ಶುಕ್ರವಾರ, ಜನವರಿ 22, 2021
19 °C
₹ 2,800 ಕೋಟಿ ಪಾವತಿ ಬಾಕಿ: ಬಿಬಿಎಂಪಿ ವಿರುದ್ಧ ಆರೋಪ

ಬಿಲ್‌ ಬಾಕಿ: ಗುತ್ತಿಗೆದಾರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಾಲಿಕೆ ವತಿಯಿಂದ ಕೈಗೊಂಡ ಕಾಮಗಾರಿಗಳಿಗೆ ಬಾಕಿ ಬಿಲ್‌ ಗಳನ್ನು ಪಾವತಿಸುವಂತೆ ಒತ್ತಾಯಿಸಿ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್, ‘ಬಿಬಿಎಂಪಿಯು 25 ತಿಂಗಳಿಂದ ವಿವಿಧ ಕಾಮಗಾರಿಗಳ ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿದೆ. 500ಕ್ಕೂ ಅಧಿಕ ಕಾಮಗಾರಿಗಳಿಗೆ ಸಂಬಂಧಿಸಿ ₹2,800 ಕೋಟಿಗೂ ಅಧಿಕ ಮೊತ್ತ ಪಾವತಿಗೆ ಬಾಕಿ ಇದೆ’ ಎಂದು ದೂರಿದರು.

‘ಬಿಬಿಎಂಪಿ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ತಿಂಗಳಿಗೆ ನಾಲ್ಕೈದು ಬಾರಿ ಕಚೇರಿಗೆ ಹೋಗಿ ವಿಚಾರಿಸಿದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಹಣ ಪಾವತಿ ವೇಳೆ ಜ್ಯೇಷ್ಠತೆ ನಿಯಮವನ್ನೂ ಪಾಲಿಸುತ್ತಿಲ್ಲ. ಲಂಚ ನೀಡಿದವರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಾರೆ. ಬಹುತೇಕ ಗುತ್ತಿಗೆದಾರರು ಬ್ಯಾಂಕ್ ಮತ್ತು ಖಾಸಗಿ ಲೇವಾದಾರರಿಂದ ಬಡ್ಡಿಗೆ ಸಾಲ ಪಡೆದು ಕಾಮಗಾರಿ ನಡೆಸಿದ್ದಾರೆ. ಈ ಸಾಲ ತೀರಿಸುವುದಕ್ಕೆ ಮನೆ ಮಾರಬೇಕಾದ ಪರಿಸ್ಥಿತಿ ಎದುರಾಗಿದೆ. ಗುತ್ತಿಗೆದಾರರನ್ನು ನಂಬಿಕೊಂಡಿರುವ ಕುಟುಂಬಸ್ಥರು ಮತ್ತು ಸಾವಿರಾರು ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದರು.

‘ಕೈಯಲ್ಲಿ ಹಣವಿಲ್ಲದ ಕಾರಣ ರಸ್ತೆ ಮತ್ತಿತರ ಮೂಲಸೌಕರ್ಯ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕಾಗಿ ಬಂದಿದೆ. ಬಿಬಿಎಂಪಿಯು ಹಣ ಪಾವತಿಗೆ ಕ್ರಮ ಕೈಗೊಳ್ಳದಿದ್ದರೆ, ಈಗಾಗಲೇ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳನ್ನೂ ಅರ್ಧದಲ್ಲೇ ಸ್ಥಗಿತಗೊಳಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಪ್ರತಿಭಟನೆ ನಿರತರನ್ನು ಭೇಟಿ ಮಾಡಿ ಬಾಕಿ ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

‘ಪಾಲಿಕೆಯೂ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದರೂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜೊತೆ ಎರಡು ದಿನಗಳಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವುದಗಿ ಆಯುಕ್ತರು ಹೇಳಿದ್ದಾರೆ. ಹಾಗಾಗಿ ಪ್ರತಿಭಟನೆ ಹಿಂಪಡೆದಿದ್ದೇವೆ. ಕಾಮಗಾರಿ ಪೂರ್ಣ ಗೊಂಡ 6 ತಿಂಗಳ ಅವಧಿಯಲ್ಲಿ ಬಿಲ್ಲು ಪಾವತಿಯಾಗಬೇಕು. ಬಾಕಿ ಬಿಲ್‌ಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದೇವೆ. ಸಮಸ್ಯೆ ಇತ್ಯರ್ಥ ಗೊಳಿಸದಿದ್ದರೆ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ಕೆ.ಟಿ.ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು