ಶನಿವಾರ, ಮೇ 21, 2022
19 °C
ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ

ಬದಲಾಗುತ್ತಿದೆ ಜಾತಿಯ ಗತಿಶೀಲತೆ: ಸಾಹಿತಿ ಬರಗೂರು ರಾಮಚಂದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ಜಾತಿಯ ಗತಿಶೀಲತೆ ಬದಲಾಗುತ್ತಿದೆ. ಮೇಲ್ಜಾತಿಗಳು ಉಪಜಾತಿಗಳನ್ನು ಮರೆತು ಒಂದಾಗುತ್ತಿದ್ದಾರೆ. ಆದರೆ, ಕೆಳವರ್ಗದ ಜಾತಿಗಳಲ್ಲಿ ಉಪಜಾತಿಗಳ ಒಡಕು ಹೆಚ್ಚಾಗುತ್ತಿದೆ. ಈ ವೈರುಧ್ಯ ಜಾತಿ ವಿನಾಶಕ್ಕಿಂತ, ಜಾತಿ ವಿಕಾಸಕ್ಕೆ ಸಾಕ್ಷಿಯಾಗುತ್ತಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಬಂಡಾಯ ಸಾಹಿತ್ಯ ಸಂಘಟನೆಯು ಭಾನುವಾರ ಆಯೋಜಿಸಿದ್ದ ‘ಮೀಸಲಾತಿ: ನೂರು ವರ್ಷ’ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

‘ಮೀಸಲಾತಿ ಬಗ್ಗೆ ಹಲವರಲ್ಲಿ ಅಸಮಾಧಾನ ಇದೆ. ಎಲ್ಲ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೇ ಆವರಿಸಿದ್ದಾರೆ ಎಂಬ ಅಸಹನೆ ಇದೆ. ಸಂವಿಧಾನ ಎಂದರೆ ಮೀಸಲಾತಿ ಎಂದು ಅರ್ಥೈಸಿಕೊಂಡಿದ್ದಾರೆ. ಆದರೆ, ಕೆಳವರ್ಗದ ಎಷ್ಟು ಮಂದಿಗೆ ಉನ್ನತ ಸ್ಥಾನಗಳು ಸಿಕ್ಕಿವೆ ಎಂಬುದನ್ನು ಮೂಲಭೂತವಾದಿಗಳು ಪ್ರಶ್ನಿಸಿಕೊಳ್ಳಬೇಕು’ ಎಂದರು.

‘ಮನುವಾದ ವಿರೋಧಿಸುವ ಮೂಲಕ ಸಮಾಜದಲ್ಲಿ ಶೋಷಣೆಗೆ ಒಳಗಾದವರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಮಾನವತಾವಾದದ ಮೀಸಲಾತಿ ಸಹಕಾರಿಯಾಯಿತು. ಇದರಿಂದ ಅನೇಕರಿಗೆ ಉದ್ಯೋಗ ಸಿಕ್ಕಿದೆ. ಶೋಷಿತರು, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯ ಅಭಿವೃದ್ಧಿಯಾಗಿದೆ’ ಎಂದರು.

‘ಗಾಂಧಿಯನ್ನು ಹತ್ಯೆಗೈದ ಗೋಡ್ಸೆ ಹೆಸರು ಹೇಳಲು ಜನ ಹಿಂಜರಿಯುತ್ತಾರೆ. ಸಂವಿಧಾನ ಸುಟ್ಟು ವಿಕೃತಿ ಮೆರೆಯುವ, ಗಾಂಧಿ ಅವರ ಪ್ರತಿಕೃತಿಗೆ ಗುಂಡು ಹಾರಿಸುವ ಮನೋವಿಕಾರ ಉಳ್ಳವರಿದ್ದಾರೆ. ಮೀಸಲಾತಿ ಮೆರಿಟ್‌ ವಿರೋಧಿ ಎನ್ನುವವರಿದ್ದಾರೆ. ನನ್ನ ಪ್ರಕಾರ ಈ ಪ್ರವೃತ್ತಿ ಅಪ್ಪಟ ಹುಸಿ’ ಎಂದರು.

ಸಾಹಿತಿ ರಾಜಪ್ಪ ದಳವಾಯಿ, ‘ಸಂವಿಧಾನದಲ್ಲಿ ಮೀಸಲಾತಿ ಉಲ್ಲೇಖಿಸುವ ಹಲವು ವಿಧಿಗಳಿವೆ. ಹಲವರಿಗೆ ಇದರ ಇದರ ಮಾಹಿತಿ ಇಲ್ಲ. ಈ ಎಲ್ಲ ವಿಧಿಗಳ ಸಮರ್ಪಕ ಬಳಕೆಯಲ್ಲಿ ಹಿಂದುಳಿದ ವರ್ಗ ಸೋತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು