ರಸ್ತೆ ಗುಂಡಿ ಮುಚ್ಚುವಲ್ಲೂ ಅನ್ಯಾಯವೇ?

7
ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವಾಸಿಸುವ ಬಡಾವಣೆಯಲ್ಲಿ ಮಾತ್ರ ಕಾಮಗಾರಿಗೆ ಜನರ ಆಕ್ರೋಶ

ರಸ್ತೆ ಗುಂಡಿ ಮುಚ್ಚುವಲ್ಲೂ ಅನ್ಯಾಯವೇ?

Published:
Updated:
Deccan Herald

ಬೆಂಗಳೂರು: ನಗರದ ರಸ್ತೆ ಗುಂಡಿಗಳನ್ನೆಲ್ಲ ಮುಚ್ಚಿ ಎಂದು ಹೈಕೋರ್ಟ್‌ ಗುಡುಗಿದೊಡನೆ ಬಿಬಿಎಂಪಿ ಅಧಿಕಾರಿಗಳಿಗೆ ಮೊದಲು ಕಂಡಿದ್ದು ನ್ಯಾಯಾಂಗ ಬಡಾವಣೆ ರಸ್ತೆಗಳು ಮಾತ್ರ ಎಂಬ ಕುಹಕದ ಮಾತು ಯಲಹಂಕ ಭಾಗದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ, ಈ ಬಡಾವಣೆಯ ರಸ್ತೆಗಳು ಈಗ ಗುಂಡಿಗಳಿಲ್ಲದಂತೆ ಟಾರು ಬಳಿದುಕೊಂಡರೆ, ಅಕ್ಕಪಕ್ಕದ ಬಡಾವಣೆ ರಸ್ತೆಗಳು ಗುಂಡಿಮಯ ಸ್ಥಿತಿಯಲ್ಲೇ ಇರುವುದು. 

ನ್ಯಾಯಮೂರ್ತಿಗಳು, ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ವಾಸವಿರುವ ಯಲಹಂಕದ ‘ನ್ಯಾಯಾಂಗ ಬಡಾವಣೆ’ ಮತ್ತು ಹೆಬ್ಬಾಳದ ‘ನ್ಯಾಯ ಗ್ರಾಮ’ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿದ್ದ ಗುಂಡಿಗಳನ್ನು ಬಿಬಿಎಂಪಿ ಅಧಿಕಾರಿಗಳು ಆದ್ಯತೆಯ ಮೇಲೆ ಮುಚ್ಚಿಸಿದ್ದಾರೆ ಎಂದು ದೂರುತ್ತಾರೆ ಕೋಡಿಗೆಹಳ್ಳಿ, ಸಹಕಾರನಗರ, ಎಇಸಿಎಸ್ ಬಡಾವಣೆ, ಭದ್ರಪ್ಪ ಬಡಾವಣೆ, ಭೂಪಸಂದ್ರ ಬಡಾವಣೆ ನಿವಾಸಿಗಳು. ಜಿ.ಎಂ.ರಾಮಕೃಷ್ಣಪ್ಪ ಬಡಾವಣೆ, ಅಟ್ಟೂರು ಬಡಾವಣೆಗಳ ರಸ್ತೆ ಗುಂಡಿಗಳು ಕೂಡ ಹಾಗೆಯೇ ಇವೆ.

ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವಾಸವಿರುವ ಬಡಾವಣೆಗಳಲ್ಲಿ ಅಡುಗೆ ಅನಿಲ ಪೂರೈಕೆಗೆ ಪೈಪ್‌ಲೈನ್‌ ಅಳವಡಿಕೆಗೆ ಮತ್ತು ಇತರ ಕಾಮಗಾರಿಗಳಿಗೆ ತೆಗೆದಿದ್ದ ಎಲ್ಲ ಗುಂಡಿಗಳನ್ನು ಹುಡುಕಿ, ಹುಡುಕಿ ಬಿಬಿಎಂಪಿ ಸಿಬ್ಬಂದಿ ಮುಚ್ಚಿದ್ದಾರೆ. ಆದರೆ, ಇದರ ನೆರೆಯ ಬಡಾವಣೆಗಳ ಗುಂಡಿಗಳು ಅವರಿಗೆ ಕಂಡಿಲ್ಲ. ನಮ್ಮ ಭಾಗದಲ್ಲಿ ಮುಖ್ಯರಸ್ತೆಗಳ ಮಾತ್ರ ಗುಂಡಿಗಳನ್ನು ಮುಚ್ಚಿದ್ದಾರೆ ಎನ್ನುತ್ತಾರೆ ಯಲಹಂಕ ಉಪನಗರ ನಿವಾಸಿ ಅರುಣ್‌ ಕುಮಾರ್‌.

‘ನಾನು ನ್ಯಾಯಾಂಗ ಬಡಾವಣೆ ಮಾರ್ಗವಾಗಿಯೇ ಪ್ರತಿನಿತ್ಯ ಕೆಲಸಕ್ಕೆ ಹೋಗುತ್ತೇನೆ. ಈ ಮೊದಲು ರಾಜೀವ್‌ಗಾಂಧಿ ಬಡಾವಣೆಯ ಪ್ರಮುಖ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿದ್ದವು. ಕೋರ್ಟ್‌ ಆದೇಶ ಹೊರಬಿದ್ದ ಮರುದಿನವೇ ಈ ಬಡಾವಣೆಯ ಎಲ್ಲ ಗುಂಡಿಗಳನ್ನು ಮುಚ್ಚಿದ್ದಾರೆ. ಇದೇ ರಸ್ತೆಯನ್ನು ಬಹುಪಾಲು ನ್ಯಾಯಮೂರ್ತಿಗಳು, ನ್ಯಾಯಾಧೀಶರು ಹಾಗೂ ಅಧಿಕಾರಿಗಳು ಬಳಸುತ್ತಾರೆ. ಅದಕ್ಕಾಗಿಯೇ ಪಾಲಿಕೆ ಸಿಬ್ಬಂದಿಗೆ ಆ ರಸ್ತೆಯ ಮೇಲೆ ಅಷ್ಟೊಂದು ಕಾಳಜಿ’ ಎಂದು ಅವರು ವ್ಯಂಗ್ಯವಾಡುತ್ತಾರೆ.

ಹೆಬ್ಬಾಳದ ‘ನ್ಯಾಯಗ್ರಾಮ’ಕ್ಕೆ ಹೊಂದಿಕೊಂಡಂತಿರುವ  ಸೆಂಟ್ರಲ್‌ ಎಕ್ಸೈಸ್‌ ಬಡಾವಣೆ ಮತ್ತು ಎಇಸಿಎಸ್‌ ಬಡಾವಣೆಗಳಲ್ಲಿ ಮುಖ್ಯರಸ್ತೆಗಳಲ್ಲಿದ್ದ ಕೆಲ ಗುಂಡಿಗಳಿಗೆ ಮಾತ್ರ ‍ಪ್ಯಾಚ್‌ ಹಾಕಲಾಗಿದೆ. ಸಂಜಯನಗರ ಮುಖ್ಯರಸ್ತೆ ರಸ್ತೆ ಸೇರಿದಂತೆ ಜಿ.ಎಂ.ರಾಮಕೃಷ್ಣಪ್ಪ ಬಡಾವಣೆಯ ರಸ್ತೆಗಳ ಗುಂಡಿಗಳನ್ನು ಮುಚ್ಚಿಲ್ಲ. ದಿನನಿತ್ಯ ಸುರಿಯುತ್ತಿರುವ ಮಳೆಗೆ ಈ ಗುಂಡಿಗಳ ಗಾತ್ರವು ಹಿಗ್ಗುತ್ತಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ವಾಸುದೇವ್‌.

ನ್ಯಾಯಾಲಯದ ಆದೇಶವನ್ನು ಗಂಭೀರವಾಗಿ ಪರಿಗಣಿಸದೇ, ಕೇವಲ ನ್ಯಾಯಾಂಗ ಇಲಾಖೆಯವರು ವಾಸವಿರುವ ಬಡಾವಣೆಯ ರಸ್ತೆ ಗುಂಡಿಗಳನ್ನು ಮಾತ್ರ ಮುಚ್ಚಿರುವುದು ಯಾವ ನ್ಯಾಯ ಎಂದು ಕೇಳುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !