ಶಾಸಕರ ಅಧ್ಯಕ್ಷತೆಯಲ್ಲೇ ಸಮಿತಿ? ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾಪ

ಶನಿವಾರ, ಜೂಲೈ 20, 2019
28 °C
ವಾರ್ಡ್‌ ಸಮಿತಿ ಮೇಲೆ ಕರಿನೆರಳು

ಶಾಸಕರ ಅಧ್ಯಕ್ಷತೆಯಲ್ಲೇ ಸಮಿತಿ? ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾಪ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನವನ್ನು ಸಮರ್ಪಕವಾಗಿ ಕೈಗೊಳ್ಳುವ ಸಲುವಾಗಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಸಮಿತಿ ರಚಿಸುವ ಪ್ರಯತ್ನ ಸದ್ದಿಲ್ಲದೇ ನಡೆದಿದೆ.

198 ವಾರ್ಡ್‌ಗಳಲ್ಲಿ ಆಯಾ ಪಾಲಿಕೆ ಸದಸ್ಯರ ಅಧ್ಯಕ್ಷತೆಗಳಲ್ಲಿ ವಾರ್ಡ್‌ ಸಮಿತಿಗಳಿವೆ. ಅದೇ ರೀತಿ ವಿಧಾನಸಭಾ ಕ್ಷೇತ್ರವಾರು ಆ ವ್ಯಾಪ್ತಿಯ ಪಾಲಿಕೆ ಸದಸ್ಯರನ್ನೂ ಒಳಗೊಂಡಂತೆ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವ ವಿಷಯವನ್ನು ಇದೇ ಬುಧವಾರ ನಡೆಯುವ ಕೌನ್ಸಿಲ್‌ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ.

ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ಕಾನೂನುಬದ್ಧವಾಗಿ ರೂಪಿಸಿರುವ ವಾರ್ಡ್‌ ಸಮಿತಿಗಳ ಅಧಿಕಾರವನ್ನು ಶಾಸಕರ ನೇತೃತ್ವದ ಸಮಿತಿಯು ಕಿತ್ತುಕೊಳ್ಳುವ ಅಪಾಯ ಇದೆ ಎಂದು ಸಾಮಾಜಿಕ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

‘ಶಾಸಕರ ಅಧ್ಯಕ್ಷತೆ ಸಮಿತಿ ಪ್ರತಿ ತಿಂಗಳು ಸಭೆ ನಡೆಸಬೇಕು. ಪಾಲಿಕೆಯ ಸ್ಥಳೀಯ ಕಾರ್ಯಪಾಲಕ ಎಂಜಿನಿಯರ್ ಸಮಿತಿಯ ಸಂಚಾಲಕರನ್ನಾಗಿ ನೇಮಿಸಬೇಕು. ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಇತರ ಅಧಿಕಾರಿಗಳು ಕೂಡ ಸಭೆಯಲ್ಲಿ ಭಾಗವಹಿಸಬೇಕು’ ಎಂಬ ಪ್ರಸ್ತಾವವೂ ಕಾರ್ಯಸೂಚಿಯಲ್ಲಿದೆ. 

2018ರ ಸೆ.6ರಂದು ನಡೆದಿದ್ದ ವಿಧಾನ ಸಭೆ ಸದಸ್ಯರ ಖಾಸಗಿ ಮಸೂದೆಗಳ ಹಾಗೂ ನಿರ್ಣಯಗಳ ಸಮಿತಿಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.

ಭೂ ಸಾರಿಗೆ ಉಪಕರ: ಆಸ್ತಿ ತೆರಿಗೆ ಮೇಲೆ ಶೇ 2ರಷ್ಟು ನಗರ ಭೂಸಾರಿಗೆ ಉಪಕರ ಸಂಗ್ರಹಿಸದೆ ಇರುವ ಬಗ್ಗೆ ಮಹಾಲೇಖಪಾಲರಿಂದ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ, ಉಪಕರ ಸಂಗ್ರಹಿಸಲು ಸೂಕ್ತ ಕ್ರಮ ಕೈಗೊಳ್ಳುವ ಪ್ರಸ್ತಾವವೂ ಕಾರ್ಯಸೂಚಿಯಲ್ಲಿದೆ.

‘ಅಸಾಂವಿಧಾನಿಕ ಕ್ರಮ’

‌‘ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ವಾರ್ಡ್‌ ಸಮಿತಿಗಳನ್ನು ರಚಿಸಲಾಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವುದು ಅಸಾಂವಿಧಾನಿಕ ಕ್ರಮ. ಇದರಿಂದ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಧಕ್ಕೆ ಉಂಟಾಗಲಿದೆ’ ಎಂದು ‘ಸಿಟಿಜನ್ಸ್‌ ಫಾರ್ ಬೆಂಗಳೂರು’ ಸಂಘಟನೆಯ ಸಹಸಂಸ್ಥಾಪಕ ಶ್ರೀನಿವಾಸ್ ಅಲವಿಲ್ಲಿ ಅಭಿಪ್ರಾಯಪಟ್ಟರು.

‘ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ವಾರ್ಡ್‌ ಸಮಿತಿಗಳು ಇವೆ. ಅದರ, ಮೇಲೊಂದು ವಿಧಾನಸಭಾ ಕ್ಷೇತ್ರವಾರು ಸಮಿತಿ ರಚನೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಶಾಸಕರು ಮಹಾನಗರ ಯೋಜನಾ ಸಮಿತಿ (ಎಂಪಿಸಿ) ಸದಸ್ಯರಾಗಿರುತ್ತಾರೆ. ಅವರು ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಅಲ್ಲಿ ನೀಡಬಹುದು’ ಎಂದು ಹೇಳಿದರು.

‘ವಾರ್ಡ್‌ ಸಮಿತಿಯ ಸಭೆಗಳೇ ಪ್ರತಿತಿಂಗಳು ನಡೆಯುತ್ತಿಲ್ಲ. ವಾರ್ಡ್‌ ಸಮಿತಿಗಳನ್ನು ಬಲಪಡಿಸುವ ಪ್ರಮಾಣಿಕ ಪ್ರಯತ್ನ ನಡೆದಿಲ್ಲ. ಈ ನಡುವೆ ಶಾಸಕರ ನೇತೃತ್ವದ ಸಮಿತಿಯನ್ನು ರಚಿಸುವುದರ ಅಗತ್ಯವಾದರೂ ಏನು’ ಎಂದು ವಾರ್ಡ್‌ ಸಮಿತಿ ಬಲಪಡಿಸುವ ಹೋರಾಟದಲ್ಲಿ ಸಕ್ರಿಯವಾಗಿರುವ ಸಿಎಫ್‌ಬಿಯ ಸದಸ್ಯ ಉಮೇಶ್‌ ಬಾಬು ಪಿಳ್ಳೇಗೌಡ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !