ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಬದಿ ವ್ಯಾಪಾರಿಗಳ ಕೈ ಆಕಾಶ ನೋಡದಿರಲಿ: ಬಸವರಾಜ ಬೊಮ್ಮಾಯಿ

ಸ್ವ–ನಿಧಿ ಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಯ
Last Updated 18 ಜುಲೈ 2022, 19:26 IST
ಅಕ್ಷರ ಗಾತ್ರ

ಬೆಂಗಳೂರು: ‘ಬೀದಿಬದಿ ವ್ಯಾಪಾರಿಗಳ ಕೈ ಭೂಮಿಯನ್ನೇ ನೋಡಬೇಕು, ಆಕಾಶ ನೋಡಬಾರದು. ಇದೇ ನಮ್ಮ ಆಶಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಎಲ್ಲಿ ಆರ್ಥಿಕ ಸ್ವಾವಲಂಬನೆ ಇರುತ್ತದೆಯೋ ಅಲ್ಲಿ ಸ್ವಾಭಿಮಾನ ಇರುತ್ತದೆ. ಮೀಟರ್‌ ಬಡ್ಡಿ ತೆಗೆದುಕೊಳ್ಳದೆ ನೇರವಾಗಿ ಸರ್ಕಾರ ನೆರವು ನೀಡಿ, ಅವರು ಆರ್ಥಿಕ
ಸ್ವಾವಲಂಬಿಗಳಾಗುವಂತೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವನಿಧಿ ಯೋಜನೆ ಜಾರಿಗೆ ತಂದಿದ್ದಾರೆ’ ಎಂದರು.

ಬೀದಿಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಆಯೋಜಿಸಿದ್ದ ಸ್ವ–ನಿಧಿ ಮಹೋತ್ಸವ ಸಮಾರೋಪದಲ್ಲಿ ಸೋಮವಾರ ಮಾತನಾಡಿದ ಅವರು, ‘ಯುವಕರಿಗಾಗಿ ಮುದ್ರಾ, ಸ್ತ್ರೀಶಕ್ತಿ ಸಂಘಗಳಿಗೆ ನೇರವಾಗಿ ಹಣಕಾಸು ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದೇ ರೀತಿ ಬೀದಿಬದಿ ವ್ಯಾಪಾರಿಗಳಿಗೆ ನೆರವು ನೀಡಲು ಸ್ವನಿಧಿ ಜಾರಿಗೆ ತರಲಾಗಿದೆ’ ಎಂದರು.

‘ಬೀದಿ ವ್ಯಾಪಾರಿಗಳಿಗೆ ಮೂರು ಹಂತದಲ್ಲಿ ಹಣ ನೀಡಲಾಗುತ್ತದೆ. ಅವರಲ್ಲಿ ಸ್ವಾವಲಂಬನೆ ತರಲು ಈ ರೀತಿ ಹಂತವಾಗಿ ಹಣ ನೀಡಲಾಗುತ್ತದೆ. ಸಬ್ಸಿಡಿ ಕೂಡ ಸಿಗುತ್ತದೆ. ಸಾಹುಕಾರರು ಬಂಡವಾಳದಿಂದ ಬ್ಯಾಂಕ್‌ನಿಂದ ಸಾಲ ಪಡೆದು ಉದ್ದಿಮೆ ಸ್ಥಾಪಿಸುತ್ತಾರೆ. ಆದರೆ ನೀವು ಬಂಡವಾಳ ಇಲ್ಲದಿದ್ದರೂ ಹಗಲು–ರಾತ್ರಿ ದುಡಿದು ಆರ್ಥಿಕವಾಗಿ ಸಬಲರಾಗುತ್ತೀರಿ. ತೆರಿಗೆ ನೀಡುತ್ತೀರಿ. ನಿಮ್ಮಿಂದ ದೇಶ ಆರ್ಥಿಕವಾಗಿ ವೃದ್ಧಿಯಾಗುತ್ತಿದೆ‘ ಎಂದು ಹೊಗಳಿದರು.

‘ರಸ್ತೆ ಅಭಿವೃದ್ಧಿಗೆ ಹೆಚ್ಚು ಹಣ ನೀಡಿದರೆ, ಕೆಳ ಹಂತದಲ್ಲಿ ಡಾಂಬರು ಹಾಕುವವರು ಇರುತ್ತಾರಲ್ಲ ಅವರಿಗೆ ಅನುಕೂಲವಾಗುತ್ತದೆ’ ಎಂದರು.

‘1.86 ಲಕ್ಷ ಜನರಿಗೆ ಸ್ವ–ನಿಧಿ ಯೋಜನೆ ಜಾರಿಗೆಯಾಗಬೇಕು. 70 ಸಾವಿರ ಜನರಿಗೆ ನೀಡಿದ್ದೇವೆ. ಹೀಗಾಗಿ ಎಲ್ಲ ಕಡೆಗೆ ಹೋಗಿ ಅಧಿಕಾರಿಗಳು ಟೆಂಟ್‌ ಹಾಕಿಕೊಂಡು ಪ್ರಚಾರ
ಮಾಡಿ, ಸಾಲ ಕೊಡಿ’ ಎಂದು ಸೂಚಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ ಸ್ವ-ನಿಧಿ ಯೋಜನೆಯ ಕುರಿತು ಪ್ರಧಾನಿಯೇ ಸಂದೇಶ ಕಳುಹಿಸಿದ್ದರು. ಯೋಜನೆ ಪರಿಚಯಿಸುವ 40 ಬೋರ್ಡ್‌ಗಳಿದ್ದವು. ಅವುಗಳಲ್ಲಿ ಸಾಂಕೇತಿಕವಾಗಿ‌ 9 ಅನ್ನು ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸಲಾಯಿತು.

ಸಾಲದ ಮೇಳ: ಸ್ವ-ನಿಧಿ ಮಹೋತ್ಸವದಲ್ಲಿ ಆಯೋಜಿಸಲಾಗಿದ್ದ ಸಾಲ ಮೇಳದಲ್ಲಿ 1,164 ಬೀದಿ ಬದಿ ವ್ಯಾಪಾರಿಗಳಿಂದ ಅರ್ಜಿ ಸ್ವೀಕರಿಸ ಲಾಗಿದ್ದು, ಮೊದಲನೇ ಕಂತಿನಲ್ಲಿ ತಲಾ ₹10 ಸಾವಿರ ಮಂಜೂರು ಮಾಡಲಾಗಿದೆ. ಸಂಸದ ಪಿ.ಸಿ.ಮೋಹನ್, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT