ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜರಾಜೇಶ್ವರಿನಗರ: ಸಂಭ್ರಮದ ಬಸವೇಶ್ವರ ಸ್ವಾಮಿ ರಥೋತ್ಸವ

ಕಡಲೆಕಾಯಿ ಪರಿಷೆ
Published 15 ಜನವರಿ 2024, 15:12 IST
Last Updated 15 ಜನವರಿ 2024, 15:12 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಸೋಂಪುರ ಬಳಿಯ ವರಹಾಸಂದ್ರದಲ್ಲಿ ಬಸವೇಶ್ವರ ದೇವಸ್ಥಾನ ಸಮಿತಿಯವರು ಸೋಮವಾರ ಆಯೋಜಿಸಿದ್ದ  ಬಸವೇಶ್ವರ ಸ್ವಾಮಿ ದೇವರ ರಥೋತ್ಸವ, ಕಡಲೆಕಾಯಿ ಪರಿಷೆ ಸಂಭ್ರಮದಿಂದ ನಡೆಯಿತು. ಸುತ್ತ–ಮುತ್ತಲಿನ ಮೂವತ್ತೆರಡು ಹಳ್ಳಿಗಳ ಗ್ರಾಮಸ್ಥರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಬಸವೇಶ್ವರ ಸ್ವಾಮಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ’ಸಂಕ್ರಾಂತಿ ಹಬ್ಬವನ್ನು ಎಲ್ಲ ವರ್ಗದ ಜನರು ಸೇರಿ ಆಚರಿಸಿಕೊಂಡು ಬರುತ್ತಿರುವುದು ಸಂತಸವಾಗಿದೆ. ಎಲ್ಲರಿಗೂ ಆರೋಗ್ಯ, ನೆಮ್ಮದಿ ಸಿಗಲಿ’ ಎಂದು ಆಶಿಸಿದರು.

ಮುಮ್ಮಡಿ ನಿರ್ವಾಣ ಸ್ವಾಮಿಜಿ, ಶಿವರುದ್ರ ಸ್ವಾಮಿಜಿ, ಹರಗುರು ಚರಮೂರ್ತಿ ಸ್ವಾಮಿಜಿಗಳು ರಥೋತ್ಸವ ಮತ್ತು ಕಡಲೆಕಾಯಿ ಪರಿಷೆಗೆ ಚಾಲನೆ ನೀಡುತ್ತಿದ್ದಂತೆ ಭಕ್ತರ ಹರ್ಷಘೋಷ ಮುಗಿಲು ಮುಟ್ಟಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ಎಂ .ರುದ್ರೇಶ್ ಅವರು ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ತಲಾ ಎರಡು ಸೇರು ಕಡಲೆಕಾಯಿ, ಒಂದು ಜಲ್ಲೆ ಕಬ್ಬನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ‘ಚೋಳರ ಕಾಲದಲ್ಲಿ ನಿರ್ಮಿಸಿದ ಬಸವಣ್ಣ ದೇವರನ್ನು ಪೂರ್ವಿಕರು ಪೂಜಿಸಿಕೊಂಡು ಬರುತ್ತಿದ್ದರು. ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ ನಂತರ 16 ವರ್ಷಗಳಿಂದ ಕಡಲೆಕಾಯಿ ಪರಿಷೆ ಮತ್ತು  ಸಂಕ್ರಾಂತಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಈ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ನಗರದ ಯುವ ಜನಾಂಗಕ್ಕೆ ಪರಿಚಯಿಸುತ್ತಿದ್ದೇವೆ‘ ಎಂದು ಹೇಳಿದರು.

ಜಾತ್ರಾಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಎರಡನೇ ದಿನದ ಕುಸ್ತಿ ಪಂದ್ಯಾವಳಿಗೆ ನಟ ಪ್ರೇಮ್ ಚಾಲನೆ ನೀಡಿದರು. ’ಆರೋಗ್ಯವಂತ ಸಮಾಜಕ್ಕೆ ಕುಸ್ತಿ, ಕರಾಟೆ, ಯೋಗ, ಕ್ರೀಡೆಗಳು ಅವಶ್ಯಕವಾಗಿ ಬೇಕಾಗಿವೆ’ ಎಂದು ಹೇಳಿದರು.

ಕರುನಾಡ ವಿಜಯಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ದೀಪಕ್ ಅವರು ವಿವಿಧ ಹೂವು, ಬಣ್ಣಗಳಿಂದ ಶೃಂಗರಿಸಿ ಮೆರವಣಿಗೆ ಬಂದಿದ್ದ ಗೋವುಗಳಿಗೆ ಪೂಜೆ ನೆರವೇರಿಸಿ, ಅಲಂಕೃತ ರಾಸುಗಳ ಮೆರವಣಿಗೆಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT