ಶನಿವಾರ, ಮೇ 15, 2021
25 °C
ಬಿಬಿಎಂಪಿ ಕಾಯ್ದೆಯನ್ವಯ ಹೊಸ ಆರ್ಥಿಕ ವರ್ಷದ ಆರಂಭಕ್ಕೆ ಮೂರು ವಾರ ಮುನ್ನ ಬಜೆಟ್‌ ಮಂಡನೆ ಕಡ್ಡಾಯ

ಬಿಬಿಎಂಪಿ ಬಜೆಟ್‌– ಇನ್ನೂ ನಿಗದಿಯಾಗಿಲ್ಲ ದಿನಾಂಕ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ 2021–21ನೇ ಆರ್ಥಿಕ ವರ್ಷ ಆರಂಭವಾಗಲು ಒಂದು ವಾರ ಮಾತ್ರ ಬಾಕಿ ಉಳಿದಿದೆ. ಆದರೆ, ಮುಂದಿನ ಆರ್ಥಿಕ ವರ್ಷದ ಬಜೆಟ್‌ ಮಂಡನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.

‘ಬಿಬಿಎಂಪಿಗೆ 2021–22ನೇ ಸಾಲಿನ ಬಜೆಟನ್ನು ವಾರದಲ್ಲಿ ಮಂಡಿಸಲಿದ್ದೇವೆ. ಕೊನೆಯ ಹಂತದ ಸಲಹೆ–ಸೂಚನೆಗಳನ್ನು ಪಡೆಯುವ ಕಾರ್ಯ ಪ್ರಗತಿಯಲ್ಲಿದೆ. ಬಜೆಟ್‌ ಮಂಡನೆ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಶೀಘ್ರವೇ ದಿನ ನಿಗದಿಪಡಿಸುತ್ತೇವೆ’ ಎಂದು ಆಡಳಿತಾಧಿಕಾರಿ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಲಿಕೆಯಲ್ಲಿ ಪ್ರಸ್ತುತ 2020ರ ಬಿಬಿಎಂಪಿ ಕಾಯ್ದೆಯನ್ವಯ ಆಡಳಿತ ನಡೆಯುತ್ತಿದೆ. ಈ ಕಾಯ್ದೆಯ ಸೆಕ್ಷನ್‌ 196ರ ಪ್ರಕಾರ ಪಾಲಿಕೆಯ ಬಜೆಟ್‌ ಅಂದಾಜು ಯಾವ ವರ್ಷಕ್ಕೆ ಸಂಬಂಧಿಸಿದೆಯೋ ಆ ವರ್ಷದ ಆರಂಭಕ್ಕೆ ಕನಿಷ್ಠ ಮೂರು ವಾರಗಳಿಗೆ ಮುಂಚೆ ಅದನ್ನು ಅಂಗೀಕರಿಸತಕ್ಕದ್ದು. ಈ ಪ್ರಕಾರ ಮಾ. 10ರ ಒಳಗೆ ಬಜೆಟ್‌ ಅಂಗೀಕಾರಗೊಳ್ಳಬೇಕಿತ್ತು. ಈ ಗಡುವು ಮೀರಿ ಎರಡು ವಾರಗಳು ಉರುಳಿವೆ. ಮುಂದಿನ ಆರ್ಥಿಕ ವರ್ಷದ ಬಜೆಟ್‌ ರೂಪರೇಷೆಗಳ ಚರ್ಚೆ ನಡೆದಿದೆಯಾದರೂ, ಇನ್ನೂ ಅದಕ್ಕೆ ಅಂತಿಮ ರೂಪ ನೀಡಿಲ್ಲ. ಮಂಡನೆಯ ದಿನಾಂಕವೂ ಅಂತಿಮಗೊಂಡಿಲ್ಲ. 

ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 194ರ ಪ್ರಕಾರ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಜ.15ರಂದು ಅಥವಾ ನಂತರ ಆದಷ್ಟು ಬೇಗ ಮುಖ್ಯ ಆಯುಕ್ತರು ಬಜೆಟ್‌ಗೆ ಸಂಬಂಧಿಸಿದಂತೆ ಕಳುಹಿಸುವ ಅಂದಾಜುಗಳನ್ನು ಮತ್ತು ಪ್ರಸ್ತಾವನೆಗಳನ್ನು ಪರ್ಯಾವಲೋಚನೆ ಮಾಡಬೇಕು. ಇತರ ಸ್ಥಾಯಿ ಸಮಿತಿಗಳ ಪ್ರಸ್ತಾವನೆಗಳೇನಾದರೂ ಇದ್ದರೆ ಅವುಗಳನ್ನು ಪಡೆದುಕೊಂಡು ಮುಖ್ಯ ಆಯುಕ್ತರಿಂದ ಇದರ ಕುರಿತ ವಿವರವಾದ ಮಾಹಿತಿ ಪಡೆದು ಬಜೆಟ್‌ ಅಂದಾಜನ್ನು ಸಿದ್ಧಪಡಿಸಬೇಕು.

ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ ಅಸ್ತಿತ್ವದಲ್ಲಿಲ್ಲದ ಕಾರಣ ಬಜೆಟ್ ರೂಪಿಸುವ ಹೊಣೆಗಳೆಲ್ಲವೂ ಆಡಳಿತಾಧಿಕಾರಿಯವರದು. ಅವರು ಮೇಯರ್‌ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಧಿಕಾರಗಳೆಲ್ಲವೂ ಆಡಳಿತಾಧಿಕಾರಿ ಹೊಂದಿರುತ್ತಾರೆ.

ವಲಯವಾರು ಬಜೆಟ್‌: ವಾರ್ಡ್‌ ಸಮಿತಿಗಳಿಂದ ಬೇಡಿಕೆ ಪಟ್ಟಿ ಪಡೆದು ಬಿಬಿಎಂಪಿ ಬಜೆಟನ್ನು ವಲಯವಾರು ಸಿದ್ಧಗೊಳಿಸಬೇಕು ಎನ್ನುತ್ತದೆ ಹೊಸ ಕಾಯ್ದೆ. ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಇತರ ವೆಚ್ಚಗಳನ್ನು ಪ್ರತಿ ವಲಯ ಸಮಿತಿಯು ಸಲ್ಲಿಸತಕ್ಕದ್ದು. ಚುನಾಯಿತ ಕೌನ್ಸಿಲ್‌ ಇಲ್ಲದ ಕಾರಣ ವಲಯ ಸಮಿತಿಗಳು ಅಸ್ತಿತ್ವದಲ್ಲಿಲ್ಲ. ಆದರೂ ಪ್ರತಿ ವಲಯದ ಜಂಟಿ ಆಯುಕ್ತರಿಂದ ವರದಿ ತರಿಸಿಕೊಂಡು ಬಜೆಟ್‌ ಸಿದ್ಧಗೊಳಿಸಲಾಗುತ್ತಿದೆ.  

ಆಯಾ ವಾರ್ಡ್‌ನ ನೋಡಲ್‌ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುವ ವಾರ್ಡ್‌ ಸಭೆಗಳಲ್ಲಿ, ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಬೇಡಿಕೆಗಳ ಬಗ್ಗೆ ಚರ್ಚಿಸಿ ಪ್ರಸ್ತಾವನೆ ಕಳುಹಿಸುವಂತೆ ಆಯುಕ್ತರು ಸೂಚಿಸಿದ್ದರು. ಕೆಲವು ವಾರ್ಡ್ ಸಭೆಗಳಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಆದರೆ, ಕೆಲವು ವಾರ್ಡ್‌ಗಳಲ್ಲಿ ವಾರ್ಡ್ ಸಭೆಗಳೇ ಸಮರ್ಪಕವಾಗಿ ನಡೆದಿಲ್ಲ.

ಬಜೆಟ್‌ ಗಾತ್ರ ₹ 7500 ಕೋಟಿ?

ಈ ಬಾರಿ ವಾಸ್ತವ ಬಜೆಟ್‌ ಸಿದ್ಧಪಡಿಸಲಾಗಿದೆ. ವರಮಾನ ನಿರೀಕ್ಷಿಸುವಾಗಲೂ ವಾಸ್ತವದ ಅಂಕಿ ಅಂಶಗಳನ್ನು ಆಧರಿಸಿಯೇ ಲೆಕ್ಕಾಚಾರ ಹಾಕಲಾಗಿದೆ. ಹಾಗಾಗಿ ಬಜೆಟ್‌ ಗಾತ್ರ ₹ 7500 ಕೋಟಿ ಆಸುಪಾಸಿನಲ್ಲಿ ಇರಲಿದೆ ಎನ್ನುತ್ತವೆ ಬಿಬಿಎಂಪಿ ಮೂಲಗಳು. 

‘ಆಸ್ತಿ ತೆರಿಗೆ, ಜಾಹೀರಾತು, ಸ್ವಂತ ಆಸ್ತಿಗಳಿಂದ ಬರುವ ವರಮಾನ ಹಾಗೂ ಇತರ ಮೂಲಗಳಿಂದ ಬಿಬಿಎಂಪಿಯು ಪ್ರತಿ ವರ್ಷ ಹೆಚ್ಚೆಂದರೆ ₹ 3500 ಕೋಟಿಗಳಷ್ಟು ಆದಾಯವನ್ನು ಗಳಿಸುತ್ತಿದೆ. ರಾಜ್ಯ ಸರ್ಕಾರದ 2021–22ನೇ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿಗೆ ₹ 3,300 ಕೋಟಿ ಅನುದಾನ ಮೀಸಲಿಟ್ಟಿದೆ. ಕೇಂದ್ರ ಸರ್ಕಾರದ ಬರುವ ಅನುದಾನವೂ ಸೇರಿ ಎರಡೂ ಸರ್ಕಾರಗಳಿಂದ ಒಟ್ಟು ₹ 4000 ಕೋಟಿಗಳಷ್ಟು ಅನುದಾನ ನಿರೀಕ್ಷಿಸಲಾಗಿದೆ. ಹಾಗಾಗಿ, ಈ ಬಾರಿ ₹7,500 ಕೋಟಿ ಗಾತ್ರದ ಬಜೆಟ್‌ ಮಂಡನೆಗೆ ಸಿದ್ಧತೆ ನಡೆದಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ಗ್ರಂಥಾಲಯ ಸೆಸ್‌ ಬಿಬಿಎಂಪಿ ಶಾಲೆಗಳಿಗೂ ಬಳಕೆ

ಬಿಬಿಎಂಪಿಯು ಆಸ್ತಿ ತೆರಿಗೆ ಜೊತೆ ಶೇ 6ರಷ್ಟು ಗ್ರಂಥಾಲಯ ಸೆಸ್‌ ಸಂಗ್ರಹಿಸುತ್ತದೆ. ಸುಮಾರು ₹ 250 ಕೋಟಿಯಿಂದ ₹ 300 ಕೋಟಿ ಇದರಿಂದ ಸಂಗ್ರಹವಾಗುತ್ತದೆ. ಇಷ್ಟು ಬೇಡಿಕೆ ನಗರದ ಗ್ರಂಥಾಲಯಗಳಿಂದ ಇಲ್ಲ. ಹಾಗಾಗಿ ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೂ ಈ ಮೊತ್ತವನ್ನು ಬಳಸಲು ಅವಕಾಶ ಕಲ್ಪಿಸುವಂತೆ ಬಜೆಟ್‌ನಲ್ಲಿ ಮಾರ್ಪಾಡು ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಇಂದಿರಾ ಕ್ಯಾಂಟೀನ್‌ಗೆ ಅನುದಾನ?

ಈ ಬಾರಿಯೂ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಪ್ರತ್ಯೇಕ ಅನುದಾನ ಕಾಯ್ದಿರಿಸಿಲ್ಲ. ಹಾಗಾಗಿ ಬಿಬಿಎಂಪಿ ಬಜೆಟ್‌ನಲ್ಲೇ ಇದಕ್ಕೆ ಅನುದಾನ ಕಾಯ್ದಿರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಪ್ರತಿವರ್ಷ ₹ 70 ಕೋಟಿಯಿಂದ ₹ 75 ಕೋಟಿಗಳಷ್ಟು ವೆಚ್ಚವಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು