ಗುರುವಾರ , ಜುಲೈ 7, 2022
20 °C
ಮಾನ್ಯತಾ ಟೆಕ್‌ಪಾರ್ಕ್ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ

ಮೇಲ್ಸೇತುವೆ ಜೋಡಣೆ: ಸಂಚಾರಕ್ಕೆ ತಿಣುಕಾಟ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೊರ ವರ್ತುಲ ರಸ್ತೆಯ ನಾಗವಾರ ವೃತ್ತ ಮತ್ತು ಮರಿಯಣ್ಣಪಾಳ್ಯ ವೃತ್ತಗಳಲ್ಲಿರುವ ಮೇಲ್ಸೇತುವೆ ಜೋಡಣೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಸಂಚಾರ ದಟ್ಟಣೆ ನಡುವೆ ವಾಹನ ಸವಾರರು ನಿತ್ಯ ತಿಣುಕಾಡುತ್ತಿದ್ದಾರೆ.‌

ಈ ಎರಡೂ ವೃತ್ತಗಳಲ್ಲಿ ಮೇಲ್ಸೇತುವೆಗಳು ಈ ಹಿಂದೆಯೇ ನಿರ್ಮಾಣವಾಗಿವೆ. ಈ ಎರಡು ಜಂಕ್ಷನ್‌ಗಳ ನಡುವೆ ಮಾನ್ಯತಾ ಟೆಕ್ ಪಾರ್ಕ್ ಇದ್ದು, ಅಲ್ಲಿನ ಎಲ್ಲಾ ಉದ್ಯೋಗಿಗಳು ಕೋವಿಡ್‌ ಪೂರ್ವದಲ್ಲಿ ಕಚೇರಿಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು. ಹೊರ ವರ್ತುಲ ರಸ್ತೆಯಲ್ಲಿ ಈ ಎರಡು ಜಂಕ್ಷನ್ ದಾಟುವುದೆಂದರೆ ಸಾಹಸದ ಕೆಲಸವಾಗಿತ್ತು. ಬೆಳಿಗ್ಗೆ ಮತ್ತು ಸಂಜೆಯ ಸಂಚಾರ ದಟ್ಟಣೆ ಸಂದರ್ಭದಲ್ಲಿ ಈ ವೃತ್ತಗಳನ್ನು ದಾಟಲು ಗಂಟೆಗಟ್ಟಲೆ ಸಮಯ ಬೇಕಾಗಿತ್ತು.

ಟೆಕ್ ಪಾರ್ಕ್ ಉದ್ಯೋಗಿಗಳು ಹೆಬ್ಬಾಳ ಕಡೆಗೆ ಹೋಗಬೇಕೆಂದರೆ ನಾಗವಾರ ವೃತ್ತಕ್ಕೆ ಹೋಗಿ ತಿರುಗಿಸಿಕೊಂಡು ಬರಬೇಕು. ಕೆ.ಆರ್.ಪುರ ಕಡೆಯಿಂದ ಬರುವ ಉದ್ಯೋಗಿಗಳು ಮರಿಯಣ್ಣನಪಾಳ್ಯ ವೃತ್ತದವರೆಗೆ ಸಾಗಿ, ಅಲ್ಲಿ ಯೂ–ಟರ್ನ್ ಪಡೆದು ಮಾನ್ಯತಾ ಟೆಕ್ ಪಾರ್ಕ್‌ಗೆ ಮರಳಬೇಕಿದೆ. ಇದರಿಂದಾಗಿ ಇಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿತ್ತು.

ಇದಕ್ಕೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಮತ್ತು ಮಾನ್ಯತಾ ಟೆಕ್ ಪಾರ್ಕ್ ಸಹಭಾಗಿತ್ವದಲ್ಲಿ ಯೋಜನೆಯೊಂದನ್ನು ರೂಪಿಸಿ ಸದ್ಯ ಅನುಷ್ಠಾನಗೊಳಿಸಲಾಗುತ್ತಿದೆ. ಮರಿಯಣ್ಣಪಾಳ್ಯ ವೃತ್ತದ ಮೇಲ್ಸೇತುವೆ ಮತ್ತು ನಾಗವಾರ ವೃತ್ತದ ಮೇಲ್ಸೇತುವೆಗಳನ್ನು ಜೋಡಿಸುವ ಮತ್ತೊಂದು ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಈ ಮೇಲ್ಸೇತುವೆಯಿಂದ ಮಾನ್ಯತಾ ಟೆಕ್‌ ಪಾರ್ಕ್‌ಗೆ ನೇರವಾಗಿ ಇಳಿಯಲು ಮತ್ತು ಹತ್ತಲು ಎರಡು ಲೂಪ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡರೆ ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ಮತ್ತು ಮಾನ್ಯತಾ ಟೆಕ್ ಪಾರ್ಕ್ ಉದ್ಯೋಗಿಗಳ ಸಂಚಾರ ಸಮಸ್ಯೆಗೂ ಪರಿಹಾರ ದೊರಕಲಿದೆ.

ಮರಿಯಣ್ಣಪಾಳ್ಯದಲ್ಲಿನ ಮೇಲ್ಸೇತುವೆಗೆ ಹೊಸ ಸೇತುವೆ ಜೋಡಣೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ನಾಗವಾರ ವೃತ್ತದಲ್ಲಿ ಕಾಮಗಾರಿ ಈಗಷ್ಟೇ ಅರಂಭವಾಗಿದೆ. ಈ ಕಾಮಗಾರಿ ನಿರ್ವಹಿಸಲು ಎರಡೂ ವೃತ್ತದಲ್ಲಿ ಈಗಾಗಲೇ ಇರುವ ಮೇಲ್ಸೇತುವೆಯ ಒಂದು ಭಾಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಏಕಮುಖ ಸಂಚಾರ ಇದ್ದ ಕಡೆಯೇ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.

‘ಒಂದೇ ಪಥದಲ್ಲಿ ವಾಹನಗಳು ಸಾಲುಗಟ್ಟಿ ತೆರಳಬೇಕಾಗಿದ್ದು, ದಟ್ಟಣೆಗೆ ಕಾರಣವಾಗಿದೆ. ಐ.ಟಿ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿರುವ ಸಂದರ್ಭದಲ್ಲೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳದೆ ಐ.ಟಿ ಕಂಪನಿಗಳು ಪರಿಪೂರ್ಣವಾಗಿ ಆರಂಭವಾದರೆ ಈ ಹೊರ ವರ್ತುಲ ರಸ್ತೆಯ ಸಂಚಾರ ನರಕವಾಗಲಿದೆ’ ಎನ್ನುತ್ತಾರೆ ಸ್ಥಳೀಯರು.

ಮೇಲ್ಸೇತುವೆಯ ಒಂದು ಭಾಗದಲ್ಲೇ ಎರಡೂ ಕಡೆ ಹೋಗುವ ವಾಹನಗಳು ಸಂಚರಿಸುತ್ತಿವೆ. ದಟ್ಟಣೆಯಾಗಿ ವಾಹನಗಳು ಗಂಟೆಗಟ್ಟಲೆ ನಿಲ್ಲುತ್ತಿವೆ. ಆ ಸಂದರ್ಭದಲ್ಲಿ ಮಳೆ ಬಂದರೆ ದ್ವಿಚಕ್ರ ವಾಹನ ಸವಾರರು ಮೇಲ್ಸೇತುವೆ ಮೇಲೆ ಆಶ್ರಯ ಪಡೆಯಲು ತಾಣವಿಲ್ಲ. ಮಳೆಯಲ್ಲಿ ತೋಯ್ಯುವುದು ಅನಿವಾರ್ಯ ಎಂದು ನಾಗವಾರದ ಸುರೇಶ್ ಹೇಳಿದರು.

ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕರಿಗಾಗಿ ಮತ್ತೊಂದು ಲೂಪ್

‘ಅಷ್ಟೋ ಕಾಮಗಾರಿಯನ್ನು ಮಾನ್ಯತಾ ಟೆಕ್‌ಪಾರ್ಕ್‌ನಿಂದಲೇ ನಿರ್ವಹಿಸುತ್ತಿದ್ದು, ಬಿಬಿಎಂಪಿಯಿಂದ ಯಾವುದೇ ಹಣ ಖರ್ಚು ಮಾಡುತ್ತಿಲ್ಲ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ರಸ್ತೆ ನಿರ್ವಹಣೆ) ಬಿ.ಎಸ್. ಪ್ರಹ್ಲಾದ್ ತಿಳಿಸಿದರು.

ಎರಡು ಲೂಪ್‌ಗಳು ಟೆಕ್‌ಪಾರ್ಕ್ ಆವರಣದೊಳಗೆ ಇಳಿಯಲಿವೆ. ಇವುಗಳಲ್ಲದೇ ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತೊಂದು ಲೂಪ್ ಅನ್ನು ಹೆಚ್ಚುವರಿಯಾಗಿ ನಿರ್ಮಾಣ ಮಾಡಲು ಹೊಸ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಕೋವಿಡ್ ಇದ್ದರೂ ಕಾಮಗಾರಿ ನಿರ್ವಹಿಸಲಾಗಿದೆ. ಒಪ್ಪಂದದಂತೆ 2022ರ ಜ. 31ರೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ ಎಂದರು. ಇದೇ ಮಾರ್ಗದಲ್ಲಿ ಮೆಟ್ರೊ ಮಾರ್ಗ ಕೂಡ ಬರಲಿದೆ. ಹಾಗಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದಿಂದಲೂ ಕಾಮಗಾರಿಗೆ ಎಲ್ಲಾ ರೀತಿಯ ಅನುಮತಿ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು