ಭಾನುವಾರ, ಮೇ 16, 2021
22 °C
ನೋಡಲ್‌ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ

50 ಆಸ್ಪತ್ರೆಗಳಲ್ಲಿ ಹೆಲ್ಪ್‌ ಡೆಸ್ಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ರೋಗಿಗಳ ಚಿಕಿತ್ಸೆಯ ಮೇಲುಸ್ತುವಾರಿಗಾಗಿ ಬಿಬಿಎಂಪಿಯಿಂದ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಿರುವ 50 ಪ್ರಮುಖ ಆಸ್ಪತ್ರೆಗಳಲ್ಲಿ ತಕ್ಷಣವೇ ರೋಗಿಗಳು ಮತ್ತು ಅವರ ಕುಟುಂಬದರಿಗೆ ನೆರವು ಒದಗಿಸಲು ಹೆಲ್ಪ್‌ ಡೆಸ್ಕ್‌ಗಳನ್ನು ತೆರೆಯಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆಯ ಎಲ್ಲ ವಲಯಗಳ ಆಯುಕ್ತರು, ವಲಯ ಜಂಟಿ ಆಯುಕ್ತರು, ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿಗಳು ಮತ್ತು ಪ್ರಮುಖ ಆಸ್ಪತ್ರೆಗೆ ನಿಯೋಜಿಸಿರುವ ನೋಡಲ್‌ ಅಧಿಕಾರಿಗಳ ಜತೆ ಗುರುವಾರ ವರ್ಚ್ಯುವಲ್‌ ಸಭೆ ನಡೆಸಿದ ಅವರು, ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಸಮನ್ವಯ ಸಾಧಿಸುವುದಕ್ಕಾಗಿ ಹೆಲ್ಪ್‌ ಡೆಸ್ಕ್‌ ಆರಂಭಿಸಬೇಕು ಎಂದು ಸೂಚನೆ ನೀಡಿದರು.

ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಆಯಾ ವಲಯದ ವಾರ್‌ ರೂಮ್‌ ಜತೆ ಸಮನ್ವಯದಿಂದ ಕೆಲಸ ಮಾಡಬೇಕು. ಇದಕ್ಕಾಗಿ ಪ್ರತಿ ಆಸ್ಪತ್ರೆಯಲ್ಲೂ ಒಂದು ಹೆಲ್ಪ್‌ ಡೆಸ್ಕ್‌ ಆರಂಭಿಸಬೇಕು. ಅಲ್ಲಿಗೆ ಅಗತ್ಯವಿರುವ ಸಿಬ್ಬಂದಿಯನ್ನು ತಕ್ಷಣವೇ ನಿಯೋಜಿಸಬೇಕು ಎಂದರು.

ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ಬಂದಾಗ ಹಾಸಿಗೆ ವ್ಯವಸ್ಥೆ ಮಾಡುವ ಕೆಲಸವನ್ನು ಹೆಲ್ಪ್‌ ಡೆಸ್ಕ್‌ ಮೂಲಕವೇ ಮಾಡಬೇಕು. ರೋಗಿಗಳು ಗುಣಮುಖರಾದಾಗ ಆಸ್ಪತ್ರೆಯಲ್ಲಿ ಖಾಲಿಯಾಗುವ ಹಾಸಿಗೆಗಳ ಮಾಹಿತಿಯನ್ನು ತಕ್ಷಣವೇ ವಾರ್‌ ರೂಮ್‌ಗೆ ಒದಗಿಸಬೇಕು. ಅಲ್ಲಿಂದ ಬೆಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂನಲ್ಲಿ ಮಾಹಿತಿ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.

ಕೋವಿಡ್‌ ನಿಯಂತ್ರಣಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಬ್ಬ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರು ಆಯಾ ವಲಯಗಳ ಆಯುಕ್ತರು ಮತ್ತು ಜಂಟಿ ಆಯುಕ್ತರ ಜತೆ ನಿರಂತರ ಸಂಪರ್ಕದಲ್ಲಿ ಇದ್ದು, ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

1,000 ಹಾಸಿಗೆಗಳ ಐಸಿಯು ಆಸ್ಪತ್ರೆ

ಬೆಂಗಳೂರು: ನಗರದಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ತಾತ್ಕಾಲಿಕವಾಗಿ 1,000 ಹಾಸಿಗೆಗಳ ತೀವ್ರ ನಿಗಾ ಘಟಕ (ಐಸಿಯು) ಆಸ್ಪತ್ರೆಯನ್ನು ಆರಂಭಿಸುವ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಗರದಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ಕೆಲವು ತಿಂಗಳುಗಳ ಬೇಡಿಕೆಯನ್ನು ಅಂದಾಜು ಮಾಡಿ, ಪ್ರತ್ಯೇಕ ಐಸಿಯು ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ’ ಎಂದರು.

ಹೋಟೆಲ್‌ಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗನ್ನು ಆರಂಭಿಸುವ ಪ್ರಕ್ರಿಯೆಯೂ ಆರಂಭವಾಗಿದೆ. 12 ಕೋವಿಡ್‌ ಆರೈಕೆ ಕೇಂದ್ರಗಳನ್ನು ಗುರುವಾರದಿಂದಲೇ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು