ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರ ಕಾರ್ಯ ನಿರ್ವಹಣೆಗೆ ಹೈಕೋರ್ಟ್‌ ತಡೆ

Published 6 ಸೆಪ್ಟೆಂಬರ್ 2024, 0:28 IST
Last Updated 6 ಸೆಪ್ಟೆಂಬರ್ 2024, 0:28 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ನೂತನವಾಗಿ ನಾಮನಿರ್ದೇಶನಗೊಂಡಿರುವ ಒಂಬತ್ತು ಸಿಂಡಿಕೇಟ್‌ ಸದಸ್ಯರು ಆ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ಹಾಗೂ ಸಿಂಡಿಕೇಟ್ ಸಭೆಯಲ್ಲಿ ಭಾಗವಹಿಸದಂತೆ ಹೈಕೋರ್ಟ್‌ ಮೌಖಿಕ ಸೂಚನೆ ನೀಡಿದೆ.

ನಾಮನಿರ್ದೇಶನದ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರಿನ ಪಿ.ಬಿ.ಜಯಕೃಷ್ಣ, ಕೆ.ರಾಮಮೂರ್ತಿ ಮತ್ತು ಚಿಕ್ಕಮುನಿಯಪ್ಪ ಹಾಗೂ ಕೋಲಾರದ ಆರ್‌.ಎಸ್‌.ಎನ್‌.ಪ್ರಸಾದ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಈ ಮೌಖಿಕ ಸೂಚನೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಬಿ.ಎಸ್‌.ನಂದಿನಿ, ‘ನಾಮನಿರ್ದೇಶಿತ ನೂತನ ಸಿಂಡಿಕೇಟ್‌ ಸದಸ್ಯರು ತಮ್ಮ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ಹೈಕೋರ್ಟ್‌ ಈ ಹಿಂದಿನ ವಿಚಾರಣೆ ವೇಳೆ ಮೌಖಿಕವಾಗಿ ಸೂಚನೆ ನೀಡಿತ್ತು. ಆದರೆ, ಇತ್ತೀಚೆಗೆ ನಡೆದ ಬೆಂಗಳೂರು ಉತ್ತರ ವಿವಿಯ ಘಟಿಕೋತ್ಸವದಲ್ಲಿ ನಾಮನಿರ್ದೇಶಿತ ಸಿಂಡಿಕೇಟ್‌ ಸದಸ್ಯರು ಭಾಗವಹಿಸಿದ್ದಾರೆ’ ಎಂದು ತಿಳಿಸಿ ಫೋಟೊಗಳನ್ನು ಒಳಗೊಂಡ ಮೆಮೊ ಅನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಕೋರ್ಟ್‌ ಸೂಚನೆಯಿದ್ದರೂ ನಾಮನಿರ್ದೇಶಿತ ಸದಸ್ಯರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಸಿಂಡಿಕೇಟ್‌ ಸದಸ್ಯರಿಗೆ ಆ ಸ್ಥಾನದಲ್ಲಿ ಕಾರ್ಯ ನಿರ್ವಹಿಸದಂತೆ ಸೂಚನೆ ನೀಡಿ’ ಎಂದು ಸರ್ಕಾರಿ ವಕೀಲರಿಗೆ ಮೌಖಿಕವಾಗಿ ಸೂಚಿಸಿತು.

ಇದಕ್ಕೆ ಸರ್ಕಾರಿ ವಕೀಲರು, ‘ಸಿಂಡಿಕೇಟ್‌ ಸದಸ್ಯರು ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಣತರಿದ್ದಾರೆ. ನಾಮನಿರ್ದೇಶನ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಪ್ರತಿವಾದಿಗಳಾದ ಸಿಂಡಿಕೇಟ್‌ ಸದಸ್ಯರ ಪರ ವಕೀಲರೂ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಪ್ರಕರಣವೇನು?

ಬೆಂಗಳೂರು, ಬೆಂಗಳೂರು ನಗರ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಸದಸ್ಯರ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ 2024ರ ಆಗಸ್ಟ್ 27ರಂದು ಅಧಿಸೂಚನೆ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ‘ನಾಮನಿರ್ದೇಶಿತ ನೂತನ ಸದಸ್ಯರಾದ ಜಯಶ್ರೀ ಹೆಗ್ಡೆ, ಎಂ.ಎ.ಮಹದೇವ ನಾಯ್ಕ, ರಮೇಶ್‌ ಬಾಬು, ಆಯೇಷಾ ಫರ್ಜಾನಾ, ವಿ.ಶಿವಕುಮಾರ್‌, ಎಸ್‌.ಆರ್‌.ಸಹನಾ, ಜೈದೀಪ್‌, ಅರ್ಬಾಜ್‌ ಪಾಷಾ ಮತ್ತು ಎಂ.ಗೋಪಾಲ ಗೌಡ ಅವರಿಗೆ ನಿಗದಿತ ಅರ್ಹತೆ ಇಲ್ಲದಿದ್ದರೂ ಸರ್ಕಾರ ನಾಮನಿರ್ದೇಶನ ಮಾಡಿದೆ’ ಎಂದು ಆಕ್ಷೇಪಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT