ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP Budget | ಸುಗಮ ಸಂಚಾರ: ಹಣ ಬಿಡುಗಡೆಗೆ ಮನಸ್ಸಿಲ್ಲ!

ವಾಹನ ದಟ್ಟಣೆ ನಿವಾರಣೆಗೆ ನೂರಾರು ಕೋಟಿ ಮೊತ್ತದ ಯೋಜನೆಗಳು ಬಿಬಿಎಂಪಿ ಬಜೆಟ್‌ ಘೋಷಣೆಯಲ್ಲೇ ಭದ್ರ
Published 24 ಜನವರಿ 2024, 23:09 IST
Last Updated 24 ಜನವರಿ 2024, 23:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸುಗಮ ಸಂಚಾರಕ್ಕೆ ₹700 ಕೋಟಿ ಮೊತ್ತದ ಹತ್ತಾರು ಯೋಜನೆಗಳನ್ನು ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಿದಾಗ, ವಾಹನ ದಟ್ಟಣೆ ಒಂದಷ್ಟು ನಿಯಂತ್ರಣಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಯೋಜನೆಗಳೆಲ್ಲ ಇನ್ನೂ ಬಜೆಟ್‌ನಲ್ಲೇ ಉಳಿದಿವೆ.

ನಗರದ ವಾಹನ ದಟ್ಟಣೆಯನ್ನು ಹೆಚ್ಚಿನ ಮಟ್ಟದಲ್ಲಿ ಕಡಿತಗೊಳಿಸಲು ಹೊಸ ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣ ಯೋಜನೆಗಾಗಿಯೇ ₹210 ಕೋಟಿ ಮೀಸಲಿಡಲಾಗಿತ್ತು. ಜೆ.ಸಿ. ರಸ್ತೆ, ಕನಕಪುರ ರಸ್ತೆ ಜಂಕ್ಷನ್‌ ಸೇರಿದಂತೆ ವಿವಿಧೆಡೆ ಈ ಯೋಜನೆಗಳು ಆರಂಭವಾಗುವ ಸೂಚನೆ ನೀಡಲಾಗಿತ್ತು. ಆದರೆ, ಒಂದೇ ಒಂದು ಮೇಲ್ಸೇತುವೆ ಅಥವಾ ಕೆಳಸೇತುವೆಯ ವಿಸ್ತೃತ ಯೋಜನಾ ವರದಿಯೂ (ಡಿಪಿಆರ್‌) ಇನ್ನೂ ಅಂತಿಮವಾಗಿಲ್ಲ. ಯಾವ ರಸ್ತೆಯಲ್ಲಿ ಯಾವ ‘ಸೇತುವೆ’ಗಳು ಆಗಬೇಕೆಂಬುದನ್ನೂ ಬಿಬಿಎಂಪಿ ಅಂತಿಮಗೊಳಿಸಿಲ್ಲ.

ಹೊಸ ಮೇಲ್ಸೇತುವೆಗಳು ಆರಂಭವಾಗದಿರುವುದು ಒಂದೆಡೆಯಾದರೆ, ಪ್ರಗತಿಯಲ್ಲಿರುವ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿ ಆಗಾಗ್ಗೆ ತಿಂಗಳುಗಟ್ಟಲೆ ಸ್ಥಗಿತಗೊಂಡು ನಾಗರಿಕರಿಗೆ ಕಿರಿಕಿರಿ ಉಂಟು ಮಾಡುತ್ತಲೇ ಇವೆ. ಇದರಿಂದ ನಗರದ ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಹೆಚ್ಚಾಗುತ್ತಲೇ ಇದೆ.

ಮೇಲ್ಸೇತುವೆಗಳ ಕಾಮಗಾರಿ ಆಗಾಗ ಸ್ಥಗಿತಗೊಳ್ಳಲು ಭೂಸ್ವಾಧೀನ ವಿಳಂಬ, ಬೆಸ್ಕಾಂ, ಜಲಮಂಡಳಿ ಕೆಲಸಗಳು ಕಾರಣವಾದರೂ ಇದಕ್ಕಿಂತಲೂ ಪ್ರಮುಖ ಸಮಸ್ಯೆ ಎಂದರೆ ಹಣ ಬಿಡುಗಡೆಯಾಗದಿರುವುದು. ಬಜೆಟ್‌ನಲ್ಲಿ ಹಣ ಹಂಚಿಕೆಯಾಗಿದ್ದರೂ, ಬಿಡುಗಡೆಗೆ ಅಧಿಕಾರಿಗಳು ಮನಸ್ಸು ಮಾಡಿಲ್ಲ.

‘ಯಲಹಂಕ ಮೇಲ್ಸೇತುವೆ ಕಾಮಗಾರಿಗೆ ನಿಗದಿತ ಅವಧಿಯಲ್ಲಿ ಹಣ ಬಿಡುಗಡೆ ಮಾಡಿಲ್ಲ, ಬಿಲ್‌ ನೀಡಿ ಎರಡು ಮೂರು ತಿಂಗಳು ಹಣವನ್ನೇ ನೀಡಿಲ್ಲ. ಹೀಗಾಗಿ ಇನ್ನೂ ಒಂದೂವರೆ ವರ್ಷ ಕಾಮಗಾರಿ ಮುಗಿಸಲು ಸಮಯ ಬೇಕು’ ಎಂದು ಗುತ್ತಿಗೆದಾರರೇ ಪತ್ರ ಬರೆದಿದ್ದಾರೆ. ರಾಜರಾಜೇಶ್ವರಿ ನಗರ ಆರ್ಚ್‌ ಬಳಿಯ ಮೇಲ್ಸೇತುವೆ ಕಾಮಗಾರಿ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಸ್ಥಗಿತಗೊಂಡಿದೆ. ಪ್ರತಿನಿತ್ಯವೂ ಇಲ್ಲಿ ವಾಹನದಟ್ಟಣೆಯಿಂದ ನಾಗರಿಕರು ಹೈರಾಣರಾಗುತ್ತಿದ್ದಾರೆ.

ಈಜಿಪುರ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷಗಳಾಗಿತ್ತು. ಕೊನೆಗೆ ಟೆಂಡರ್ ಅಂತಿಮವಾಗಿ ಗುತ್ತಿಗೆ ನೀಡಿ ಎರಡು ತಿಂಗಳಾಗಿದ್ದರೂ ಆ ಗುತ್ತಿಗೆದಾರರಿಗೆ ಮುಂಗಡ ಹಣವನ್ನೂ ಬಿಬಿಎಂಪಿ ಪಾವತಿಸಿಲ್ಲ. ಜೊತೆಗೆ ಭೂಸ್ವಾಧೀನದ ಪ್ರಕ್ರಿಯೆಯನ್ನೂ ನಡೆಸಿಲ್ಲ.

ರೈಲ್ವೆ ಹಳಿಗಳಿಂದ ನಗರದ ಮಧ್ಯಭಾಗದಲ್ಲೇ ಹಲವು ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿವಾರಿಸಲು ಮೇಲ್ಸೇತುವೆ, ಕೆಳಸೇತುವೆ ನಿರ್ಮಿಸಲು ಯೋಜಿಸಿ, ಬಿಬಿಎಂಪಿ ಬಜೆಟ್‌ನಲ್ಲಿ ಹಣ ಹಂಚಿಕೆ ಮಾಡಲಾಗಿದೆ. ಆದರೂ ಯೋಜನೆ ಕಾರ್ಯಗತಕ್ಕೆ ಬಿಬಿಎಂಪಿ ಮುಂದಾಗಿಲ್ಲ. ಮುಖ್ಯ ಹಾಗೂ ಉಪ ಮುಖ್ಯರಸ್ತೆಗಳ ನಿರ್ವಹಣೆಗೆಂದೇ ಕೋಟ್ಯಂತರ ರೂಪಾಯಿ ಮೀಸಲಿಡಲಾಗಿದೆ.

ಸೌಂದರ್ಯ ಕಾಣದ ಜಂಕ್ಷನ್‌ಗಳು!

ನಗರದ ಜಂಕ್ಷನ್‌ಗಳನ್ನು ವಿಶ್ವಮಟ್ಟದ ಸೌಲಭ್ಯಗಳೊಂದಿಗೆ ಸೌಂದರ್ಯೀಕರಣ ಮಾಡುವ ಯೋಜನೆಗೆ ಬಜೆಟ್‌ಗಿಂತ ಮುನ್ನವೇ ಚಾಲನೆ ದೊರೆತಿತ್ತು. ಅದಕ್ಕೆ ಬಜೆಟ್‌ನಲ್ಲಿ ₹150 ಕೋಟಿ ಹಣವನ್ನು ಹಂಚಿಕೆ ಮಾಡಲಾಗಿದೆ. ಈವರೆಗೂ ಜಂಕ್ಷನ್‌ಗಳ ಅಭಿವೃದ್ಧಿಯ ಟೆಂಡರ್‌ ಕರೆಯಲಾಗಿಲ್ಲ. 

ಕಿಯೋಸ್ಕ್‌, ವಿಶ್ರಾಂತಿ ತಾಣ, ಕುಡಿಯುವ ನೀರು, ಮೊಬೈಲ್‌ ಚಾರ್ಜಿಂಗ್‌ ಸ್ಟೇಷನ್‌, ಓದಲು ಸ್ಥಳಾವಕಾಶ, ಮಕ್ಕಳ ಆಟದ ತಾಣ, ಹೈಟೆಕ್‌ ಶೌಚಾಲಯ, ಆಟೊರಿಕ್ಷಾ ಪಿಕ್‌ಅಪ್‌ ಝೋನ್‌, ಝೀಬ್ರಾ ಕ್ರಾಸಿಂಗ್‌, ಪಾದಚಾರಿ ಸಿಗ್ನಲ್, ರ‍್ಯಾಂಪ್‌ ಸೇರಿದ ಸೌಲಭ್ಯವಿರುವ 10 ಪ್ಲಾಜಾ ನಿರ್ಮಿಸಲು ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಶಿವಾನಂದ ವೃತ್ತದ ಬಳಿ ಇನ್ನೂ ಕಾಮಗಾರಿ ಹಂತದಲ್ಲಿರುವ ಒಂದು ಪ್ಲಾಜಾ ಬಿಟ್ಟರೆ ಇನ್ನುಳಿದ ಒಂಬತ್ತು ಪ್ಲಾಜಾ ಎಲ್ಲಿ ಬರುತ್ತವೆ ಎಂಬ ಪ್ರಕಟಣೆಯನ್ನೂ ಬಿಬಿಎಂಪಿ ಇನ್ನೂ ಘೋಷಿಸಿಲ್ಲ.

ಪರಿತಪಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳು

ರಸ್ತೆ, ಪಾದಚಾರಿ ಮಾರ್ಗದಲ್ಲಿ  ಬೀದಿ ಬದಿ ವ್ಯಾಪಾರಿಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆ. ಇದು ಉತ್ತಮ ಕಾರ್ಯವಾದರೂ, ಅವರಿಗೆ ಪ್ರತ್ಯೇಕ ಸೌಲಭ್ಯ ಕಲ್ಪಿಸುವ ಕೆಲಸಕ್ಕೆ ಮುನ್ನುಡಿಯನ್ನೂ ಬರೆಯಲಾಗುತ್ತಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವಲಯ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿ ಅದಕ್ಕೆ ಹಣವನ್ನೂ ಹಂಚಿಕೆ ಮಾಡಲಾಗಿದೆ. ಆದರೆ ಈವರೆಗೆ ಬೀದಿಬದಿ ವ್ಯಾಪಾರಿಗಳೊಂದಿಗೆ ಸ್ಥಳೀಯ ಮಟ್ಟದಲ್ಲಿ ಸಭೆ ನಡೆಸಿ, ವ್ಯಾಪಾರ ನಡೆಸಲು ರಸ್ತೆಗಳನ್ನು ಗುರುತಿಸುವ ಕೆಲಸವನ್ನೂ ಅಧಿಕಾರಿಗಳು ಮಾಡಿಲ್ಲ. ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ‘ಮುಂದಿನವಾರ ಸಭೆ ನಡೆಸಲಾಗುತ್ತದೆ’ ಎಂಬ ಭರವಸೆ ಮಾತ್ರ ದೊರೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT