ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಒಂದೂ ಕಾಲು ಶತಮಾನ ಕಂಡ ಮಲ್ಲೇಶ್ವರ ಬಡಾವಣೆ

ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ವಾಣಿಜ್ಯ ಚಟುವಟಿಕೆಗಳ ತಾಣ
Last Updated 6 ಮಾರ್ಚ್ 2022, 2:44 IST
ಅಕ್ಷರ ಗಾತ್ರ

ಬೆಂಗಳೂರು: ಸುತ್ತಲೂ ಕಣ್ಣಿಗೆ ತಂಪಿಡುವ ಹಸಿರು, ಹೊಂಬೆಳಕಿನ ನಡುವೆ ನಡೆದು ಸಾಗುವಾಗ ಮೂಡುವ ಬೆಚ್ಚನೆಯ ಭಾವ, ಬಗೆ ಬಗೆ ತಿನಿಸುಗಳ ಉಪಾಹಾರ ಮಂದಿರಗಳು, ಆಭರಣ ಮಳಿಗೆಗಳು.. ನಗರದ ಅತ್ಯಂತ ಹಳೆಯ ವಸತಿ ಪ್ರದೇಶಗಳಲ್ಲಿ ಒಂದಾದ ಮಲ್ಲೇಶ್ವರ ಬಡಾವಣೆಯ ನೋಟವಿದು.

ತನ್ನ ಹೆಸರಿನಿಂದಲೇ ಗಮನ ಸೆಳೆಯುವ ಮಲ್ಲೇಶ್ವರಕ್ಕೆ 133 ವರ್ಷಗಳ ಇತಿಹಾಸವಿದೆ. ಮೈಸೂರಿನ ಅರಸರಾದ 10ನೇ ಚಾಮರಾಜ ಒಡೆಯರ್‌ ಸೂಚನೆ ಮೇರೆಗೆ ಅಂದಿನ ದಿವಾನರಾಗಿದ್ದ ಕುಮಾರಪುರಂ ಶೇಷಾದ್ರಿ ಅಯ್ಯರ್‌ ಅವರು 1889ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಬಡಾವಣೆಗಳನ್ನು ನಿರ್ಮಿಸಲು ಸಮಿತಿಯೊಂದನ್ನು ರಚಿಸಿದರು. ಸಮಿತಿಯ ಶಿಫಾರಸಿನಂತೆ ಮಲ್ಲೇಶ್ವರ ಬಡಾವಣೆ ನಿರ್ಮಾಣ ಕಾರ್ಯಕ್ಕೂ ಚಾಲನೆ ಸಿಕ್ಕಿತ್ತು. ಆದರೆ ನಿರ್ಮಾಣ ಕಾರ್ಯ ವೇಗ ಪಡೆದಿದ್ದು, 1892ರಲ್ಲಿ ವಿ.ಪಿ.ಮಾಧವರಾಯರು ಸಮಿತಿ ಅಧ್ಯಕ್ಷರಾದ ಬಳಿಕ. 1895ರ ಮಾರ್ಚ್‌ 28 ರಂದು ಸಮಿತಿಯನ್ನು ವಿಸರ್ಜಿಸಿ, ಬಡಾವಣೆಯ ನಿವೇಶನಗಳನ್ನು ಮುನ್ಸಿಪಲ್‌ ಕೌನ್ಸಿಲ್‌ಗೆ ವರ್ಗಾಯಿಸಲಾಯಿತು. ಎಲ್ಲಾ ಸಮುದಾಯದವರಿಗೆ ನಿವೇಶನ ಹಂಚಲು ತೀರ್ಮಾನಿಸಲಾಯಿತು.

ಪ್ಲೇಗ್‌ ಸೋಂಕು: ದೇಶದಲ್ಲಿ1897ರಲ್ಲಿ ಪ್ಲೇಗ್‌ ಲಕ್ಷಾಂತರ ಜನರ ಜೀವ ಬಲಿ ಪಡೆದಿತ್ತು. ಆಗಷ್ಟೇ ನಿರ್ಮಾಣವಾಗಿದ್ದ ಮಲ್ಲೇಶ್ವರ ಬಡಾವಣೆಯಲ್ಲಿ ತಾತ್ಕಾಲಿಕ ಶಿಬಿರಗಳನ್ನು ರಚಿಸಿ ಜನರಿಗೆ ಆಶ್ರಯ ಕಲ್ಪಿಸಲಾಯಿತು. ಶಿಬಿರಗಳಲ್ಲಿ ಆಶ್ರಯ ಪಡೆದವರೇ ಬಳಿಕ ಈ ಬಡಾವಣೆಯಲ್ಲಿ ವಾಸ್ತವ್ಯ ಮುಂದುವರಿಸಿದರು. ಮೈಸೂರಿನ ಹಂಗಾಮಿ ದಿವಾನರಾಗಿದ್ದ, ಮೈಸೂರು ವಿಶ್ವವಿದ್ಯಾಲಯದ ಮೊದಲ ಕುಲಪತಿ ಎಚ್‌.ವಿ.ನಂಜುಂಡಯ್ಯ ಈ ಬಡಾವಣೆಯ ಮೊದಲ ನಿವಾಸಿ ಎಂದು ಹೇಳಲಾಗುತ್ತದೆ. ಮಲ್ಲೇಶ್ವರ ಹೆಸರು ಬರಲು ಇಲ್ಲಿ ಮೊದಲು ಮಲ್ಲಾಪುರ ಎಂಬ ಗ್ರಾಮ ಇದ್ದುದೂ ಕಾರಣ ಎಂಬ ಪ್ರತೀತಿಯೂ ಇದೆ. ಇಲ್ಲಿನ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಿಂದಾಗಿಯೂ ಈ ಪ್ರದೇಶಕ್ಕೆ ಮಲ್ಲೇಶ್ವರ ಎಂದು ನಾಮಕರಣ ಮಾಡಲಾಯಿತು ಎನ್ನಲಾಗುತ್ತದೆ. ಮಲ್ಲೇಶ್ವರ ಧಾರ್ಮಿಕ ಕೇಂದ್ರವೂ ಹೌದು. ಇಲ್ಲಿ ದತ್ತಾತ್ರೇಯ, ನಂದೀಶ್ವರ ಮೊದಲಾದ ಹತ್ತಾರು ದೇವಸ್ಥಾನಗಳಿವೆ, ಯತಿರಾಜ, ರಾಘವೇಂದ್ರಸ್ವಾಮಿ... ಮೊದಲಾದ ಮಠಗಳಿವೆ. ವಾಣಿಜ್ಯೀಕರಣದಿಂದಾಗಿ ಮಲ್ಲೇಶ್ವರವು ಪ್ರಶಾಂತ ವಾತಾವರಣದ ಚಹರೆಯನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ. ಆದಾಗ್ಯೂ ಹಳೆಯ ಬೆಂಗಳೂರಿನ ಸೊಗಡನ್ನು ಇಲ್ಲಿ ಈಗಲೂ ಕಾಣಬಹುದು.

ಕಾಡು ಮಲ್ಲೇಶ್ವರನಿಗೆ ಶಿವಾಜಿ ನಂಟು: ‘ಬಿದಿರು ಜನಾಂಗ ಲಿಂಗರೂಪಿ ಶಿವನಿಗೆ ಕಾಡು ಮಲ್ಲಿಕಾರ್ಜುನ ಎಂದು ನಾಮಕರಣ ಮಾಡಿ ಸಣ್ಣ ಚಪ್ಪರ ನಿರ್ಮಿಸಿ ಪೂಜೆ ಆರಂಭಿಸಿದರು. ಶಿವಾಜಿಯ ಸಹೋದರ ವೆಂಕೋಜಿ ಅಥವಾ ಏಕೋಜಿ 1669ರಲ್ಲಿ ಪ್ರದೇಶದಲ್ಲಿ ಸ್ಥಾಪಿಸಿ ಕಾಡು ಮಲ್ಲೇಶ್ವರ ದೇವಸ್ಥಾನ ನಿರ್ಮಿಸುತ್ತಾರೆ’ಎಂದು ಇತಿಹಾಸಕಾರ ಧರ್ಮೇಂದ್ರ ಮಾಹಿತಿ ನೀಡಿದರು.

ಕಾಡು ಮಲ್ಲೇಶ್ವರನಿಗೆ ಉಂಟು ಶಿವಾಜಿ ನಂಟು
ಕೆಂಪೇಗೌಡರು ಬೆಂಗಳೂರು ನಿರ್ಮಿಸಿದ ನಂತರ ಇಲ್ಲಿ 66 ಕುಲಕಸುಬುಗಳಿಗೆ ನೆಲೆ ನೀಡುತ್ತಾರೆ. ಅದರಲ್ಲಿ ಬುಟ್ಟಿ, ಬಿದಿರು ಹೆಣೆಯುವವರಿದ್ದರು. ಶಿವ ಅವರ ಕುಲದೈವ. ಈಗಿನ ಮಲ್ಲೇಶ್ವರದ ಕಾಡಿನಲ್ಲಿ ಆಗ ಯಥೇಚ್ಛವಾಗಿ ಬಿದಿರು ದೊರೆಯುತ್ತಿತ್ತು. ಅಲ್ಲಿ ಈ ಜನಾಂಗದವರಿಗೆ ಒಮ್ಮೆ ಸ್ವಯಂ ಭೂ ಲಿಂಗ ಕಾಣಿಸಿತು. ಲಿಂಗ ರೂಪಿ ಶಿವನಿಗೆ ಕಾಡು ಮಲ್ಲಿಕಾರ್ಜುನ ಎಂದು ನಾಮಕರಣ ಮಾಡಿ ಸಣ್ಣ ಚಪ್ಪರ ನಿರ್ಮಿಸಿ ಪೂಜೆ ಆರಂಭಿಸಿದರು. ಶಿವಾಜಿಯ ಸಹೋದರ ವೆಂಕೋಜಿ ಅಥವಾ ಏಕೋಜಿ 1669ರಲ್ಲಿ ಪ್ರದೇಶದಲ್ಲಿ ಸ್ಥಾಪಿಸಿ ಕಾಡು ಮಲ್ಲೇಶ್ವರ ದೇವಸ್ಥಾನ ನಿರ್ಮಿಸುತ್ತಾರೆ.ಮೇದರನಿಂಗನ ಗ್ರಾಮಕ್ಕೆ ಅದರ ನಿರ್ವಹಣೆ ವಹಿಸುತ್ತಾರೆ ಎಂದು ಇತಿಹಾಸಕಾರ ಧರ್ಮೇಂದ್ರ ಮಾಹಿತಿ ನೀಡಿದರು.

ಸಂಪಿಗೆ ಮರಗಳು ಮಲ್ಲೇಶ್ವರದ ಹೆಗ್ಗುರುತು
‘ಮಹಾರಾಜ ಮಿಲ್ಸ್‌ (ಈಗಿನ ಮಂತ್ರಿ ಮಾಲ್‌) ಸ್ಥಳದಲ್ಲಿ ದೊಡ್ಡ ಸಂಪಿಗೆ ಮರವಿತ್ತು. ಉದ್ದಕ್ಕೂ ಸಂಪಿಗೆ ಮರಗಳಿದ್ದ ಈ ರಸ್ತೆಯನ್ನು ಸಂಪಿಗೆ ರಸ್ತೆಯೆಂದು ಗುರುತಿಸಲಾಯಿತು. ಅಮ್ಮಣ್ಣಿ ಕಾಲೇಜಿನ ಸ್ಥಳದ ರಸ್ತೆಯಲ್ಲಿ ಬೇವಿನ ಮರಗಳಿದ್ದವು.ಅದಕ್ಕೆ ಬ್ರಿಟೀಷರು ಮಾರ್ಗೋಸಾ ರಸ್ತೆ ಎಂದು ಕರೆದರು’ ಎಂದು ಮಲ್ಲೇಶ್ವರದ ನಿವಾಸಿ ಹಾಗೂ ವಿಮರ್ಶಕ ವಿಜಯಶಂಕರ್‌ ತಿಳಿಸಿದರು.

‘ಸಂಪಿಗೆ ರಸ್ತೆ, ಮಾರ್ಗೋಸಾ ರಸ್ತೆಗಳ ಜೊತೆ ಇಲ್ಲಿ ತೆಂಗಿನ ಮರದ ರಸ್ತೆ, ಸೀಗೆ ಬೇಲಿ ರಸ್ತೆ, ಗಂಧದ ಕೋಟೆ ರಸ್ತೆಗಳೂ ಇವೆ’ ಎಂದು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಉಪಾಧ್ಯಕ್ಷ ರಕ್ಷಿತ್‌ ಶಿವರಾಮ್‌ ವಿವರಿಸಿದರು.

*

ಮಲ್ಲೇಶ್ವರದಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲವಾಗಿದ್ದು ವ್ಯಾಪಾರಿಗಳು ಆಕ್ರಮಿಸಿದ್ದಾರೆ. ಎಲ್ಲೆಂದರಲ್ಲಿ ರಸ್ತೆ ಅಗೆದು ಮಲ್ಲೇಶ್ವರದ ಅಂದ ಕೆಡಿಸಿದ್ದಾರೆ.
-ಮಾವಿನಕೆರೆ ರಂಗನಾಥ್, ಸಾಹಿತಿ

*

ಕಾಡು ಮಲ್ಲೇಶ್ವರ ದೇವಸ್ಥಾನದ ಸುತ್ತ ರುದ್ರಾಕ್ಷಿ, ಬಿಲ್ವ, ಹೂವುಗಳ ಮರಗಳನ್ನು ಬೆಳೆಸುತ್ತಿದ್ದೇವೆ. ಇದಕ್ಕೆ ಪವಿತ್ರ ವನ ಎಂದು ಹೆಸರಿಟ್ಟಿದ್ದೇವೆ.
-ರಕ್ಷಿತ್‌ ಶಿವರಾಮ್‌, ಉಪಾಧ್ಯಕ್ಷರು, ಕಾಡು ಮಲ್ಲೇಶ್ವರ ಗೆಳೆಯರ ಬಳಗ

*

ಮಲ್ಲೇಶ್ವರದಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲವಾಗಿದ್ದು ವ್ಯಾಪಾರಿಗಳು ಆಕ್ರಮಿಸಿದ್ದಾರೆ. ಎಲ್ಲೆಂದರಲ್ಲಿ ರಸ್ತೆ ಅಗೆದು ಮಲ್ಲೇಶ್ವರದ ಅಂದ ಕೆಡಿಸಿದ್ದಾರೆ.
-ಮಾವಿನಕೆರೆ ರಂಗನಾಥ್, ಸಾಹಿತಿ

*

ಕಾಡು ಮಲ್ಲೇಶ್ವರ ದೇವಸ್ಥಾನದ ಸುತ್ತ ರುದ್ರಾಕ್ಷಿ, ಬಿಲ್ವ, ಹೂವುಗಳ ಮರಗಳನ್ನು ಬೆಳೆಸುತ್ತಿದ್ದೇವೆ. ಇದಕ್ಕೆ ಪವಿತ್ರ ವನ ಎಂದು ಹೆಸರಿಟ್ಟಿದ್ದೇವೆ.
-ರಕ್ಷಿತ್‌ ಶಿವರಾಮ್‌, ಉಪಾಧ್ಯಕ್ಷರು, ಕಾಡು ಮಲ್ಲೇಶ್ವರ ಗೆಳೆಯರ ಬಳಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT