ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೆನ್ಯೂ ರಸ್ತೆ: ಕಾಮಗಾರಿ ಪೂರ್ಣಗೊಳಿಸಲು ಮಾರ್ಚ್ ಗಡುವು

ಅವೆನ್ಯೂ ರಸ್ತೆ: ಸ್ಮಾರ್ಟ್ ಸಿಟಿ ಯೋಜನೆ
Last Updated 24 ಫೆಬ್ರುವರಿ 2022, 19:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅವೆನ್ಯೂ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ನಡೆಯುತ್ತಿರುವ ಕಾಮಗಾರಿಗಳನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಅಧ್ಯಕ್ಷ ರಾಕೇಶ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದ ಅವರು, ‘ಕಾಮಗಾರಿಯಿಂದ ಸಾರ್ವಜನಿಕರ ಓಡಾಟಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ರಾತ್ರಿ ವೇಳೆಯೂ ಕೆಲಸ ನಿರ್ವಹಿಸುವ ಮೂಲಕ ಕಾಮಗಾರಿಗಳು ಗಡುವಿನೊಳಗೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ಮೈಸೂರು ಬ್ಯಾಂಕ್ ವೃತ್ತದಿಂದ ಎಸ್ ಜೆ ಪಿ ರಸ್ತೆಯನ್ನು ಸಂಪರ್ಕಿಸುವ 1.02 ಕಿ.ಮೀ ಉದ್ದದ ಈ ರಸ್ತೆಯ ಎರಡೂ ಬದಿಗಳಲ್ಲಿ ಕುಡಿಯುವ ನೀರಿನ ಕೊಳವೆಗಳನ್ನು ಅಳವಡಿಸಬೇಕಾಗಿದ್ದು, ನಂತರ ಪಾದಚಾರಿ ಮಾರ್ಗ ನಿರ್ಮಿಸಬೇಕಾಗಿದೆ. ಕೊಳವೆ ಅಳವಡಿಸುವ ಕಾಮಗಾರಿಯನ್ನು ಜಲಮಂಡಳಿ ನಿರ್ವಹಿಸುತ್ತಿದೆ.

ವರ್ತಕರೊಂದಿಗೆ ಚರ್ಚೆ: ಅವೆನ್ಯೂ ರಸ್ತೆಯ ದೊಡ್ಡಪೇಟೆ ವೃತ್ತದ ಸುಂದರೀಕರಣ, ಅಗ್ನಿಶಾಮಕ ಘಟಕಗಳ ಸ್ಥಾಪನೆ, ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡುವಂತೆ ಹಾಗೂ ಪಾದಚಾರಿ ಮಾರ್ಗದ ಅಭಿವೃದ್ಧಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ವರ್ತಕರು ಒತ್ತಾಯಿಸಿದರು.‌ ಇದಕ್ಕೆ ಸ್ಪಂದಿಸಿದ ರಾಕೇಶ್ ಸಿಂಗ್, ಈ ಕುರಿತು ಕೂಡಲೇ‌ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸ್ಮಾರ್ಟ್ ಸಿಟಿ ಲಿಮಿಟೆಡ್‌ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆ ವೇಳೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯ ಮುಖ್ಯ ಎಂಜಿನಿಯರ್ ವಿನಾಯಕ ಸೂಗೂರ್, ಬಿಬಿಎಂಪಿಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಬಸವರಾಜ್ ಕಬಾಡೆ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

‘ಪ್ರಜಾವಾಣಿ’ಯು ಇದೇ 19ರ ಸಂಚಿಕೆಯಲ್ಲಿ ‘ಅವೆನ್ಯೂ– ಫುಟ್‌ಪಾತ್‌ ಮಾಯ, ಓಡಾಟಕ್ಕೆ ಕಿರಿಕಿರಿ’ ಎಂಬ ವಿಶೇಷ ವರದಿಯನ್ನು ಪ್ರಕಟಿಸುವ ಮೂಲಕ ಅವೆನ್ಯೂ ರಸ್ತೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT