ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ವಿಚಾರಕ್ಕೆ ಬಾಲಕನ ಕೊಲೆ

Last Updated 2 ಫೆಬ್ರುವರಿ 2020, 19:27 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿ ಬಳಿಯ ಮರಸೂರು ರೈಲ್ವೆ ಬ್ರಿಡ್ಜ್‌ ಸಮೀಪದ ಹಳಿ ಮೇಲೆ ರವಿತೇಜ್ (17) ಎಂಬಾತನ ಮೃತದೇಹ ಪತ್ತೆಯಾಗಿದ್ದು, ಆತನ ಸ್ನೇಹಿತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಚಂದಾಪುರ ಬಳಿಯ ಬನಹಳ್ಳಿ ನಿವಾಸಿಎಂ.ಪಿ.ಮಂಜುನಾಥ್ ಎಂಬುವರ ಮಗನಾಗಿದ್ದ ರವಿತೇಜ್, 9ನೇ ತರಗತಿವರೆಗೆ ಓದಿದ್ದ. ಮೂರು ವರ್ಷಗಳಿಂದ ಮನೆಯಲ್ಲೇ ಇದ್ದ.

‘ರವಿತೇಜ್ ಸಾವಿನ ಬಗ್ಗೆಬೈಯಪ್ಪನಹಳ್ಳಿ ರೈಲ್ವೆ ಠಾಣೆಗೆ ದೂರು ನೀಡಿರುವ ತಂದೆ,‘ಮಗನ ಸ್ನೇಹಿತನಾಗಿರುವ ಹಳೇ ಚಂದಾಪುರದ ರಾಕೇಶ್ ಅಲಿಯಾಸ್ ಡ್ಯಾನಿ (19) ಎಂಬಾತನೇ ಈ ಕೊಲೆ ಮಾಡಿದ್ದಾನೆ’ ಎಂದು ಆರೋಪಿಸಿದ್ದಾರೆ. ರಾಕೇಶ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಹಣ ಹಂಚಿಕೆ ವಿಚಾರವಾಗಿ ಜಗಳ: ‘ರವಿತೇಜ್ ತನಗಿಂತ ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವನಾಗಿದ್ದರಾಕೇಶ್ ಜೊತೆ ಸ್ನೇಹ ಬೆಳೆಸಿದ್ದ. ನಿತ್ಯವೂ ಆತನ ಜೊತೆ ಓಡಾಡುತ್ತಿದ್ದ. ಇಬ್ಬರೂ ಸೇರಿ ಮೊಬೈಲ್ ಕಳವು ಮಾಡಿದ್ದರು. ಅದರ ಮಾರಾಟದಿಂದ ಹಣ ಬಂದಿತ್ತು. ಅದನ್ನು ಹಂಚಿಕೊಳ್ಳುವ ಬಗ್ಗೆ ಜಗಳವಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಜ.30ರಂದು ರವಿತೇಜ್‌ನ ಮನೆ ಬಳಿ ಹೋಗಿದ್ದ ರಾಕೇಶ್,ಮೊಬೈಲ್ ಹಣ ಹಂಚಿಕೆ ವಿಚಾರವಾಗಿ ನಡೆದ ಜಗಳದ ಬಗ್ಗೆ ತಂದೆಗೆ ತಿಳಿಸಿದ್ದ.ಯಾರನ್ನೂಸುಮ್ಮನೇ ಬಿಡುವುದಿಲ್ಲವೆಂದು ಬೆದರಿಕೆಯೊಡ್ಡಿ ಹೊರಟು ಹೋಗಿದ್ದ.ಸಂಜೆ 4ರ ವೇಳೆಗೆ ರವಿತೇಜ್ ಮೊಬೈಲ್‌ಗೆ ಕರೆ ಬಂದಿತ್ತು. ಹೊರಗಡೆ ಹೋಗಿ ಬರುವುದಾಗಿ ತಂದೆಗೆ ಹೇಳಿ ಆತನೂ ಮನೆಯಿಂದ ತೆರಳಿದ್ದ’ ಎಂದು ಮೂಲಗಳು ಹೇಳಿವೆ.

‘ಸಂಜೆಯಾದರೂ ವಾಪಸು ಬಂದಿರಲಿಲ್ಲ. ಮೊಬೈಲ್‌ಗೆ ತಂದೆ ಕರೆ ಮಾಡಿದಾಗ, ಡ್ಯಾನಿ ಜೊತೆ ಮರಸೂರು ರೈಲ್ವೆ ಬ್ರಿಡ್ಜ್‌ ಹತ್ತಿರ ಇರುವುದಾಗಿ ರವಿತೇಜ್ ಹೇಳಿದ್ದ. ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ.’ ‘ಜ. 31ರಂದು ಬೆಳಿಗ್ಗೆ ಮರಸೂರು ರೈಲ್ವೆ ಬ್ರಿಡ್ಜ್‌ ಬಳಿ ರವಿತೇಜ್‌ನ ಮೃತದೇಹ ಬಿದ್ದಿತ್ತು. ಸ್ಥಳದಲ್ಲಿ ಮೊಬೈಲ್‌ ಸಿಕ್ಕಿತ್ತು. ತಂದೆಗೆ ಕರೆ ಮಾಡಿ ಬೌರಿಂಗ್ ಆಸ್ಪತ್ರೆಗೆ ಕರೆಸಿಕೊಂಡೆವು. ಅವರು ಶವ ಗುರುತಿಸಿದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಕುಡಿದು ಬಂದು ಜಗಳ ತಂದೆಯನ್ನೇ ಕೊಂದ ಮಗ

ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿದೊಡ್ಡಚೌಡಪ್ಪ (56) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಅವರ ಮಗ ಗಹನ್ (19) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಗಣಪತಿನಗರದ ನಿವಾಸಿ ದೊಡ್ಡ ಚೌಡಪ್ಪ ಬ್ಯಾಂಕೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಿದ್ದರು. ಗಹನ್ ಡಿಪ್ಲೊಮಾ ಓದುತ್ತಿದ್ದ. ‘ದೊಡ್ಡ ಚೌಡಪ್ಪ ನಿತ್ಯವೂ ಮದ್ಯ ಕುಡಿದು ಬಂದು ಪತ್ನಿ ಹಾಗೂ ಮಕ್ಕಳ ಜೊತೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತು ಗಹನ್ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಜ. 28ರಂದು ದೊಡ್ಡಚೌಡಪ್ಪ ಜಗಳ ತೆಗೆದಿದ್ದ. ಅದೇ ಸಂದರ್ಭದಲ್ಲೇ ಗಹನ್ ದೊಣ್ಣೆಯಿಂದ ಹೊಡೆದಿದ್ದ. ಮೈಮೇಲೆ ಗಾಯವಾಗಿ ರಕ್ತ ಸೋರುತ್ತಿದ್ದರೂ ದೊಡ್ಡ ಚೌಡಪ್ಪ ಕೊಠಡಿಗೆ ಹೋಗಿ ಮಲಗಿದ್ದರು. ಮರುದಿನ ಪತ್ನಿ ಕೊಠಡಿಗೆ ಹೋದಾಗ ಅವರು ಮೃತಪಟ್ಟಿದ್ದು ಗೊತ್ತಾಗಿತ್ತು. ಠಾಣೆಗೆ ಮಾಹಿತಿ ನೀಡಿದ್ದರು. ಮನೆಗೆ ಹೋಗಿದ್ದ ಸಿಬ್ಬಂದಿಗೆ ಅಸಹಜ ಸಾವೆಂದು ದೂರು ನೀಡಿದ್ದರು’ ಎಂದರು.

‘ಮೃತದೇಹದ ಮೇಲೆ ಗಾಯದ ಗುರುತುಗಳಿದ್ದವು. ಮರಣೋತ್ತರ ಪರೀಕ್ಷೆ ವರದಿ ಬಂದಾಗ ಇದೊಂದು ಕೊಲೆ ಎಂಬುದು ತಿಳಿಯಿತು. ಗಹನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT