ಬೆಂಗಳೂರು: ಎಸ್‌ಎಪಿ ಕೋರ್ಸ್ (ಸಿಸ್ಟಮ್ ಅಪ್ಲಿಕೇಶನ್ ಪ್ರೋಗ್ರಾಂ) ಕಲಿಕೆಗೆ ಎಂಬಿಎ ವಿದ್ಯಾರ್ಥಿಗಳು ಪಾವತಿಸಿದ ಶುಲ್ಕವನ್ನು ಎಂಟು ವರ್ಷಗಳ ಹಿಂದೆ ದುರುಪಯೋಗಪಡಿಸಿಕೊಂಡಿದ್ದ, ಈಗ ನಿವೃತ್ತರಾಗಿರುವ ಅಧ್ಯಾಪಕ ಕೆ.ಜನಾರ್ದನಂ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲು ಬೆಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.
2016–17ನೇ ಸಾಲಿನಲ್ಲಿ ವಿದ್ಯಾರ್ಥಿ ಗಳಿಂದ ಸಂಗ್ರಹಿಸಿದ್ದ ₹2.8 ಕೋಟಿ ಶುಲ್ಕದಲ್ಲಿ ಸ್ವಲ್ಪ ಭಾಗವನ್ನು ‘ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್’ಗೆ ಪಾವತಿಸಿ, ಉಳಿದ ಭಾಗವನ್ನು ಅವರ ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿದ್ದರು. ಸಿಎಜಿ ವರದಿಯೂ ಈ ಕುರಿತು ಆಕ್ಷೇಪಿಸಿತ್ತು. ವಿಧಾನ ಪರಿಷತ್ ರಚಿಸಿದ್ದ ಸದನ ಸಮಿತಿ ಸಹ ಕ್ರಮಕ್ಕೆ ಸೂಚಿಸಿತ್ತು.
‘ಘಟನೆಯ ನಂತರ ಜನಾರ್ದನಂ ಅವರು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕವಾಗಿದ್ದರು. ವಿಧಾನ ಪರಿಷತ್‌ನ ಸದನ ಸಮಿತಿ ಸೂಚನೆ ತಲುಪಿದೆ. ಸಿಂಡಿಕೇಟ್ ಸಭೆಯ ತೀರ್ಮಾನದ ನಂತರ ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಲಾಗುವುದು. ಅಲ್ಲಿಯವರೆಗೂ ಅವರ ನಿವೃತ್ತಿ ಪ್ರಯೋಜನಗಳನ್ನು ತಡೆಹಿಡಿಯಲಾಗುವುದು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಸ್.ಎಂ. ಜಯಕರ್ ಪ್ರತಿಕ್ರಿಯಿಸಿದ್ದಾರೆ.