ಶನಿವಾರ, ಜನವರಿ 23, 2021
24 °C

PV Web Exclusive: ರಾಜಕಾಲುವೆಯಲ್ಲಿ ಗಂಗಾವತರಣ!

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

Prajavani

ನಗರ ನಿವಾಸಿಗಳ ಅನಾದರ ಹಾಗೂ ಆಡಳಿತ ಯಂತ್ರದ ಬೇಜವ್ದಾರಿಯಿಂದ ಕೊಚ್ಚೆ ತುಂಬಿಕೊಂಡು ಅಧ್ವಾನಗೊಂಡಿರುವ ರಾಜಕಾಲುವೆಗಳನ್ನು ಗತವೈಭವಕ್ಕೆ ಮರಳಿಸುವ ‘ನಾಗರಿಕರ ನೀರ ಹಾದಿ’ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ರಾಜಕಾಲುವೆಗಳನ್ನು ಸಹಜ ಸ್ಥಿತಿಗೆ ತರುವ ಮೂಲಕ ಅವುಗಳನ್ನು ಪ್ರೇಕ್ಷಣೀಯ ತಾಣಗಳನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆ ಇದು ಎಂಬುದು ಸರ್ಕಾರ ಅಂಬೋಣ. ಈ ಹಿಂದೆ ಸರ್ಕಾರ ಕೈಗೊಂಡಿದ್ದ ಅರ್ಕಾವತಿ ಪುನರುಜ್ಜೀವನ ಕಾರ್ಯಕ್ರಮದಂತೆಯೇ ಈ ಯೋಜನೆಯೂ ‘ಹಳ್ಳ’ಹಿಡಿಯಲಿದೆಯೇ? ಅಥವಾ ₹ 1.39 ಕೋಟಿ ಜನರಿರುವ ಮಹಾನಗರದಲ್ಲೂ ನೀರಿನ ಸುಸ್ಥಿರ ನಿರ್ವಹಣೆ ವಿಚಾರದಲ್ಲಿ ಮಹತ್ತರ ಬದಲಾವಣೆಗೆ ಮೇಲ್ಪಂಕ್ತಿ ಹಾಕಲು ಸಾಧ್ಯ ಎಂಬ ಮಾದರಿಯನ್ನು ಜಗತ್ತಿಗೆ ತೋರಿಸಿಕೊಡಲಿದೆಯೋ ಕಾದು ನೋಡಬೇಕಿದೆ.

ಬೆಂಗಳೂರು: ನಗರ ನಿವಾಸಿಗಳ ಅನಾದರ ಹಾಗೂ ಆಡಳಿತ ಯಂತ್ರದ ಬೇಜವ್ದಾರಿಯಿಂದ ಕೊಚ್ಚೆ ತುಂಬಿಕೊಂಡು ಅಧ್ವಾನಗೊಂಡಿರುವ ರಾಜಕಾಲುವೆಗಳನ್ನು ಗತವೈಭವಕ್ಕೆ ಮರಳಿಸುವ ‘ನಾಗರಿಕರ ನೀರ ಹಾದಿ’ ಎಂಬ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ನಗರದಲ್ಲಿ ನೀರಿನ ಸುಸ್ಥಿರ ನಿರ್ವಹಣೆಯ ಜೀವನಾಡಿಗಳಾದ ರಾಜಕಾಲುವೆಗಳಲ್ಲಿ ಮತ್ತೆ ಗಂಗಾವತರಣ ಮಾಡುವ ಸಾಹಸದ ಮೊದಲ ಹೆಜ್ಜೆ ಇದು. 

ನಗರದ ಕೆರೆಗಳ ಅಧ್ವಾನದ ಬಗ್ಗೆ ಜನರ ಕೂಗು, ನ್ಯಾಯಾಲಯಗಳ ಛಿಮಾರಿಗಳ ಬಳಿಕ ಎಚ್ಚೆತ್ತುಕೊಂಡು ಸರ್ಕಾರ ರೂಪಿಸಿರುವ ಕಾರ್ಯಕ್ರಮವಿದು. ರಾಜ್ಯದ ರಾಜಧಾನಿಯ ಸಾವಿರಾರು ಕೆರೆಗಳಿಗೆ ಮಳೆ ನೀರನ್ನು ಹರಿಸುತ್ತಿದ್ದ ರಾಜಕಾಲುವೆಗಳನ್ನು ಸಹಜ ಸ್ಥಿತಿಗೆ ತರುವುದರ ಜೊತೆಗೆ ಅವುಗಳನ್ನು ಪ್ರೇಕ್ಷಣೀಯ ತಾಣಗಳನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಲಿದೆ ಎಂಬುದು ಸರ್ಕಾರ ಅಂಬೋಣ.

ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಹಾಗೂ ಈ ನಗರದ ಕೊಳಕನ್ನು ಜಾಹೀರು ಮಾಡುತ್ತಿರುವಂತಹ ಕೆ.ಆರ್‌.ಮಾರುಕಟ್ಟೆ ಪರಿಸರದಿಂದ ಬೆಳ್ಳಂದೂರುವರೆಗೆ ಹರಿಯುವ 11.5 ಕಿ.ಮೀ ಉದ್ದದ ರಾಜಕಾಲುವೆಯನ್ನೇ ಈ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕಾಗಿ ಬಿಬಿಎಂಪಿ ಆಯ್ಕೆ ಮಾಡಿದೆ. ಕೋರಮಂಗಲ ಕಣಿವೆಯಲ್ಲಿರುವ ಈ ರಾಜಕಾಲುವೆಯನ್ನು ₹ 169 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತದೆ.

ರಾಜಕಾಲುವೆಗೆ ಎಳ್ಳಿನಿತೂ ಕೊಳಚೆ ನೀರು ಸೇರಲು ಬಿಡದೆ, ಅದನ್ನು ಮಳೆ ನೀರಿನ ಹರಿವಿಗೆ ಮಾತ್ರ ಬಳಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಬೇಸಿಗೆಯಲ್ಲಿ ಶುದ್ಧೀಕರಿಸಿದ ತ್ಯಾಜ್ಯ ನೀರು ಇದರಲ್ಲಿ ಹರಿಯಲಿದೆ. ನೀರು ಹರಿಯುವ ಮಾರ್ಗದ ಮರುಪರಿಶೀಲನೆ, ದುರಸ್ತಿ, ಮರುವಿನ್ಯಾಸ, ನಿರ್ಮಾಣ ತ್ಯಾಜ್ಯನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪನೆ ಮುಂತಾದ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ರಾಜಕಾಲುವೆಗಳನ್ನು ಪ್ರೇಕ್ಷಣೀಯಗೊಳಿಸಲೂ ಕ್ರಮ ಕೈಗೊಳ್ಳಲಾಗುತ್ತದೆ. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020–21 ಸಾಲಿನ ಬಜೆಟ್‌ನಲ್ಲಿ ಬೆಂಗಳೂರಿನ ರಾಜಕಾಲುವೆ ಜಾಲದ ತಪ್ಪಿದ ಕೊಂಡಿಗಳನ್ನು ಸರಿಪಡಿಸಲು ಹಾಗೂ ಮಳೆಗಾಲದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗುವುದನ್ನು ತಪ್ಪಿಸಲು ಹೊಸ ಕಾರ್ಯಕ್ರಮವೊಂದನ್ನು ಪ್ರಕಟಿಸಿದ್ದರು. ಇದಕ್ಕಾಗಿ ₹ 200 ಕೋಟಿ ಅನುದಾನ ಮೀಸಲಿಟ್ಟಿದ್ದರು. ಈ ಅನುದಾನ ಬಳಸಿ ‘ನಾಗರಿಕರ ನೀರ ಹಾದಿ’ ಯೋಜನೆ ರೂಪಿಸಲಾಗಿದೆ. 2020ನೇ ಸಾಲಿನ ಕೊನೆಯ ದಿನ (ಡಿ. 31) ಆರ್ಥಿಕ ಇಲಾಖೆ ಈ ಯೋಜನೆಗೆ ಅನುಮೋದನೆಯನ್ನೂ ನೀಡಿದೆ.

₹ 50 ಕೋಟಿಯನ್ನು ಈ ಯೋಜನೆಯ ಪ್ರಾರಂಭಿಕ ಅನುದಾನ (ಟೋಕನ್‌ ಗ್ರ್ಯಾಂಟ್‌) ರೂಪದಲ್ಲಿ ಹಂಚಿಕೆ ಮಾಡಲಾಗಿದೆ. 2021–22 ಸಾಲಿ ಬಜೆಟ್‌ನಲ್ಲಿ ₹ 119 ಕೋಟಿಯನ್ನು ಒದಗಿಸಲು ಅನುಮೋದನೆ ನೀಡಲಾಗಿದೆ. ಇದರ ನಿರ್ವಹಣೆಗೆ ತಗಲುವ ₹ 4.25 ಕೋಟಿಯನ್ನು ಬಿಬಿಎಂಪಿ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಪರಿಸರ ಸಂರಕ್ಷಣೆಗೆ ಮೀಸಲಿಟ್ಟ ಮೊತ್ತದಲ್ಲಿ ಬಳಸಲಿದೆ.  

'ಮಳೆನೀರು ಹರಿಯಬೇಕಾದ ರಾಜಕಾಲುವೆಗಳಲ್ಲಿ ಈಗ ಕೊಳಚೆ ನೀರು ಮಾತ್ರ ಹರಿಯುತ್ತಿದೆ. ಕೆಲವೆಡೆ ಜನ ಕಸವನ್ನೂ ತಂದು ರಾಜಕಾಲುವೆಗಳಿಗೆ ಸುರಿಯುತ್ತಾರೆ. ಇದಕ್ಕೆಲ್ಲ ಕಡಿವಾಣ ಹಾಕಲಿದ್ದೇವೆ. ರಾಜಕಾಲುವೆಯ ಪಕ್ಕ ಕಿರುಉದ್ಯಾನಗಳು, ನಡಿಗೆ ಪಥಗಳನ್ನೂ ಅಭಿವೃದ್ಧಿಪಡಿಸಿ, ಇವುಗಳನ್ನು ಜೀವವೈವಿಧ್ಯ ತಾಣವನ್ನಾಗಿ ರೂಪಿಸಲಿದ್ದೇವೆ. ಈ ಕಾಲುವೆಯಲ್ಲಿ ಹರಿಯುವ ನೀರು ಒಂಚೂರು ದುರ್ವಾಸನೆಯಿಂದ ಕೂಡಿರಬಾರದು. ಹಾಗೆ ಅಭಿವೃದ್ಧಿಪಡಿಸಲಾಗುತ್ತದೆ’ ಎನ್ನುತ್ತಾರೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌.

ಕಾಮಗಾರಿಯ ಗುತ್ತಿಗೆ ಪಡೆವ ಕಂಪನಿಯೇ ನಿರ್ಮಿಸಿ, ಬಳಸಿ ಹಸ್ತಾಂತರಿಸುವ (ಬಿಒಟಿ) ಕಾರ್ಯಕ್ರಮದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಕಾಮಗಾರಿಯ ಗುತ್ತಿಗೆ ಪಡೆದ ಸಂಸ್ಥೆಯೇ ಐದು ವರ್ಷಗಳ ಕಾಲ ಈ ಜಾಲದ ನಿರ್ವಹಣೆಯನ್ನೂ ನೋಡಿಕೊಳ್ಳಲಿದೆ.

ನಗರದ ನೀರಿನ ನಿರ್ವಹಣೆ ಬಗ್ಗೆ ವಿಶೇಷ ಪರಿಣತಿ ಹೊಂದಿರುವ ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕಾಲಜಿ ಆ್ಯಂಡ್‌ ಎನ್‌ವಿರಾನ್‌ಮೆಂಟ್‌ (ಏಟ್ರೀ) ಸಂಸ್ಥೆಯ ವಿಜ್ಞಾನಿ ಶರತ್ಚಂದ್ರ ಲೆಲೆ ಅವರ ಪ್ರಕಾರ, ಈ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಲು ಹೊರಟಿರುವುದು ಒಳ್ಳೆಯದೇ. ಆದರೆ, ಒಮ್ಮೆಲೆ ₹ 169 ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳುವ ಬದಲು, ಪ್ರಾಯೋಗಿಕವಾಗಿ ಸಣ್ಣ ಮಟ್ಟದ ಯೋಜನೆ ಅನುಷ್ಠಾನಗೊಳಿಸುವುದು ಸೂಕ್ತ. ಪ್ರಾಯೋಗಿಕ ಯೋಜನೆಯಲ್ಲಿ ಲೋಪಗಳನ್ನು ಸರಿಪಡಿಸಿಕೊಂಡು ನಂತರ ಪೂರ್ಣಪ್ರಮಾಣದಲ್ಲಿ ಯೋಜನೆಯನ್ನು ವಿಸ್ತರಿಸಬಹುದು. 

‘ನಗರದ ರಾಜಕಾಲುವೆಗಳಿಗೆ ಕೊಳಚೆ ನೀರು ಸೇರದಂತೆ ಮಾಡುತ್ತೇವೆ ಎಂದು ಹೇಳುವುದು ಸುಲಭ. ಆದರೆ, ಇದರ ಅನುಷ್ಠಾನದ ವೇಳೆ ಅನೇಕ ತೊಡಕುಗಳಿವೆ. ಈಗ ರಾಜಕಾಲುವೆಗೆ ಕೊಳಚೆ ನೀರು ಹರಿಸಬೇಡಿ ಎಂದ ತಕ್ಷಣ ಜನ ಅದನ್ನು ಪಾಲಿಸುವುದಿಲ್ಲ. ಇಷ್ಟು ಸಮಯ ರಾಜಕಾಲುವೆಯಲ್ಲೇ ಹರಿಯುತ್ತಿದ್ದ ಅಷ್ಟೂ ಕೊಳಚೆಯನ್ನೂ ಪೂರ್ತಿಯಾಗಿ ಒಳಚರಂಡಿ ಜಾಲದಲ್ಲೇ ಹರಿಯುವಂತೆ ಮಾಡಲು ಏನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ. ಇಲ್ಲದ್ದಿದ್ದರೆ ರಾಜಕಾಲುವೆಯ ಬದಲು ಕೊಳಚೆ ಇನ್ನೆಲ್ಲೋ ಹರಿದು ಮತ್ತಷ್ಟು ಅಧ್ವಾನ ಸೃಷ್ಟಿಯಾಗಬಹುದು’ ಎಂದು ಅವರು ಎಚ್ಚರಿಸುತ್ತಾರೆ.

ಜನರನ್ನು ವಿಶ್ವಾಸಕ್ಕೆ ಪಡೆಯಿರಿ

‘ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಈ ಯೋಜನೆಯ ಪ್ರಯೋಜನಗಳನ್ನು ಜನರಿಗೆ ಮನದಟ್ಟು ಮಾಡಿ ಅವರ ಸಹಕಾರವನ್ನು ಪಡೆಯಬೇಕಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಈ ರಾಜಕಾಲುವೆಗಳ ಆಸುಪಾಸಿನ ಜನರ ಜೊತೆ ಸಮಾಲೋಚನೆ ನಡೆಸಿಯೇ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ತಜ್ಞರ ಜೊತೆ ಸಮಗ್ರವಾಗಿ ಸಮಾಲೋಚನೆ ನಡೆಸಬೇಕು. ಇಲ್ಲದಿದ್ದರೆ ಇತರ ಯೋಜನೆಗಳಂತೆಯೇ ಇದೂ ಹಳ್ಳ ಹಿಡಿಯುವ ಸಾಧ್ಯತೆ ಹೆಚ್ಚು’ ಎಂದು ಅವರು ಅಭಿಪ್ರಾಯಪಟ್ಟರು.

ನೀರಿನ ಸಂರಕ್ಷಣೆ ಕುರಿತ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಆರಂಭದಲ್ಲಿ ಸರ್ಕಾರಕ್ಕೆ ಹುಮ್ಮಸ್ಸು ಇರುತ್ತದೆ. ಆದರೆ, ಅದೇ ಹುಮ್ಮಸ್ಸು ಯೋಜನೆಯನ್ನು ಪೂರ್ಣಗೊಳಿಸುವುದರಲ್ಲಿ ಇರುವುದಿಲ್ಲ ಎನ್ನುತ್ತಾರೆ ಅರ್ಕಾವತಿ ಪುನಃಶ್ಚೇತನದ ಹೋರಾಟದಲ್ಲಿ ಸಕ್ರಿಯವಾಗಿದ್ದ ಸಾಮಾಜಿಕ ಕಾರ್ಯಕರ್ತ ಜನಾರ್ದನ ಕೆಸರುಗದ್ದೆ.

‘ನಾವು ಯಾವುದೇ ನಗರದ ಅಥವಾ ಗ್ರಾಮೀಣ ಜಲಾನಯನ ಪ್ರದೇಶವನ್ನು ಸಮಗ್ರವಾಗಿ ಪರಿಗಣಿಸದೇ
ಕೃಷಿ, ಕೈಗಾರಿಕೆ, ಗೃಹ ಬಳಕೆಯ ನೀರಿನ ಸಮಗ್ರ ನಿರ್ವಹಣೆಯನ್ನು ಯೋಜಿಸದೇ ಬಿಡಿ ಬಿಡಿ ಕೆಲಸಗಳನ್ನು ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ರಾಜಕಾರಣಿಗಳು, ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ತ್ರಿವಳಿ ಕೂಟವೇ ಅಭಿವೃದ್ಧಿಯ ಹೆಸರಿನಲ್ಲಿ ಯೋಜನೆ ರೂಪಿಸಿಕೊಂಡು ಹೋಗುತ್ತಿರುವುದು ದುರಂತದ ಸಂಗತಿ. ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಪೂರ್ಣ ಜಲಾನಯನದ ಪುನಃಶ್ಚೇತನದ ನೀಲ ನಕ್ಷೆ ಎಲ್ಲಿದೆ ಸಂಬಂಧಿಸಿದವರು ಹೇಳಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

‘ಈ ಹಿಂದೆ ಅರ್ಕಾವತಿ ಪುನಃಶ್ಚೇತನಕ್ಕೆ ಕೈಗೊಂಡ ಕೆಲಸ ಅರ್ಧಕ್ಕೆ ಏಕೆ ನಿಲ್ಲಿಸಲಾಯಿತು. ತನ್ನದೇ ಅಧೀನದಲ್ಲಿರುವ, ಪರಿಸರ ನಿರ್ವಹಣಾ ನೀತಿ ಮತ್ತು ಸಂಶೋಧನಾ ಸಂಸ್ಥೆಯು (ಎಂಪ್ರಿ) ನ್ಯಾಯಾಲಯದ ಆದೇಶದ ಅನ್ವಯ ನಡೆಸಿದ ಅರ್ಕಾವತಿ ಅಧ್ಯಯನದ ವರದಿಯ ಬಗ್ಗೆ ಸರ್ಕಾರವೇಕೆ ಮೌನ ವಹಿಸಿತು’ ಎಂದು ಅವರು ಪ್ರಶ್ನಿಸಿದರು.

‘ಯಾವುದನ್ನು ನ್ಯಾಯಾಲಯ, ಜನ, ತಜ್ಞರು ಹೇಳುತ್ತಾರೋ ಕೇಳುತ್ತಾರೋ ಅದಕ್ಕೆ ಪ್ರತಿಕ್ರಿಯಿಸದೇ ತಮಗೆ ಹಿತವೆನಿಸುವ ಭೌತಿಕ ಕಾಮಗಾರಿ ಮಾತ್ರ ಮಾಡುತ್ತಾ ಹೋಗುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟರು. 

ರಾಜಕಾಲುವೆಗಳಿಗೆ ಒಳಚರಂಡಿಯ ಮಲಿನ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು. ಈ ಪ್ರದೇಶದ ಎಲ್ಲ ಕೈಗಾರಿಕೆಗಳು, ವಾಣಿಜ್ಯ ಘಟಕಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, ಇತರ ಸಂಸ್ಥೆಗಳು, ಮನೆಗಳು ಯಾವುದೇ ಮಲಿನ ನೀರನ್ನು ಹೊರಸೂಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹಸಿರು ನ್ಯಾಯಮಂಡಳಿ 2018ರ ಡಿ. 6ರಂದು ಆದೇಶ ಮಾಡಿತ್ತು. 

ಕೆರೆ ಹಾಗೂ ರಾಜಕಾಲುವೆಗಳ ಸಂರಕ್ಷಣೆಗಾಗಿ ಹೈಕೋರ್ಟ್‌ ಆದೇಶದ ಮೇರೆಗೆ ರಚನೆಗೊಂಡ ಎನ್‌.ಕೆ.ಪಾಟೀಲ ನೇತೃತ್ವದ ಸಮಿತಿ 2011ರ ಫೆ 26ರಂದು ನೀಡಿದ್ದ ವರದಿಯಲ್ಲಿ, ‘ರಾಜಕಾಲುವೆಗಳಿಗೆ ಕಸ ಎಸೆಯಲು ಹಾಗೂ ಒಳಚರಂಡಿಯ ಕೊಳಚೆ ನೀರು ಸೇರಿಕೊಳ್ಳಲು ಅವಕಾಶ ನೀಡಬಾರದು. ಹೂಳು ತೆರವುಗೊಳಿಸಲು ಹಾಗೂ ಕಸವನ್ನು ಸೋಸಿ ಹೊರ ತೆಗೆಯಲು ಅಲ್ಲಲ್ಲಿ ಅಗತ್ಯ ವ್ಯವಸ್ಥೆಗಳನ್ನು ರೂಪಿಸಬೇಕು. ರಾಜಕಾಲುವೆಗಳು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಇವುಗಳನ್ನು ನಗರದ ಪರಿಸರ ವ್ಯವಸ್ಥೆಯನ್ನು ಮರುರೂಪಿಸುವ ತಾಣಗಳನ್ನಾಗಿ ಅಭಿವೃದ್ಧಿಪಡಿಸಬೇಕು. ಇವುಗಳ ಒತ್ತುವರಿ ತಡೆಯಲು ಕ್ರಮಕೈಗೊಳ್ಳಬೇಕು’ ಎಂದು ಶಿಫಾರಸು ಮಾಡಿತ್ತು. ಹಸಿರು ನ್ಯಾಯಮಂಡಳಿಯ ಆದೇಶಗಳನ್ನು ಹಾಗೂ ಎನ್‌.ಕೆ.ಪಾಟೀಲ ವರದಿಯ ಶಿಫಾರಸುಗಳನ್ನು ಮುಂದಿಟ್ಟುಕೊಂಡು ನೀರಿನ ನಿರ್ವಹಣೆ ಬಗ್ಗೆ ಕಾಳಜಿ ಹೊಂದಿರುವ ಸಂಸ್ಥೆಗಳು ಮತ್ತು ಜನರು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ ಪರಿಣಾಮವಾಗಿ ‘ನಾಗರಿಕರ ನೀರ ಹಾದಿ’ ಯೋಜನೆ ರೂಪ ತಳೆದಿದೆ. ನಗರದಲ್ಲಿ ನೀರಿನ ಕರಾಳ ಭವಿಷ್ಯವನ್ನು ಮುಂಗಾಣುವ ‘ಭಗೀರಥ’ರ ದಶಕಗಳ ಹೋರಾಟದ ಕೂಸು ಇದು.

ಈ ಹಿಂದೆ ಸರ್ಕಾರ ಕೈಗೊಂಡಿದದ ಅರ್ಕಾವತಿ ಪುನರುಜ್ಜೀವನ ಕಾರ್ಯಕ್ರಮದಂತೆಯೇ ಈ ಯೋಜನೆ ‘ಹಳ್ಳ’ಹಿಡಿಯಲಿದೆಯೇ? ಅಥವಾ ನಿಜಕ್ಕೂ ₹ 1.39 ಕೋಟಿ ಜನರಿರುವ ಮಹಾನಗರದಲ್ಲೂ ಇಂತಹದ್ದೊಂದು ಬದಲಾವಣೆ ಸಾಧ್ಯ ಎಂಬ ಮಾದರಿಯೊಂದನ್ನು ಜಗತ್ತಿಗೆ ತೋರಿಸಿಕೊಡಲಿದೆಯೇ ಎಂಬುದು ಕುತೂಹಲ.

ನಗರದ ನೀರ ನಿರ್ವಹಣೆಗೆ ಹೊಸ ಹಾದಿ ತೋರಿಸುವ ಮೂಲಕ ಈ ಯೋಜನೆ ಇತರ ನಗರಗಳಿಗೂ ಮೇಲ್ಪಂಕ್ತಿ ಹಾಕಿಕೊಡಲಿ– ರಾಜಕಾಲುವೆಗಳಲ್ಲಿ ಶುದ್ಧ ಗಂಗಾವತರಣಕ್ಕೆ ನಾಂದಿ ಹಾಡಲಿ ಎಂಬುದು ನೀರಿನ ಸುಸ್ಥಿರ ನಿರ್ವಹಣೆಯ ಬಗ್ಗೆ ಕಾಳಜಿ ವಹಿಸುವ ಹೋರಾಟಗಾರರ ಆಶಯ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು