ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚಾಯಿತು ಹಣ, ಸರಿಯಾಗಲಿಲ್ಲ ಕೆರೆ!

ಈಗಲೂ ಮುಂದುವರಿದಿದೆ ಮಾಲಿನ್ಯ l ಆರು ಕೆರೆಗಳಷ್ಟೇ ಆರೋಗ್ಯಯುತ l ಸೇರುತ್ತಲೇ ಇದೆ ಕೊಳಚೆ ನೀರು
Last Updated 27 ಜನವರಿ 2020, 9:09 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾಲಿಕೆ ವ್ಯಾಪ್ತಿಯಲ್ಲಿ 169 ಕೆರೆಗಳನ್ನು ನಿರ್ವಹಿಸಲಾಗುತ್ತಿದೆ. ಈ ಪೈಕಿ 75 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 19 ಕೆರೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. ಉಳಿದ 75 ಕೆರೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ.’

ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರು ಜ. 23ರಂದು ಮಾಡಿರುವ ಟ್ವೀಟ್‌ ಇದು. ಪಾಲಿಕೆ 75 ಕೆರೆಗಳನ್ನು ಅಭಿವೃದ್ಧಿಪಡಿಸಿದ್ದೇನೋ ನಿಜ. ಆದರೆ, ಅವುಗಳ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ಅಧ್ಯಯನ ವರದಿ ಕನ್ನಡಿ ಹಿಡಿಯುತ್ತದೆ. ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿ 10 ವರ್ಷಗಳ ಈಚೆಗೆ ಪುನರುಜ್ಜೀವನಗೊಳಿಸಲಾದ 45 ಕೆರೆಗಳನ್ನು ಐಐಎಸ್ಸಿಯ ಪರಿಸರ ಅಧ್ಯಯನ ಕೇಂದ್ರ (ಸಿಇಎಸ್‌) ವಿಜ್ಞಾನಿಗಳಾದ ಸಿನ್ಸಿ ವಿ., ಅಸುಲಭ ಕೆ.ಎಸ್‌. ಅವರನ್ನು ಒಳಗೊಂಡ ಟಿ.ವಿ.ರಾಮಚಂದ್ರ ನೇತೃತ್ವದ ತಂಡ ಅಧ್ಯಯನಕ್ಕೆ ಒಳಪಡಿಸಿದೆ. ಈ ಅಧ್ಯಯನ ವರದಿಯಲ್ಲಿ ಕಂಡುಬಂದ ಅಂಶಗಳು ಕೆರೆ ಪುನರುಜ್ಜೀವನದ ಬಗ್ಗೆ ಬಿಬಿಎಂಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂಬುದನ್ನು ಸಾರಿ ಹೇಳುತ್ತಿವೆ.

ಪುನರುಜ್ಜೀವನಗೊಂಡ ಶೇ 87ರಷ್ಟು ಕೆರೆಗಳ ನೀರಿನ ಗುಣಮಟ್ಟ ಈಗಲೂ ಕಳಪೆಯಾಗಿಯೇ ಇದೆ. ಈ ಕೆರೆಗಳಲ್ಲಿ ಪೋಷಕಾಂಶಗಳ ಪ್ರಮಾಣ ಹಾಗೂ ಸಾವಯವ ಪದಾರ್ಥಗಳು ಹೇರಳ ಪ್ರಮಾಣದಲ್ಲಿವೆ. ಇವುಗಳಲ್ಲಿ ಈಗಲೂ ಆಲ್ಗೆಗಳು ವ್ಯಾಪಿಸಿಕೊಂಡಿವೆ ಹಾಗೂ ಜಲೀಯ ಸಸ್ಯಗಳು ವಿಪರೀತವಾಗಿ ಬೆಳೆಯುತ್ತಿವೆ ಎಂಬುದನ್ನು ಈ ವರದಿ ಬೊಟ್ಟುಮಾಡಿದೆ.

ಪುನರುಜ್ಜೀವನದ ಬಳಿಕವೂ ಒಳ ಚರಂಡಿಗಳ ಕೊಳಚೆ ನೀರು ಹಾಗೂ ಕೈಗಾರಿಕೆಗಳ ತ್ಯಾಜ್ಯನೀರು ಜಲಕಾಯಗಳ ಒಡಲು ಸೇರುತ್ತಿದೆ. ಹಾಗಾಗಿಯೇ ಅವುಗಳ ಗುಣಮಟ್ಟ ಸುಧಾರಣೆ ಸಾಧ್ಯವಾಗಿಲ್ಲ. ಕೊಳಚೆ ನೀರು ಯಾವುದೇ ಕಾರಣಕ್ಕೂ ಕೆರೆಗಳ ಒಡಲನ್ನು ಸೇರಲೇಬಾರದು. ಇದಕ್ಕೆ ಕಟ್ಟುನಿಟ್ಟಾದ ವ್ಯವಸ್ಥೆ ರೂಪಿಸದಿದ್ದರೆ ಕೆರೆ ಪುನರುಜ್ಜೀವನಕ್ಕೆ ಮಾಡುವ ವೆಚ್ಚ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತೆ ಎಂದು ಐಐಎಸ್ಸಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೆರೆ ಪುನರುಜ್ಜೀವನದ ಉದ್ದೇಶ ಅದರ ಒಟ್ಟಾರೆ ಗುಣಮಟ್ಟ ಹೆಚ್ಚು ಮಾಡುವ ಉದ್ದೇಶವನ್ನು ಹೊಂದಿರಬೇಕು. ಜನರನ್ನು ಮೂರ್ಖರನ್ನಾಗಿಸಲು ಪುನರುಜ್ಜೀವನ ಮಾಡಬಾರದು. ಬಿಡುಗಡೆಯಾದ ಹಣವನ್ನು ಖರ್ಚು ಮಾಡುವುದಷ್ಟೇ ಬಿಬಿಎಂಪಿಯ ಉದ್ದೇಶದಂತೆ ತೋರುತ್ತಿದೆ. ಜಾಗಿಂಗ್‌ ಹಾಗೂ ವಿಹಾರಪಥ ನಿರ್ಮಿಸುವುದನ್ನೇ ಕೆರೆ ಅಭಿವೃದ್ಧಿ ಎಂದು ತಿಳಿದಿದೆ. ಅದು ಹಾಗಲ್ಲ. ಕೆರೆಯ ಪರಿಸರ ವ್ಯವಸ್ಥೆಯನ್ನು ಮೊದಲು ಅರ್ಥ ಮಾಡಿಕೊಳ್ಳದಿರುವುದೇ ಈ ವೈಫಲ್ಯಕ್ಕೆ ಕಾರಣ. ವೈಜ್ಞಾನಿಕ ವಿಧಾನ ಅನುಸರಿಸದ ಹೊರತು ಕೆರೆಗಳ ಪುನರುಜ್ಜೀವನದ ಉದ್ದೇಶ ಸಾಕಾರಗೊಳ್ಳಲು ಸಾಧ್ಯವೇ ಇಲ್ಲ ಎಂದು ವಿಜ್ಞಾನಿಗಳು ಕಿವಿ ಹಿಂಡಿದ್ದಾರೆ.

ಕೆರೆಗಳ ಅಭಿವೃದ್ಧಿಗಾಗಿ ಸರ್ಕಾರಬಿಬಿಎಂಪಿಗೆ ಮತ್ತೆ ₹ 335 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವ ಕೆರೆಗಳಾದರೂ ಗುಣಮಟ್ಟ ಕಾಯ್ದುಕೊಳ್ಳುವಂತಾಗಬೇಕು ಎಂಬುದೇ ನಾಗರಿಕರ ಆಶಯ.

ಕೆರೆ ಪುನರುಜ್ಜೀವನ ವಿಧಾನದ ಲೋಪಗಳು

* ಕೆರೆಯ ಕಾರ್ಯ ಚಟುವಟಿಕೆಯನ್ನು (ಪರಿಸರ ಹಾಗೂ ಜಲ ವಿಜ್ಞಾನ) ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು.

* ಪುನರುಜ್ಜೀವನ ಎಂದರೆ ಮಂಜೂರಾದ ಅನುದಾನ ಖರ್ಚು ಮಾಡುವುದು ಎಂದು ಭಾವಿಸಿರುವುದು. ಕೆರೆಯ ಅಗತ್ಯಗಳ ವಿಶ್ಲೇಷಣೆ ಹಾಗೂ ವೈಜ್ಞಾನಿಕ ಮೌಲ್ಯಮಾಪನ ನಡೆಯುತ್ತಿಲ್ಲ.

* ಮಾಲಿನ್ಯ ನಿವಾರಣೆ ಸಮಗ್ರ ಕ್ರಮ ಕೈಗೊಳ್ಳದಿರುವುದು; ಅನೇಕ ವರ್ಷಗಳಿಂದ ಸಂಗ್ರಹವಾಗಿರುವ ಕಶ್ಮಲಯುಕ್ತ ಹೂಳನ್ನು ಭಾಗಶಃ ಮಾತ್ರ ತೆರವು ಮಾಡಲಾಗುತ್ತಿದೆ.

* ಕಶ್ಮಲಯುಕ್ತ ಹೂಳನ್ನು ಕೆರೆ ದಂಡೆ ಬಲಪಡಿಸಲು ಹಾಗೂ ದ್ವೀಪ ನಿರ್ಮಾಣಕ್ಕೆ ಬಳಸುವುದು. ಇದರಿಂದಾಗಿ ಮಾಲಿನ್ಯ ಉಂಟುಮಾಡುವ ರಾಸಾಯನಿಕಗಳು ಮತ್ತೆ ಕೆರೆಯ ಒಡಲಿಗೆ ಸೋರಿಕೆಯಾಗುತ್ತವೆ.

* ಅಭಿವೃದ್ಧಿಪಡಿಸಿದ ಬಳಿಕ ಮಾಲಿನ್ಯಕಾರಕಗಳು ಮತ್ತೆ ಕೆರೆಯನ್ನು ಸೇರದಂತೆ ತಡೆಯದಿರುವುದು.

* ಕೆರೆಯಂಚಿನ ಸಸ್ಯಗಳನ್ನು ಹಾಗೂ ಜವುಗು ಪ್ರದೇಶವನ್ನು ನಾಶಪಡಿಸಿರುವುದು.

* ಪರಿಸರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯಗಳ ಬದಲು ಭೌತಿಕ ಕಾಮಗಾರಿಗಳಿಗಷ್ಟೇ ಪ್ರಾಧಾನ್ಯ ನೀಡುವ ಮೂಲಕ ಕೆರೆಗಳನ್ನು ಸಿಮೆಂಟ್‌ ತೊಟ್ಟಿಗಳನ್ನಾಗಿ ಪರಿವರ್ತಿಸಿರುವುದು.

* ವಾಯುವಿಹಾರ ಮತ್ತು ಜಾಗಿಂಗ್‌ಪಥ ನಿರ್ಮಾಣಕ್ಕೆ ಹಾಗೂ ಅಂದ ಹೆಚ್ಚಿಸುವ ಕಾರ್ಯಗಳಿಗೆ ಅನಗತ್ಯ ಮಹತ್ವ ನೀಡುತ್ತಿರುವುದು.

ಜಲಕಾಯದ ಪುನರುಜ್ಜೀವನ ಹೀಗಿರಲಿ

* ಮಲಿನಗೊಂಡ ಹೂಳನ್ನು ಸಂಪೂರ್ಣ ತೆರವುಗೊಳಿಸಬೇಕು. ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಹಾಗೂ ಮಲಿನಮುಕ್ತಗೊಳಿಸಲು ಇದು ಸಹಕಾರಿ.

* ಮೂಲ ಭೌಗೋಳಿಕ ರೂಪದಲ್ಲಿ ಇಳಿಜಾರನ್ನು ಗುರುತಿಸಿ, ಅದರ ಆಧಾರದಲ್ಲಿ ವೈಜ್ಞಾನಿಕ ರೀತಿಯಲ್ಲಿ ಹೂಳೆತ್ತಬೇಕು

* ಹೂಳನ್ನು ದಂಡೆ ಬಲಪಡಿಸಲು, ದ್ವೀಪ ನಿರ್ಮಿಸಲು ಬಳಸಬಾರದು. ಇದರಿಂದ ಮಲಿನಕಾರಕ ಮತ್ತೆ ಕೆರೆಗೆ ಸೇರುವ ಅಪಾಯವಿದೆ.

* ಸಂಪೂರ್ಣ ಹೂಳೆತ್ತಿರುವುದನ್ನು ಟೋಟಲ್‌ ಸ್ಟೇಷನ್‌ ಸರ್ವೇ ಮೂಲಕ ಖಾತರಿಪಡಿಸಿಕೊಳ್ಳಬೇಕು

* ಮಾಲಿನ್ಯ ಉಂಟುಮಾಡಿದವರಿಂದಲೇ ದಂಡ ವಸೂಲಿ ಮಾಡಬೇಕು.

* ಕೆರೆಯಂಗಳಕ್ಕೆ, ರಾಜಕಾಲುವೆಗಳಿಗೆ ಕಸ ಹಾಗೂ ಕಟ್ಟಡದ ಅವಶೇಷ ಸುರಿಯುವುದನ್ನು ತಡೆಯಬೇಕು.

* ತ್ಯಾಜ್ಯನೀರನ್ನು ಸಂಪೂರ್ಣ ಸಂಸ್ಕರಣೆಗೆ ಒಳಪಡಿಸದೆ ಕೆರೆ ಸೇರಲು ಅವಕಾಶ ಕಲ್ಪಿಸಬಾರದು.

* ಕೊಳಚೆ ನೀರು ಸಂಸ್ಕರಣೆಗೆ ವಿಕೇಂದ್ರೀಕೃತ ವಿಧಾನವನ್ನು ಅನುಸರಿಸಬೇಕು. ಸಂಸ್ಕರಿಸಿದ ಕೊಳಚೆ ನೀರನ್ನು ಆದಷ್ಟು ಸ್ಥಳೀಯ ಮಟ್ಟದಲ್ಲೇ ಮರುಬಳಕೆ ಮಾಡಬೇಕು.

* ಕೆರೆಗೆ ನೀರು ಹರಿದು ಬರುವ ಹಾಗೂ ಹೊರ ಹೋಗುವ ಪ್ರದೇಶಗಳಲ್ಲಿರುವ ಅಡೆತಡೆಗಳನ್ನು ನಿವಾರಿಸಬೇಕು.

* ಕೆರೆಯಂಗಳ, ರಾಜಕಾಲುವೆ ಹಾಗೂ ಮೀಸಲು ಪ್ರದೇಶಗಳ ಒತ್ತುವರಿಗಳನ್ನು ರಾಜಕೀಯ ಒತ್ತಡಗಳಿಗೆ ಮಣಿಯದೆ ಮುಲಾಜಿಲ್ಲದೇ ತೆರವುಗೊಳಿಸಬೇಕು

* ಸಲಹಾಸಂಸ್ಥೆಗಳು, ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳ ನಡುವಿನ ಅಕ್ರಮ ನಂಟಿಗೆ ಇತಿಶ್ರೀ ಹಾಡಬೇಕು

* ಕೆರೆ ಪುನರುಜ್ಜೀವನಗೊಳಿಸಿದ ಗುತ್ತಿಗೆದಾರರು ಕನಿಷ್ಠ ಐದು ವರ್ಷ ನಿರ್ವಹಣೆ ಮಾಡುವುದನ್ನು ಕಡ್ಡಾಯಗೊಳಿಸಬೇಕು

* ನೀರಿನ ಮೇಲ್ಮೈನಲ್ಲಿ ಸಂಗ್ರಹವಾಗುವ ಜಲೀಯಸಸ್ಯಗಳನ್ನು ಆಗಾಗ ತೆರವುಗೊಳಿಸಬೇಕು

* ಕೆರೆಯ ನಿರ್ವಹಣೆ ವಿಕೇಂದ್ರೀಕರಣಗೊಳ್ಳಬೇಕು. ಕೆರೆ ಸಮಿತಿ ರಚಿಸುವ ಮೂಲಕ ಜನರ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಬೇಕು.

ನಿರಂತರ ನಿಗಾ – ಆನ್‌ಲೈನ್‌ ಪೋರ್ಟಲ್‌ ರೂಪಿಸಿ

* ಸ್ಥಳೀಯ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹಾಗೂ ಸ್ಥಳೀಯರ ಬಳಗ ರಚಿಸಿ ಕೆರೆ ಮೇಲೆ ಸದಾ ನಿಗಾ ಇಡುವ ವ್ಯವಸ್ಥೆ ರೂಪಿಸಬೇಕು

* ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಹಾಗೂ ಕೆರೆಯ ನೀರಿನ ಗುಣಮಟ್ಟವನ್ನು (ಭೌತಿಕ, ರಾಸಾಯನಿಕ ಹಾಗೂ ಜೈವಿಕ) ಆಗಾಗ ತಪಾಸಣೆ ಮಾಡಬೇಕು. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಒದಸಗಿಬೇಕು.

* ನಗರದ ಕೆರೆಗಳ ಮೇಲೆ ನಿಗಾ ಇಡುವುದಕ್ಕಾಗಿಯೇ ಆನ್‌ಲೈನ್‌ ಪೋರ್ಟಲ್‌ ರೂಪಿಸಬೇಕು.

ಸೂಕ್ಷ್ಮ ನೀತಿ ಮತ್ತು ಅನುಷ್ಠಾನ

ರಂಜಕ ಬಳಕೆ ನಿಷೇಧಿಸಿ: ಡಿಟರ್ಜೆಂಟ್‌ ಉತ್ಪಾದನೆಗೆ ರಂಜಕ ಬಳಕೆ ನಿಷೇಧಿಸುವುದರಿಂದ ಕೆರೆಯಲ್ಲಿ ನೊರೆ ಸಮಸ್ಯೆಯನ್ನು ಹಾಗೂ ಪೋಷಕಾಂಶಗಳ ಪ್ರಮಾಣ ವಿಪರೀತ ಹೆಚ್ಚಾಗುವುದನ್ನು (ಯೂಟ್ರಿಫಿಕೇಷನ್‌) ತಡೆಯಬಹುದು.

ಭೂದಾಖಲೆ ಸಂಪೂರ್ಣ ಡಿಜಿಟಲಿಕರಣ: ಕೆರೆ, ಮೈದಾನ, ಉದ್ಯಾನ ಮುಂತಾದ ಸಾರ್ವಜನಿಕ ಪ್ರದೇಶಗಳ ಎಲ್ಲ ಭೌಗೋಳಿಕ ದಾಖಲೆಗಳನ್ನೂ ಡಿಜಿಟಲೀಕರಣ ಮಾಡಬೇಕು. ಈ ಮಾಹಿತಿ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿರಬೇಕು.

ದಂಡಂ ದಶಗುಣಂ: ಯಾರು ಮಲಿನಗೊಳಿಸುತ್ತಾರೆ ಅವರಿಂದಲೇ ದಂಡ ವಸೂಲಿ (1974ರ ಜಲ ಕಾಯ್ದೆ) ಮಾಡುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು

ಸ್ಥಳೀಯವಲ್ಲದ ಸಸ್ಯ ಬೇಡ: ಕೆರೆಯಂಗಳದಲ್ಲಿ ಹಾಗೂ ಜಲಾನಯನ ಪ್ರದೇಶದ ಆಯ್ದ ಬಯಲು ಪ್ರದೇಶಗಳಲ್ಲಿ ಸ್ಥಳೀಯ ಜಲೀಯ ಸಸ್ಯಗಳನ್ನು ಮಾತ್ರ ಬೆಳೆಸಬೇಕು

ನಿರ್ಮಾಣ ಬೇಡ: ಜಲಾನಯನ ಪ್ರದೇಶಗಳ ಕಣಿವೆ ವಲಯಗಳಲ್ಲಿ ನಿರ್ಮಾಣ ಚಟುವಟಿಕೆಗೆ ಅವಕಾಶ ಕಲ್ಪಿಸಬಾರದು

ಐಐಎಸ್ಸಿ ವರದಿಯ ಮುಖ್ಯಾಂಶಗಳು

(ಪುನರುಜ್ಜೀವನಗೊಂಡ 45 ಕೆರೆಗಳ ಅಧ್ಯಯನ ವರದಿ)

ಶೇ 53ರಷ್ಟು ಕೆರೆಗಳ ಸ್ಥಿತಿ ಈಗಲೂ ತೀರಾ ಚಿಂತಾಜನಕ

ಶೇ 34ರಷ್ಟು ಕೆರೆಗಳ ಸ್ಥಿತಿ ಕೆಟ್ಟದಾಗಿದೆ

ಶೇ 13ರಷ್ಟು ಕೆರೆಗಳು ಗುಣಮಟ್ಟವನ್ನು ಕಾಪಾಡಿಕೊಂಡಿವೆ

ಚೆನ್ನಾಗಿರುವ ಕೆರೆಗಳು: ಜಕ್ಕೂರು, ಕೆಂಪಾಂಬುಧಿ, ದೇವಸಂದ್ರ 1, ಉಲ್ಲಾಳ, ಅಂದ್ರಹಳ್ಳಿ, ಅಗರ

ಕಳಪೆ ಕೆರೆಗಳು: ಚೊಕ್ಕಸಂದ್ರ, ಕಟ್ಟಿಗೆಹಳ್ಳಿ, ನರಸೀಪುರ 20, ಕೊಡಿಗೆಹಳ್ಳಿ, ಕಟ್ಟಿಗೇನಹಳ್ಳಿ, ನರಸೀಪುರ 26, ಸೌಳುಕೆರೆ, ಸ್ಯಾಂಕಿ, ಯಡಿಯೂರು, ರಾಚೇನಹಳ್ಳಿ, ಹಲಸೂರು, ವಿಜಿನಾಪುರ, ಮಂಗಮ್ಮನಪಾಳ್ಯ, ಯಲಹಂಕ, ದೊರೆಕೆರೆ

ತೀರಾ ಕಳಪೆ ಕೆರೆಗಳು: ಕೋಗಿಲು, ಅಂಬಲೀಪುರ ಮೇಲಿನ ಕೆರೆ, ಕಸವನಹಳ್ಳಿ, ತಿರುಮೇನಹಳ್ಳಿ 2, ಹರಳೂರು, ಚಿನ್ನಪ್ಪನಹಳ್ಳಿ, ಹೆರೋಹಳ್ಳಿ, ಮುನ್ನೇನಕೊ‌ಳಾಲು, ಪರಪ್ಪನ ಅಗ್ರಹಾರ, ಗರುಡಾಚಾರ ಪಾಳ್ಯ, ಜೆ.ಪಿ.ಉದ್ಯಾನ, ಶೀಲವಂತಕೆರೆ, ಕೈಕೊಂಡ್ರಹಳ್ಳಿ, ಸೀಗೇಹಳ್ಳಿ, ಬಸಾಪುರ 2, ಉತ್ತರಹಳ್ಳಿ, ಅಲ್ಲಾಳಸಂದ್ರ, ಮಾಲಗಾಳ, ಚೊಕ್ಕನಹಳ್ಳಿ, ದೇವರಬೀಸನಹಳ್ಳಿ, ಕೌದೇನಹಳ್ಳಿ, ದೀಪಾಂಜಲಿ ನಗರ, ಪುಟ್ಟೇನಹಳ್ಳಿ, ಅಂಬಲೀಪುರ ಕೆಳಗಿನ ಕೆರೆ

ಅಂಕಿ ಅಂಶ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳು- 210

ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಕೆರೆಗಳು-169

ಬಿಡಿಎಯಿಂದ ಪಾಲಿಕೆಗೆ ಹಸ್ತಾಂತರವಾಗುತ್ತಿರುವ ಕೆರೆಗಳು-38

ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿರುವ ಕೆರೆಗಳು- 19

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT