಚು ಅಳವಡಿಸಿಕೊಂಡಿರುವ ನಗರ. ಇಲ್ಲಿ ಬಹುತೇಕರು ನಿತ್ಯದ ಕೆಲಸಗಳಿಗೆತಂತ್ರಜ್ಞಾನ ಬಳಕೆ ಅನಿವಾರ್ಯ. ಇಂಥ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವರು, ಸೈಬರ್ ಅಪರಾಧಗಳನ್ನು ಎಸಗುತ್ತಿದ್ದಾರೆ. ಇಂಥ ಅಪರಾಧಗಳಿಗೆ ಕಡಿವಾಣ ಹಾಕಲು ಆದ್ಯತೆ ನೀಡುತ್ತೇನೆ.

ಸೈಬರ್ ಪ್ರಕರಣಗಳ ತನಿಖಾಧಿಕಾರಿಗಳು ಹಾಗೂ ತಜ್ಞರರೊಂದಿಗೆ ಚರ್ಚೆ ನಡೆಸುತ್ತೇವೆ. ಸೈಬರ್ ಅಪರಾಧ ತಡೆಗೆ ಏನೆಲ್ಲ ಮಾಡಬೇಕೆಂದು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸುತ್ತೇನೆ. ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತೇನೆ. ಇಂಥ ಪ್ರಕರಣಗಳನ್ನು ಭೇದಿಸಲು ಜನರ ಸಹಕಾರವೂ ಬೇಕಾಗುತ್ತದೆ.

* ನಗರದಲ್ಲಿ ರೌಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಕ್ರಮವೇನು?

- ರೌಡಿಗಳನ್ನು ಈಗಾಗಲೇ ಮಟ್ಟ ಹಾಕಲಾಗಿದೆ. ಪುಡಿ ರೌಡಿಗಳು ಹುಟ್ಟಿಕೊಂಡಿದ್ದಾರೆ. ಅವರ ಮೇಲೆ ಪೊಲೀಸರು ಕಣ್ಣಿಟ್ಟಿರುತ್ತಾರೆ.

* ಡ್ರಗ್ಸ್‌ ಮಾಫಿಯಾ ವಿರುದ್ಧ ಕ್ರಮ ?
- ಇಂದಿನ ಕಾಲದಲ್ಲಿ ಡ್ರಗ್ಸ್‌ ಸೇವನೆಯಿಂದ ಯುವಜನರು ದಾರಿ ತಪ್ಪುತ್ತಿದ್ದಾರೆ. ಡ್ರಗ್ಸ್ ಮಾರಾಟದ ವಿರುದ್ಧ ಪೊಲೀಸರು ಈಗಾಗಲೇ ವಿಶೇಷ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ, ಸಿಸಿಬಿ ಮಾದಕವಸ್ತು ನಿಗ್ರಹ ದಳವನ್ನು ಮತ್ತಷ್ಟು ಬಲಪಡಿಸಿ ಡ್ರಗ್ಸ್‌ ಮಾರಾಟ ನಿಯಂತ್ರಣಕ್ಕೆ ಸಜ್ಜು ಮಾಡುತ್ತೇನೆ. ಪೋಷಕರು ಸಹ ತಮ್ಮ ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳಬೇಕು

* ಬೆಂಗಳೂರು ವಾಹನಗಳ ದಟ್ಟಣೆ ನಗರವೂ ಹೌದು. ಸಂಚಾರ ವ್ಯವಸ್ಥೆ ಸುಧಾರಣೆ ಬಗ್ಗೆ ಏನಾದರೂ ನಿಮ್ಮಲ್ಲಿ ಯೋಜನೆಗಳು ಇವೆಯೇ?

ಸಂಚಾರ ವ್ಯವಸ್ಥೆ ಸುಧಾರಣೆ ಕಾಲ ಕಾಲಕ್ಕೆ ಆಗಬೇಕು. ಅಧಿಕಾರಿ ಮತ್ತು ಸಿಬ್ಬಂದಿ ಜತೆ ಚರ್ಚಿಸಿ ಮುಂದಿನ ಕ್ರಮ

***

‘ಉಗ್ರರ ಮಟ್ಟಹಾಕಲು ಸನ್ನದ್ಧ’

ದೇಶ ಹಾಗೂ ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳ ಕುರಿತ ವಿಷಯಗಳು ಆಗಾಗ ಸದ್ದು ಮಾಡುತ್ತಿರುತ್ತವೆ. ಉಗ್ರರನ್ನು ಮಟ್ಟಹಾಕಲು ಕರ್ನಾಟಕದ ಪೊಲೀಸರು ಹೆಚ್ಚು ಜಾಗೃತರಾಗಿದ್ದಾರೆ. ಜನರು ಆತಂಕಪಡುವ ಅವಶ್ಯಕತೆಯೇ ಇಲ್ಲ.

ಮಲ್ಲೇಶ್ವರ, ಚರ್ಚ್‍ಸ್ಟ್ರೀಟ್‍ನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟಗಳು ಹಾಗೂ ಗಾಯಾಳುಗಳು ಅನುಭವಿಸಿದ ಸಂಕಟ ಪೊಲೀಸ್ ಇಲಾಖೆ ಅರಿವಿನಲ್ಲಿದೆ.ರಾಷ್ಟ್ರೀಯ ತನಿಖಾ ದಳಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ರಾಜ್ಯದ ಆಂತರಿಕಾ ಭದ್ರತಾ ವಿಭಾಗ (ಐಎಸ್‍ಡಿ), ನಗರ ಉಗ್ರ ನಿಗ್ರಹ ದಳ (ಎಟಿಎಸ್) ಕೆಲಸ ಮಾಡುತ್ತಿದೆ.

– ಕಮಲ್ ಪಂತ್

***

ಅಧಿಕಾರ ಸ್ವೀಕಾರ

ರಾಜ್ಯ ಸರ್ಕಾರದ ಆದೇಶದಂತೆ ನಗರದ 36ನೇ ಪೊಲೀಸ್ ಕಮಿಷ ನರ್‌ ಆಗಿ ಕಮಲ್ ಪಂತ್ ಅವರು ಶನಿವಾರ ಅಧಿಕಾರ‌ ಸ್ವೀಕರಿಸಿದರು.

ಇನ್ಫೆಂಟ್ರಿ ರಸ್ತೆಯಲ್ಲಿರುವ ಕಮಿ ಷನರ್ ಕಚೇರಿಗೆ ಬೆಳಿಗ್ಗೆ 11.30ಕ್ಕೆ ಬಂದಿದ್ದ ಕಮಲ್ ಪಂತ್ ಅವರು ಕಮಿಷನರ್ ಭಾಸ್ಕರ್ ರಾವ್ ಅವ ರಿಂದ ಬ್ಯಾಟನ್ ಪಡೆದು ಅಧಿಕಾರ ವಹಿಸಿಕೊಂಡರು.

1990ನೇ ಐಪಿಎಸ್ ತಂಡದ ಅಧಿಕಾರಿಗಳಾದ ಇಬ್ಬರೂ ಪರಸ್ಪರ ಹೂಗುಚ್ಛ ನೀಡಿ,ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿ ಕೊಂಡರು. ಕಮಲ್ ಪಂತ್ ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಹಾಜರಿದ್ದರು.

ಭಾವುಕರಾದ ಭಾಸ್ಕರ್ ರಾವ್: ಪೊಲೀಸ್ ವಾದ್ಯ ಮೇಳ ಮತ್ತು ಕವಾಯತು ತಂಡದ ಸದಸ್ಯರು ಗೌರವ ವಂದನೆ ಸಲ್ಲಿಸುವಾಗ ಭಾಸ್ಕರ್ ರಾವ್ ಭಾವುಕರಾದರು. ಕಚೇರಿಯಿಂದ ನಿರ್ಗಮಿಸುವ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬೆಂಗಳೂರಿನ ಜನರಿಂದ ನನಗೆ ಉತ್ತಮ ಸಹಕಾರ ಸಿಕ್ಕಿದೆ. ಅದನ್ನು ನಾನು ಯಾವತ್ತೂ ಮರೆ ಯುವುದಿಲ್ಲ. ಬೆಂಗಳೂರಿನ ಮಹಾ ಜನತೆಗೆ ನನ್ನ ತುಂಬು ಹೃದಯದ ಧನ್ಯವಾದಗಳು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT