ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಲೇಸರ್‌ ಸಂಶೋಧನಾ ಕೇಂದ್ರ ಲೋಕಾರ್ಪಣೆ

ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಾಲೆಕ್ಯುಲಾರ್‌ ಬಯಾಲಜಿ ಪ್ರಯೋಗಾಲಯ ಆರಂಭ
Last Updated 25 ಏಪ್ರಿಲ್ 2022, 11:29 IST
ಅಕ್ಷರ ಗಾತ್ರ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನೂತನವಾಗಿ ಆರಂಭಿಸುವ ಲೇಸರ್‌ ಸಂಶೋಧನಾ ಕೇಂದ್ರ ಹಾಗೂ ಅತ್ಯಾಧುನಿಕ ಮಾಲೆಕ್ಯುಲರ್‌ ಬಯಾಲಜಿ ಪ್ರಯೋಗಾಲಯವನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸೋಮವಾರ ಉದ್ಘಾಟಿಸಿದರು.

ಸೌಂದರ್ಯ ದಂತ ವಿಜ್ಞಾನ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆಗೂ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

‘ಈ ಲೇಸರ್‌ ಸಂಶೋಧನಾ ಕೇಂದ್ರದಲ್ಲಿ ಹಾರ್ಡ್‌ ಟಿಷ್ಯು ಲೇಸರ್‌ ಉಪಕರಣ ( ಸುಮಾರು ₹ 34 ಲಕ್ಷ ವೆಚ್ಚ) ಹಾಗೂ ಸಾಫ್ಟ್‌ ಟಿಷ್ಯು ಲೇಸರ್‌ ಉಪಕರಣವನ್ನು (₹ 15 ಲಕ್ಷ ವೆಚ್ಚ) ಅಳವಡಿಸಲಾಗಿದೆ. ಬಾಯಿ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು, ಹಲ್ಲಿನ ಹುಳುಕುಗಳನ್ನು ಸರಿಪಡಿಸಲು, ಶಸ್ತ್ರಚಿಕಿತ್ಸೆ ಮತ್ತು ಹಲ್ಲಿನ ನರಗಳ ಚಿಕಿತ್ಸೆಗೆ ಈ ಯಂತ್ರಗಳು ಪ್ರಯೋಜನಕಾರಿ. ಬಾಯಿಯ ಸೌಂದರ್ಯ (ಏಸ್ಥೆಟಿಕ್‌) ವರ್ಧನೆ ಚಿಕಿತ್ಸೆಯೂ ಇಲ್ಲಿ ಲಭ್ಯ. ದಂತವಿಜ್ಞಾನಕ್ಕೆ ಸಂಬಂಧಿಸಿ ಲೇಸರ್‌ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚವಾಗುತ್ತದೆ. ಆದರೆ, ನಮ್ಮಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯಬಹುದು. ಮಧ್ಯಮ ವರ್ಗದ ಹಾಗೂ ಬಡರೋಗಿಗಳಿಗೆ ಇದು ಅನುಕೂಲಕರವಾಗಿದೆ’ ಎಂದುಕನ್ಸರ್ವೇಟಿವ್ ಡೆಂಟಿಸ್ಟ್ರಿ ಮತ್ತು ಎಂಡೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಎನ್‌.ಕಿರಣ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯವು ಈ ಲೇಸರ್‌ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದೆ. ಇಂಥಹ ಸೌಕರ್ಯ ಹೊಂದಿರುವ ದಕ್ಷಿಣ ಭಾರತದ ಮೊದಲ ಸರ್ಕಾರಿ ಆಸ್ಪತ್ರೆ ನಮ್ಮದು. ಸರ್ಕಾರಿ ಆಸ್ಪತ್ರೆಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಏಸ್ಥೆಟಿಕ್ ಡೆಂಟಿಸ್ಟ್ರಿ ಸ್ಥಾಪನೆಯಾಗಿರುವುದು ಇದೇ ಮೊದಲು’ ಎಂದರು.

ಬಾಯಿ ಆರೋಗ್ಯ ಕಾಳಜಿಯ ಮಹತ್ವ ಸಾರುವುದರಲ್ಲಿ ಪ್ರಮುಖ ಪಾತ್ರವಹಿಸಿದ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪನಾ ಸದಸ್ಯ ಡಾ.ಎಸ್‌.ರಾಮಚಂದ್ರ ಅವರ ಪ್ರತಿಮೆಯನ್ನು ಅ‌ನಾವರಣಗೊಳಿಸಲಾಯಿತು.

ಅತ್ಯಾಧುನಿಕ ಮಾಲೆಕ್ಯುಲರ್‌ ಬಯಾಲಜಿ ಪ್ರಯೋಗಾಲಯದಲ್ಲಿ ಆರ್‌ಟಿಪಿಸಿಆರ್‌, ಮಲ್ಟಿಪ್ಲೆಕ್ಸ್‌ ಪಿಸಿಆರ್‌, ಡಿಎನ್‌ಎ ಸರಣಿ, ಇನ್‌ ಸಿಟು ಹೈಬ್ರಿಡೈಜೇಷನ್‌ ಮುಂತಾದ ತಂತ್ರಜ್ಞಾನ ಬಳಕೆಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಬ್ಯಾಕ್ಟಿರಿಯಾ ಮತ್ತು ವೈರಸ್‌ಗಳಂತಹ ರೂಪಾಂತರಿ ತಳಿಗಳ ಹಾಗೂ ಹೊಸ ಬಗೆಯ ಸೂಕ್ಷ್ಮಾಣುಜೀವಿಗಳ ಪತ್ತೆಗೆ ಇದು ಸಹಕಾರಿ.ಇದರಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ನಿಖರ ಚಿಕಿತ್ಸೆ ಒದಗಿಸಲು ಇದು ನೆರವಾಗಲಿದೆ.

ಸಂಸದ ಪಿ.ಸಿ. ಮೋಹನ್ ಹಾಗೂ ಭಾರತೀಯ ದಂತ ಪರಿಷತ್ತಿನ ಅಧ್ಯಕ್ಷರಾದ ಡಾ.ದಿಬ್ಯೇಂದು ಮಜುಂದಾರ್ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಮತ್ತು ಡೀನ್‌ ಡಾ.ಸಹನಾ ಶ್ರೀನಾಥ್‌ ಅತಿಥಿಗಳಾಗಿದ್ದರು.

ದಂತ ಚಿಕಿತ್ಸೆ ಸಂಚಾರ ಘಟಕ ಲೋಕಾರ್ಪಣೆ

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಬಾಯಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಲು ಹಾಗೂ ಹಲ್ಲಿನ ಚಿಕಿತ್ಸೆ ಒದಗಿಸಲು ಸುಸಜ್ಜಿತದಂತ ಚಿಕಿತ್ಸೆ ಸಂಚಾರ ಘಟಕವನ್ನು ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಸಜ್ಜುಗೊಳಿಸಿದೆ. ಈ ವಾಹನವನ್ನು ಡಾ.ಸುಧಾಕರ್‌ ಲೋಕಾರ್ಪಣೆ ಗೊಳಿಸಿದರು.

‘ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಸಹಭಾಗಿತ್ವದಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ನೆರವಿನಿಂದ ಈ ವಾಹನವನ್ನು ಸಜ್ಜುಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ತೆರಳಿ ಹಲ್ಲಿನ ಹುಳುಕು, ವಸಡಿನ ತೊಂದರೆಗಳ ತಪಾಸಣೆ ನಡೆಸಲು ಮತ್ತು ಚಿಕಿತ್ಸೆ ನೀಡಲು, ಬಾಯಿ ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಹಾಗೂ ಈ ರೋಗ ಲಕ್ಷಣ ಹೊಂದಿದವರಿಗೆ ಕೌನ್ಸೆಲಿಂಗ್ ನೀಡಲು ಈ ವಾಹನ ಬಳಸುತ್ತೇವೆ. ಈ ವಾಹನಕ್ಕೆ ₹ 50 ಲಕ್ಷ ವೆಚ್ಚವಾಗಿದೆ’ ಎಂದು ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಪುರಾಣಿಕ್‌ ಮಾಹಿತಿ ನೀಡಿದರು.

‘ಈ ವಾಹನದಲ್ಲಿ ಸುಸಜ್ಜಿತ ದಂತ ಚಿಕಿತ್ಸೆ ಕುರ್ಚಿಗಳು, ಹೆಚ್ಚುವರಿಯಾಗಿ ಅಳವಡಿಸಬಹುದಾದ ಮತ್ತೆರಡು ದಂತ ಚಿಕಿತ್ಸೆ ಕುರ್ಚಿಗಳು, ರೆಫ್ರಿಜರೇಟರ್‌, ಎಕ್ಸ್‌–ರೇ ಯಂತ್ರ, ತುರ್ತು ಚಿಕಿತ್ಸೆಗೆ ಆಮ್ಲಜನಕ ಸಿಲಿಂಡರ್‌, ಹವಾನಿಯಂತ್ರಣ ವ್ಯವಸ್ಥೆಯನ್ನು ಈ ವಾಹನವು ಹೊಂದಿದೆ. ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಟಿ.ವಿಯೂ ಇದೆ. 12 ಮಂದಿ ತಜ್ಞರು ಹಾಗೂ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 12 ಮಂದಿ ಈ ವಾಹನದಲ್ಲಿ ಪ್ರಯಾಣ ಮಾಡಬಹುದು’ ಎಂದು ವಿಭಾಗದ ಸಹಪ್ರಾಧ್ಯಾಪಕಿ ಡಾ.ಯಶೋದಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT