ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನದಿಂದ ಚಿಂತನಾ ಶಕ್ತಿ ಕುಸಿತ: ಬಸವರಾಜ ಬೊಮ್ಮಾಯಿ

Last Updated 6 ನವೆಂಬರ್ 2022, 21:05 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ‘ವಿಸ್ತಾರ ಸುದ್ದಿವಾಹಿನಿ’ಗೆ ಭಾನುವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಅವರು, ‘ಮಾಧ್ಯಮಗಳು ಜನರ ದನಿಯಾಗಬೇಕು. ಇಂದು ತಂತ್ರಜ್ಞಾನ ಇಡೀ ಬದುಕನ್ನು ಆವರಿಸಿದೆ. ಆದರೆ ನಮ್ಮ ಚಿಂತನಾ ಶಕ್ತಿ ಕಡಿಮೆ ಆಗುತ್ತಿದೆ. ಒಂದು ಬಟನ್‌ ಒತ್ತಿದರೆ ಎಲ್ಲವೂ ಸಿಗುವಂತೆ ತಂತ್ರಜ್ಞಾನ ಬೆಳೆದಿದೆ’ ಎಂದರು.

‘ಆದರೆ, ಇಂತಹ ಸಂದರ್ಭದಲ್ಲಿ ಅಂತಃಕರಣ, ಮಾನವೀಯತೆ, ಪ್ರೀತಿ, ವಿಶ್ವಾಸವನ್ನು ಮರೆಯಬಾರದು. ಅದನ್ನು ತಂತ್ರಜ್ಞಾನ ಹೇಳಿಕೊಡದು. ಯಾವುದೇ ರಾಜಕಾರಣಿಯ ತಲೆ ತಣ್ಣಗಿರಬೇಕು, ಹೃದಯ ಬೆಚ್ಚಗಿರಬೇಕು ಎಂದು ಹಿರಿಯರು ಹೇಳುತ್ತಾರೆ ’ಎಂದು ಬಸವರಾಜ ಬೊಮ್ಮಾಯಿ ಅವರು ನುಡಿದರು.

ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ವಿಧಾನಸಭೆ ಅಧ್ಯಕ್ಷ ವಿಶ್ವೇಶರ ಹೆಗಡೆ ಕಾಗೇರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಭೈರತಿ ಬಸವರಾಜ, ಆರ್‌.ಅಶೋಕ, ಎಸ್‌.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್‌, ವಿಸ್ತಾರ ಮೀಡಿಯಾದ ಸಿಇಒ ಹರಿಪ್ರಕಾಶ್‌ ಕೋಣೆಮನೆ ಇದ್ದರು.

ಖಾಕಿ, ಖಾವಿ, ಖಾದಿ ಗೌರವ ಉಳಿದಿಲ್ಲ: ಡಿ.ಕೆ.ಶಿವಕುಮಾರ್‌
ಬೆಂಗಳೂರು:
‘ಈಗ ಖಾಕಿ, ಖಾವಿ, ಖಾದಿ ಈ ಯಾವುದರ ಗೌರವವೂ ಉಳಿದಿಲ್ಲ. ಎಲ್ಲ ಗೋವಿಂದಾ, ಗೋವಿಂದ ಆಗಿ ಹೋಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

‘ವಿಸ್ತಾರ’ ಸುದ್ದಿ ವಾಹಿನಿಯ ಉದ್ಘಾಟನೆ ಸಮಾರಂಭದಲ್ಲಿ ‘ನಿಮ್ಮೊಡನೆ ನಾವು’ ಸಹಾಯವಾಣಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಹಿಂದೆ ಶಾಸಕರೆಂದರೆ ದೊಡ್ಡ ಗೌರವ ಇತ್ತು. ನಾನು ಬಾಲಕನಾಗಿದ್ದಾಗ ಖಾಸಗಿ ಶಾಲೆಯಲ್ಲಿ ಸೀಟು ಬೇಕು ಎಂದು ನನ್ನ ತಂದೆ ನನ್ನನ್ನು ಶಾಸಕ ಕರಿಯಪ್ಪ ಅವರ ಬಳಿ ಕರೆದುಕೊಂಡು ಹೋಗಿ ಕಾಲಿಗೆ ಬೀಳು ಅಂತ ಅಂದಿದ್ದರು. ಆಗ ಶಾಸಕರೆಂದರೆ ಅಷ್ಟು ಗೌರವ. ಆದರೆ, ಈಗ ಪರಿಸ್ಥಿತಿ ಕೆಟ್ಟು ಹೋಗಿದೆ. ಟಿವಿಯಲ್ಲಿ ಖಾಕಿ ಬಟ್ಟೆ ಹಾಕಿಕೊಂಡಿರುವವರನ್ನು ನೋಡಿದರೆ ಕಳ್ಳ, ಕಳ್ಳ ಎನ್ನುತ್ತಾರೆ’ ಎಂದರು.

‘ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮರಂಗ ಗೌರವ ಉಳಿಸಿಕೊಂಡಿದೆ. ರಾಜಕಾರಣಿಗಳ ಗೌರವದ ಬಗ್ಗೆಯೂ ಸ್ವಲ್ಪ ಯೋಚಿಸಿ’ ಎಂದರು.

‘ಸಹಾಯವಾಣಿಗೆ ಕರೆ ಮಾಡಿ ಯಾವುದಕ್ಕೆ ಎಷ್ಟು ದುಡ್ಡು ಮತ್ತಿತರ ವಿಚಾರಗಳ ಬಗ್ಗೆ ಸಿ.ಎಂಗೆ ದೂರು ಕೊಡೋಣ ಎಂದುಕೊಂಡೆ. ನನ್ನ ದೂರುಗಳು ಇದ್ದವು. ಆದರೆ, ವಿರೋಧಪಕ್ಷದ ಕೆಲಸ ಮಾಡಬೇಕಲ್ಲ. ಬೇರೆ ಸಂದರ್ಭದಲ್ಲಿ ಮಾಡಬಹುದೆಂಬ ಸುಮ್ಮನಾದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT