ಬುಧವಾರ, ಅಕ್ಟೋಬರ್ 28, 2020
18 °C

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 250ಕ್ಕೆ ಏರಿಸುವಂತೆ ಜಂಟಿ ಸಲಹಾ ಸಮಿತಿ ವರದಿ ಮಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 250ಕ್ಕೆ ಹೆಚ್ಚಿಸಬೇಕು ಎಂದು ವಿಧಾನಮಂಡಲದ ಜಂಟಿ ಸಲಹಾ ಸಮಿತಿ ಶಿಫಾರಸು ಮಾಡಿದೆ.

ಸಮಿತಿಯ ವಿಶೇಷ ವರದಿಯನ್ನು ಸಮಿತಿಯ ಅಧ್ಯಕ್ಷ ಎಸ್‌.ರಘು ಅವರು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು.

‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಸೂದೆಯ ಅಂಶಗಳನ್ನು ಪರಿಶೀಲಿಸಿ ವರದಿ ನೀಡಲು ಕಾಲಾವ
ಕಾಶ ಬೇಕಿದೆ. ಈ ನಡುವೆ, ಬಿಬಿಎಂಪಿ ಸದಸ್ಯರ ಅಧಿಕಾರಾವಧಿ ಮುಗಿದಿದ್ದು, ಪಾಲಿಕೆಗೆ ಚುನಾವಣೆ ನಡೆಸಬೇಕಿದೆ. ಆದರೆ, ಈಗಿನ ವಿದ್ಯಮಾನಗಳು, ನಗರದಲ್ಲಿನ ಜನಸಂಖ್ಯೆ ಹೆಚ್ಚಳ ಹಾಗೂ ಪ್ರದೇಶ ವಿಸ್ತಾರವಾಗಿರುವ ಕಾರಣ 1976ರ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯ ಪ್ರಕರಣ 7ಕ್ಕೆ ತಿದ್ದುಪಡಿ ತರಬೇಕು’ ಎಂದು ಸಮಿತಿ ತಿಳಿಸಿದೆ.

ಮೇಯರ್ ಅಧಿಕಾರಾವಧಿ ಎರಡೂವರೆ ವರ್ಷ: ಮೇಯರ್ ಅಧಿಕಾರಾವಧಿ ಎರಡೂವರೆ ವರ್ಷಕ್ಕೆ ಏರಿಕೆಯಾಗಲಿದೆ. ಆಯುಕ್ತರಿಗೆ ಇರುವ ಅಧಿಕಾರವನ್ನು ವಿಶೇಷ ಆಯುಕ್ತರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಎಸ್‌.ರಘು ತಿಳಿಸಿದರು.

ವರದಿ ಮಂಡಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘12 ಸ್ಥಾಯಿ ಸಮಿತಿಗಳ ಸಂಖ್ಯೆಯನ್ನು ಎಂಟಕ್ಕೆ ಇಳಿಸಲು
ನಿರ್ಧರಿಸಲಾಗಿದೆ’ ಎಂದರು.

‘ವಾರ್ಡ್‌ಗಳ ಸಂಖ್ಯೆ 250ಕ್ಕೆ ಏರಲಿದೆ. ಆದರೆ, ಪಾಲಿಕೆಗೆ ಹೊಸ ಪ್ರದೇಶಗಳ ಸೇರ್ಪಡೆ ಮಾಡುವುದಿಲ್ಲ. ಈಗಿರುವ ವಾರ್ಡ್‌ಗಳನ್ನೇ ಮರುವಿಂಗಡಣೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಸದಸ್ಯರ ಸಂಖ್ಯೆ ಹೆಚ್ಚಳವಾದರೂ ಈಗಿರುವ ಕೌನ್ಸಿಲ್ ಸಭಾಂಗಣದಲ್ಲೇ ಕೌನ್ಸಿಲ್ ಸಭೆಗಳನ್ನು ಮುಂದುವರಿಸಲು ಚಿಂತನೆ ನಡೆಸಲಾಗಿದೆ. ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಯಾವುದೇ ಉದ್ದೇಶ ನಮ್ಮ ಮುಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಆಕ್ಷೇಪಣೆ ಪರಿಶೀಲನೆಗೆ ಸಮಯಾವಕಾಶ ಬೇಕು’
ಬೆಂಗಳೂರು:
‘ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಸಂಬಂಧ 900ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಅವುಗಳ ಪರಿಶೀಲನೆಗೆ ಸಮಯಾವಕಾಶ ಬೇಕು’ ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿದೆ.

‘ಸೆ.14ರಂದು ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ತಿಳಿಸಿದರು.  

‘198 ವಾರ್ಡ್‌ಗಳ ಮತದಾರರ ಪಟ್ಟಿ ಸಿದ್ಧಪಡಿಸುವ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅದರ ಪ್ರಕಾರ ನವೆಂಬರ್ 20ರ ವೇಳೆಗೆ ಮತದಾರರ ಪಟ್ಟಿ ಅಂತಿಮಗೊಳ್ಳಬೇಕು’ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿತು. ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಅಕ್ಟೋಬರ್ 5ಕ್ಕೆ ಮುಂದೂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು