ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮತದಾರರು ನೋಂದಣಿಯಾಗಿದ್ದಾರೆ.
2023ರ ಜನವರಿ 1ರಂದು ಪ್ರಕಟಿಸಿದ್ದ ಮತದಾರರ ಅಂತಿಮ ಪಟ್ಟಿಯಲ್ಲಿ 92,09,917 ಮತದಾರರಿದ್ದರು. ಅ.27ರಂದು ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯಲ್ಲಿ ಮತದಾರರ ಸಂಖ್ಯೆ 97,90,499 ರಷ್ಟಾಯಿತು. ಒಟ್ಟಾರೆ ಹತ್ತು ತಿಂಗಳ ಅವಧಿಯಲ್ಲಿ 5,80,582 ಮತದಾರರು ಹೆಚ್ಚಾಗಿದ್ದಾರೆ.
ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ಪರಿಷ್ಕರಣೆ ಕೈಗೊಂಡಿದ್ದು, ಅ.27ರಂದು ಕರಡು ಪಟ್ಟಿ ಪ್ರಕಟಿಸಲಾಗಿದೆ. ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು ಎಂದು ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್ ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.
ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಮತಗಟ್ಟೆಗಳ ಸಂಖ್ಯೆಯೂ 8,615 ರಿಂದ 8,982ಕ್ಕೆ ಹೆಚ್ಚಿಸಲಾಗಿದೆ. ಮತದಾರರ ನೋಂದಣಿಗಾಗಿ ವಿಶೇಷ ಅಭಿಯಾನವನ್ನೂ ನಡೆಸಲಾಗುತ್ತದೆ. ಸದ್ಯದಲ್ಲೇ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದರು.
17 ವರ್ಷ ತುಂಬಿದವರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಅವಕಾಶವಿದ್ದು, ಜ.1, ಏ.1, ಜುಲೈ 1 ಮತ್ತು ಅ.1 ಅನ್ನು ಅರ್ಹತಾ ದಿನಗಳನ್ನಾಗಿ ನಿಗದಿಪಡಿಸಲಾಗಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ಮತದಾರರ ಕರಡು ಪಟ್ಟಿಯನ್ನು ಪರಿಶೀಲಿಸಿಕೊಂಡು, ಅದರಲ್ಲಿ ಹೆಸರು ಬಿಟ್ಟು ಹೋಗಿದ್ದರೆ, ಹೆಸರು ತಪ್ಪಾಗಿದ್ದರೆ, ಭಾಗದ ಸಂಖ್ಯೆ ವರ್ಗಾವಣೆಯಾಗಬೇಕಿದ್ದರೆ, ಮತದಾರರ ಹೆಸರನ್ನು ತೆಗೆದು ಹಾಕಲು ಮನವಿ ಸಲ್ಲಿಸುವುದು, ಆಕ್ಷೇಪಣೆಗಳನ್ನು ಮತದಾರರ ನೋಂದಣಾಧಿಕಾರಿಗೆ ದೂರು ಸಲ್ಲಿಸಬಹುದು ಎಂದರು.
ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಹರೀಶ್ ಕುಮಾರ್, ಡಾ. ದಾಕ್ಷಾಯಿಣಿ, ಡಾ. ಕೆ. ಜಗದೀಶ್ ನಾಯ್ಕ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಅಜಯ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.