ಬೆಂಗಳೂರು: ಬಿಬಿಎಂಪಿ ನಿಗದಿಪಡಿಸಿರುವ ಬಾಡಿಗೆಯನ್ನು ಪಾವತಿಸದ ಎರಡು ಅಂಚೆ ಕಚೇರಿಗಳಿಗೆ ಬೀಗ ಹಾಕಲಾಗಿದೆ.
ಸೇಂಟ್ ಜಾನ್ಸ್ ರಸ್ತೆಯಲ್ಲಿ ಬಿಬಿಎಂಪಿ ಸ್ವತ್ತಿನ 1,665 ಚದರಡಿ ವಿಸ್ತೀರ್ಣದ ಮಳಿಗೆ ಯಲ್ಲಿರುವ ಅಂಚೆ ಕಚೇರಿ 2014ರ ಏಪ್ರಿಲ್‌ನಿಂದಲೂ ಹಳೆಯ ಬಾಡಿಗೆಯನ್ನೇ ಪಾವತಿಸುತ್ತಿದೆ. ಪರಿಷ್ಕೃತ ಬಾಡಿಗೆ ಪಾವತಿಸಲು ಹಲವು ಬಾರಿ ನೋಟಿಸ್ ನೀಡಿದ್ದರೂ ಸ್ಪಂದಿಸಿರಲಿಲ್ಲ. ಒಟ್ಟು ₹88.91 ಲಕ್ಷ ಬಾಡಿಗೆ ಬಾಕಿ ಇದೆ. ಹೀಗಾಗಿ, ಪೂರ್ವ ವಲಯ ಆಯುಕ್ತರ ಆದೇಶದಂತೆ ಪಾಲಿಕೆ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಮಳಿಗೆಗೆ ಬೀಗ ಹಾಕಿದ್ದಾರೆ.
ವಸಂತನಗರ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ 214 ಚದರಡಿ ಯಲ್ಲಿರುವ ಅಂಚೆ ಕಚೇರಿಯು 2016ರ ಜನವರಿಯಿಂದ ಪರಿಷ್ಕೃತ ಬಾಡಿಗೆಯನ್ನು ಪಾವತಿ ಸಿರಲಿಲ್ಲ. ₹10.80 ಲಕ್ಷ ಬಾಕಿ ಇದೆ. ಹೀಗಾಗಿ, ಸೋಮವಾರ ಬೆಳಿಗ್ಗೆ ಈ ಮಳಿಗೆಗೂ ಪಾಲಿಕೆ ಸಿಬ್ಬಂದಿ ಬೀಗ ಹಾಕಿದ್ದಾರೆ ಎಂದು ಸಹಾಯಕ ಕಂದಾಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.