ಶನಿವಾರ, ಏಪ್ರಿಲ್ 4, 2020
19 °C
ಅಗ್ನಿ ಪರೀಕ್ಷೆ!: ಸತ್ಯವಂತರಾದರೆ ಸುಡುವುದಿಲ್ಲ ಎಂದಿದ್ದ ಆರೋಪಿ

ಬೆಂಗಳೂರು: ‘ಸತ್ಯ’ದ ಹೆಸರಿನಲ್ಲಿ ಕೆಲಸಗಾರರ ಅಂಗೈ ಸುಟ್ಟ ಕ್ಲಬ್ ಮಾಲೀಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Fire

ಬೆಂಗಳೂರು: ಶೌಚಾಲಯದಲ್ಲಿ ಪೈಪ್ ಸುಟ್ಟ ವಿಚಾರವನ್ನೇ ಮುಂದಿಟ್ಟುಕೊಂಡು ಕ್ಲಬ್‌ವೊಂದರ ಮಾಲೀಕ, ಸತ್ಯದ ಹೆಸರಿನಲ್ಲಿ ತನ್ನ ಮೂವರು ಕೆಲಸಗಾರರ ಅಂಗೈ ಮೇಲೆ ಕರ್ಪೂರ ಹಚ್ಚಿ ಕೈಯನ್ನೇ ಸುಟ್ಟು ಅಮಾನವೀಯವಾಗಿ ವರ್ತಿಸಿದ್ದಾರೆ.

‘ಸಿಟಿ ಮಾರ್ಕೆಟ್‌ ಠಾಣೆ ವ್ಯಾಪ್ತಿಯ ಆಸ್ಪತ್ರೆ ರಸ್ತೆಯ ಬಳೆಪೇಟೆ ವೃತ್ತದಲ್ಲಿರುವ ಕ್ಲಬ್‌ನಲ್ಲಿ ಮಾರ್ಚ್ 3ರಂದು ಈ ಘಟನೆ ನಡೆದಿದೆ. ಕೆಲಸಗಾರ ದಿವಾಕರ್ ಎಂಬುವರು ನೀಡಿರುವ ದೂರು ಆಧರಿಸಿ ಮಾಲೀಕ ಆರ್‌.ಶರತ್ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಶರತ್‌ಗೆ ಸೇರಿದ್ದ ಕ್ಲಬ್‌ನಲ್ಲಿ ದಾವಣಗೆರೆ ದಿವಾಕರ್, ಶರತ್ ಹಾಗೂ ಗೋಪಾಲ್‌ ಏಳು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಘಟನೆಯಿಂದ ಆ ಮೂವರು ಕೆಲಸಗಾರರ ಅಂಗೈ ಸುಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದರು.

‘ಕ್ಲಬ್‌ನ ಶೌಚಾಲಯದಲ್ಲಿದ್ದ ಪೈಪ್‌ ಸುಟ್ಟಿತ್ತು. ಇದರಿಂದ ಕೋಪಗೊಂಡಿದ್ದ ಶರತ್,  ‘ಪೈಪ್ ಸುಟ್ಟವರು ಯಾರು’ ಎಂದು ಪ್ರಶ್ನಿಸಿ ಕೆಲಸಗಾರರಿಗೆ ಬೈದಿದ್ದ. ‘ನಾವು ಪೈಪ್ ಸುಟ್ಟಿಲ್ಲ’ ಎಂದು ಹೇಳಿದರೂ ಆರೋಪಿ ಬಿಟ್ಟಿರಲಿಲ್ಲ.’

‘ಸತ್ಯವನ್ನು ಬಾಯಿ ಬಿಡಿಸುತ್ತೇನೆ’ ಎಂದಿದ್ದ ಶರತ್, ಮೂವರು ಕೆಲಸಗಾರರ ಅಂಗೈ ಮೇಲೆ ಕರ್ಪೂರ ಇಟ್ಟು ಬೆಂಕಿ ಹಚ್ಚಿದ್ದ. ‘ನೀವು ಸತ್ಯವಂತರಾದರೆ, ನಿಮ್ಮ ಅಂಗೈ ಸುಡುವುದಿಲ್ಲ. ಸುಳ್ಳು ಹೇಳುತ್ತಿದ್ದರೆ ಅಂಗೈ ಸುಡುತ್ತದೆ’ ಎಂದಿದ್ದ. ಸ್ವಲ್ಪ ಸಮಯದಲ್ಲೇ ಮೂವರ ಅಂಗೈ ಸುಟ್ಟು ರಕ್ತ ಬರಲಾರಂಭಿಸಿತ್ತು’ ಎಂದು ಪೊಲೀಸರು ವಿವರಿಸಿದರು.

‘ಕೈ ಸುಟ್ಟ ವಿಷಯವನ್ನು ಯಾರಿಗಾದರೂ ಹೇಳಿದರೆ ಸುಮ್ಮನೇ ಬಿಡುವುದಿಲ್ಲವೆಂದು ಆರೋಪಿ ಬೆದರಿಕೆ ಹಾಕಿದ್ದ. ನಂತರ, ಸ್ನೇಹಿತರ ಸಹಾಯದಿಂದ ಕೆಲಸಗಾರರು ಆಸ್ಪತ್ರೆಗೆ ಹೋಗಿದ್ದರು. ಗಾಯಾಳುಗಳ ಹೇಳಿಕೆ ಆಧರಿಸಿ ಹಲ್ಲೆ (ಐಪಿಸಿ 323) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಆರೋಪಿ ಶರತ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಹೇಳಿದರು.

ಸಂಬಳ ಕಡಿತ: ‘ಉರಿಯುತ್ತಿದ್ದ ಕರ್ಪೂರವನ್ನು ಇಬ್ಬರು ಅಂಗೈಯಲ್ಲೇ ಕೆಲ ನಿಮಿಷ ಹಿಡಿದುಕೊಂಡಿದ್ದರು. ಮತ್ತೊಬ್ಬ ಬಿಸಿ ತಾಳಲಾರದೇ ಕೆಳಗೆ ಬಿಸಾಕಿದ್ದ. ಆತನ ಎರಡು ದಿನದ ಸಂಬಳ‌ವನ್ನು ಮಾಲೀಕ ಕಡಿತಗೊಳಿಸಿದ್ದಾನೆ. ಈ ಸಂಬಂಧ ಕೆಲಸಗಾರ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು