ಭಾನುವಾರ, ಜನವರಿ 17, 2021
28 °C
804 ವಿದ್ಯಾರ್ಥಿಗಳ ಅಂಕ ಪಟ್ಟಿ ವಾಪಸು ಪಡೆಯಲು ತೀರ್ಮಾನ

ಬೆಂಗಳೂರು ವಿವಿ ಸಿಂಡಿಕೇಟ್ ಸಭೆ: ಅಂಕ ತಿದ್ದಿ ಅಕ್ರಮ; ಸಿಐಡಿಗೆ ಒಪ್ಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2019 ಮತ್ತು 2020ನೇ ಸಾಲಿನಲ್ಲಿ ನಡೆದ ವಿವಿಧ ಸ್ನಾತಕೋತ್ತರ ಪದವಿ ಪರೀಕ್ಷೆಯ ಮೌಲ್ಯಮಾಪನದ ಬಳಿಕ ಸ್ಕ್ರಾನಿಂಗ್‌ ಏಜೆನ್ಸಿ 804 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಅಂಕ ತಿದ್ದಿ ಅಕ್ರಮ ಎಸಗಿರುವ ಪ್ರಕರಣ ತನಿಖೆಗೆ ಆಂತರಿಕ ತಜ್ಞರ ತಂಡ ರಚಿಸುವ ಜತೆಗೆ ಆಂತರಿಕ ಮಾಹಿತಿ ತಂತ್ರಜ್ಞಾನ ಲೆಕ್ಕಪರಿಶೋಧನೆ (ಐಟಿ ಆಡಿಟ್) ನಡೆಸಲು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಉತ್ತರ ಪತ್ರಿಕೆಗಳ ಅಂಕ ತಿರುಚಿದ ಬಗ್ಗೆ ‘ಪ್ರಜಾವಾಣಿ’ಯ ಮಂಗಳವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಜ್ಞಾನಭಾರತಿ ಆವರಣದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಯಿತು. ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಕೆಲವು ಸದಸ್ಯರು ಆಗ್ರಹಿಸಿದರು. ’ಈ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ನೀಡಲಾಗಿದೆ. ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬಹುದು. ಅದಕ್ಕೂ ಮೊದಲು ಆಂತರಿಕ ಸಮಿತಿಯಿಂದ ತನಿಖೆ ನಡೆಸಿ, ಐಟಿ ಆಡಿಟ್ ಕೂಡ ಮಾಡಿಸುವುದು ಉತ್ತಮ ಎಂಬ ಸಲಹೆ ಬಂದ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ‘ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ತಿಳಿಸಿದರು.

ಎಲ್ಲ 804 ವಿದ್ಯಾರ್ಥಿಗಳಿಗೂ ನೋಟಿಸ್ ಜಾರಿ ನೀಡಿ, ಅಂಕಪಟ್ಟಿಗಳನ್ನು ವಾಪಸ್ ಪಡೆಯಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡುವ ಹೊಣೆ ವಹಿಸಿದ್ದ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿ ಅಂಕ ನೀಡಿದ ಬಳಿಕ ಉತ್ತರ ಪತ್ರಿಕೆಗಳಲ್ಲಿ ಅಂಕ ತಿದ್ದಿರುವ ಕಾಲೇಜುಗಳಲ್ಲಿ ಇನ್ನೂ ಬಾಕಿ ಇರುವ ಅಂಕಪಟ್ಟಿಗಳನ್ನು ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಬೇಕಾಗಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

‘ಉತ್ತರ ಪತ್ರಿಕೆಗಳಲ್ಲಿ ಅಂಕಗಳನ್ನು ಅಕ್ರಮವಾಗಿ ತಿದ್ದಿರುವ ಕುರಿತು ಕುಲಸಚಿವರು ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಅಗತ್ಯವಿದೆ. ಈ ಪ್ರಕರಣದ ಹಿಂದೆ ಯಾರದ್ದೊ ಕೈವಾಡ ಇರಬಹುದು. ನಿಜಾಂಶ ತಿಳಿಯಲು ಸಿಐಡಿಗೆ ಒಪ್ಪಿಸಬೇಕು’ ಎಂದು ಸಿಂಡಿಕೇಟ್ ಸದಸ್ಯ ಪ್ರೇಮ್ ಆಗ್ರಹಿಸಿದರು.

‘ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 242 ಎಕರೆಯಷ್ಟು ಭೂಮಿ ಒತ್ತುವರಿಗೆ ಆಗಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ವಿಶ್ವವಿದ್ಯಾಲಯ 1,300 ಎಕರೆಯಲ್ಲಿ ವಿಸ್ತಾರವಾಗಿದ್ದು, 200-300 ಎಕರೆ ಜಾಗ ಒತ್ತುವರಿಯಾಗಿದ್ದು, ಅದಕ್ಕೆ ಆವರಣಗೋಡೆ ಹಾಕಲು ತಕ್ಷಣಕ್ಕೆ ಅಗತ್ಯವಿರುವ ಕಾರ್ಯಪಡೆ ರಚಿಸುವಂತೆ ಕೂಡಾ ಒತ್ತಾಯಿಸಿದ್ದೇವೆ’ ಎಂದೂ ಅವರು ಹೇಳಿದರು.

ಸಿಂಡಿಕೇಟ್ ಸಭೆಗೆ ಚರ್ಚೆಗೆ 60ಕ್ಕೂ ಹೆಚ್ಚು ಕಾರ್ಯಸೂಚಿಗಳಿದ್ದವು. ಅಂಕ ತಿದ್ದಿರುವ ಪ್ರಕರಣ, ವಿಶ್ವವಿದ್ಯಾಲಯದ ಭೂಮಿ ಒತ್ತುವರಿ ವಿಷಯ, 15 ದಿನಗಳಿಂದ ಮುಷ್ಕರ ನಡೆಸುತ್ತಿರುವ ಬೋಧಕೇತರ ಸಿಬ್ಬಂದಿಯ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು