ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಬೆಂಗಳೂರು ವಿಶ್ವವಿದ್ಯಾಲಯ: ಹಾಸ್ಟೆಲ್‌ ಹಾಸಿಗೆ ಖರೀದಿಲ್ಲಿ ಅಕ್ರಮ?
ಬೆಂಗಳೂರು ವಿಶ್ವವಿದ್ಯಾಲಯ: ಹಾಸ್ಟೆಲ್‌ ಹಾಸಿಗೆ ಖರೀದಿಲ್ಲಿ ಅಕ್ರಮ?
Published 11 ಜೂನ್ 2023, 0:38 IST
Last Updated 11 ಜೂನ್ 2023, 0:38 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಒಂಬತ್ತು ವಿದ್ಯಾರ್ಥಿ ನಿಲಯಗಳಿಗೆ ಅಗತ್ಯವಿದ್ದ ಹಾಸಿಗೆ–ದಿಂಬುಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಪೂರೈಕೆಗೆ ಕರೆಯಲಾಗಿದ್ದ ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿದ್ದ ಗುಣಮಟ್ಟವೂ ಇಲ್ಲ. ಪೂರೈಸುವುದಾಗಿ ತೋರಿಸಲಾಗಿದ್ದ ಹಾಸಿಗೆ–ದಿಂಬುಗಳ ಬದಲು ಕಳಪೆ ಗುಣಮಟ್ಟದ ಹಾಗೂ ಮಾರುಕಟ್ಟೆಯಲ್ಲಿ ಅತಿ ಕಡಿಮೆ ದರಕ್ಕೆ ಲಭ್ಯವಿರುವ ಹಾಸಿಗೆ–ದಿಂಬುಗಳನ್ನು ಪೂರೈಸಲಾಗಿದೆ.

ಹಾಸಿಗೆ ಮತ್ತು ದಿಂಬು ಖರೀದಿಸಲು 2021–22ನೇ ಸಾಲಿನಲ್ಲಿ ಟೆಂಡರ್‌ ಆಹ್ವಾನಿಸಲಾಗಿತ್ತು. 2022ರ ಫೆಬ್ರುವರಿ 3ರಂದು ನಡೆದ ತಾಂತ್ರಿಕ ಬಿಡ್‌ನಲ್ಲಿ ಅರ್ಹಗೊಂಡ ಸಂಸ್ಥೆಯಿಂದ ಪ್ರತಿ ಹಾಸಿಗೆಗೆ ₹5,900 ಮತ್ತು ಪ್ರತಿ ದಿಂಬಿಗೆ ₹650 ದರ ನಿಗದಿ ಮಾಡಲಾಗಿತ್ತು.

1,848 ಹಾಸಿಗೆ ಮತ್ತು 2,273 ದಿಂಬು ಪೂರೈಕೆಯ ಟೆಂಡರ್‌ಗೆ 2022ರ ಜೂನ್‌ 27ರಂದು ನಡೆದ ವಿಶ್ವವಿದ್ಯಾಲಯದ ಕೇಂದ್ರ ಖರೀದಿ ಸಮಿತಿ ಸಭೆಯಲ್ಲಿ ಅನುಮೋದನೆಯನ್ನೂ ನೀಡಲಾಗಿತ್ತು. ಇದಕ್ಕಾಗಿ ₹1.24 ಕೋಟಿ ಮೊತ್ತಕ್ಕೆ ಒಪ್ಪಿಗೆಯನ್ನೂ ನೀಡಿ,  ಖರೀದಿಸಲು ಆದೇಶಿಸಲಾಗಿತ್ತು. 

‘ಕೆ.ಆರ್. ವೃತ್ತದಲ್ಲಿರುವ ಸರ್ಕಾರಿ ಟೆಕ್ಸ್‌ಟೈಲ್‌ ಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕರು ಹಾಸಿಗೆ ಮತ್ತು ದಿಂಬುಗಳ ಗುಣಮಟ್ಟವನ್ನು ಪರಿಶೀಲಿಸಿದ್ದು, ಟೆಂಡರ್‌ನಲ್ಲಿ ಉಲ್ಲೇಖವಿರುವ ಗುಣಮಟ್ಟದಂತೆಯೇ ಪೂರೈಕೆ ಮಾಡಲಾಗಿದೆ’ ಎಂದು ವರದಿ ನೀಡಿದ್ದಾರೆ. 

‘ಮಾರುಕಟ್ಟೆಯಲ್ಲಿ ₹3 ಸಾವಿರಕ್ಕೆ ದೊರೆಯುವ ಹಾಸಿಗೆಗೆ ₹5,900 ಹಾಗೂ ₹150ಕ್ಕೆ ಸಿಗುವ ದಿಂಬಿಗೆ ₹650 ನೀಡಿ ಖರೀದಿಸಲಾಗಿದೆ’ ಎಂದು ವಿದ್ಯಾರ್ಥಿಗಳು ಆಪಾದಿಸಿದ್ದಾರೆ. ‘ಹಿಂದೆ ಗುಣಮಟ್ಟದ ಹಾಸಿಗೆ, ದಿಂಬುಗಳನ್ನು ನೀಡಲಾಗಿತ್ತು. ಇವು ಬಳಸಲಾಗದ ರೀತಿಯಲ್ಲಿವೆ. ಈ ಖರೀದಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಗರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

‘ಟೆಕ್ಸ್‌ಟೈಲ್‌ ಟೆಕ್ನಾಲಜಿ ವಿಭಾಗಕ್ಕೆ ಪರಿಶೀಲಿಸಲು ಗುಣಮಟ್ಟದ ಹಾಸಿಗೆ, ದಿಂಬುಗಳನ್ನೇ ನೀಡಲಾಗಿತ್ತು. ಆದರೆ, ಪೂರೈಕೆಯಾಗಿರುವ ಹಾಸಿಗೆ– ದಿಂಬುಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿವೆ. ಈ ಬಗ್ಗೆ ತನಿಖೆಯಾಗದಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT