ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಬಡ್ತಿ ಬೇಡ ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದ ಎಂಜಿನಿಯರ್‌

ಬಡ್ತಿ ನೀಡದಂತೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದ ಪ್ರಭಾರ ಪ್ರಧಾನ ಎಂಜಿನಿಯರ್‌ ಪ್ರಭಾಕರ್‌
Last Updated 19 ಸೆಪ್ಟೆಂಬರ್ 2021, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಪ್ರಧಾನ ಎಂಜಿನಿಯರ್‌ ಹುದ್ದೆ ಯಾರಿಗೂ ಬೇಡವಾಗಿದೆ. ಪ್ರಭಾರ ಹೊಣೆಯ ಆಧಾರದಲ್ಲಿ ಈ ಹುದ್ದೆಯಲ್ಲಿರುವ ಪೂರ್ವ ವಲಯದ ಮುಖ್ಯ ಎಂಜಿನಿಯರ್‌ ಎಸ್‌.ಪ್ರಭಾಕರ್‌ ಅವರಿಗೆ ಪ್ರಧಾನ ಎಂಜಿನಿಯರ್‌ ಆಗಿ ಬಡ್ತಿ ಪಡೆಯುವ ಅರ್ಹತೆ ಇದೆ. ಆದರೆ, ತಮಗೆ ಪ್ರಧಾನ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡುವುದು ಬೇಡ ಎಂದು ಕೋರಿ ಅವರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಪತ್ರ ಬರೆದಿದ್ದಾರೆ.

ಎಂ.ಆರ್‌.ವೆಂಕಟೇಶ್‌ ಅವರು 2016ರಿಂದ ಸರಿ ಸುಮಾರು ನಾಲ್ಕು ವರ್ಷ ಪ್ರಧಾನ ಎಂಜಿನಿಯರ್‌ ಹುದ್ದೆ ನಿಭಾಯಿಸಿದ್ದರು. ಬೊಮ್ಮನಹಳ್ಳಿ ವಲಯದ ಮುಖ್ಯ ಎಂಜಿನಿಯರ್‌ ಆಗಿದ್ದ ಸಿದ್ದೇಗೌಡ ಅವರು ವೆಂಕಟೇಶ್‌ ಅವರ ನಿವೃತ್ತಿ ಬಳಿಕ ಸುಮಾರು ಆರು ತಿಂಗಳ ಕಾಲ ಪ್ರಭಾರ ನೆಲೆಯಲ್ಲೇ ಈ ಹುದ್ದೆಯನ್ನು ನಿಭಾಯಿಸಿದ್ದರು. ಅವರು ನಿವೃತ್ತಿಯಾಗುವ ಕೊನೇಯ ದಿನ (2021ರ ಮೇ 31) ಪೂರ್ಣಕಾಲಿಕ ನೆಲೆಯಲ್ಲಿ ಈ ಹುದ್ದೆ ಅಲಂಕರಿಸಿದ್ದರು. ಸಿದ್ದೇಗೌಡ ಅವರ ನಿವೃತ್ತಿ ಬಳಿಕ, ಜೂನ್‌ 1ರಿಂದ ಪ್ರಭಾಕರ್‌ ಅವರು ಪ್ರಭಾರ ನೆಲೆಯಲ್ಲಿ ಈ ಹುದ್ದೆಯಲ್ಲಿದ್ದಾರೆ.

ಪಾಲಿಕೆಯಲ್ಲಿ ಎಂಟು ವಲಯಗಳು, ಯೋಜನೆ ಕೇಂದ್ರ, ರಸ್ತೆ ಮೂಲಸೌಕರ್ಯ, ರಾಜಕಾಲುವೆ ಹಾಗೂ ಕೆರೆ ವಿಭಾಗಗಳು ಸೇರಿ ಒಟ್ಟು 12 ಕಾಮಗಾರಿ ವಿಭಾಗಗಳಿವೆ. ಈ ಎಲ್ಲ ವಿಭಾಗಗಳ ಕಾಮಗಾರಿಗಳ ಮಾಹಿತಿಗಳನ್ನು ಪ್ರಧಾನ ಎಂಜಿನಿಯರ್‌ ಅವರ ಕಚೇರಿಯು ತಾಂತ್ರಿಕವಾಗಿ ಪರಿಶೀಲಿಸಿ ನಿರ್ವಹಣೆ ಮಾಡಬೇಕಿರುತ್ತದೆ.

‘ತಂದೆ ವಯೋವೃದ್ಧರಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಹಾಗೂ ಆರೈಕೆ ಬಗ್ಗೆ ಹೆಚ್ಚಿನ ಕ್ರಮ ವಹಿಸಬೇಕಾಗಿದೆ. ಹಾಗಾಗಿ ಪ್ರಧಾನ ಎಂಜಿನಿಯರ್‌ನಂತಹ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ. ವೈಯಕ್ತಿಕ ಕಾರಣಗಳಿಂದಾಗಿ ನಾನು ಪೂರ್ವ ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇನೆ. ನನ್ನ ಬಡ್ತಿ ಪ್ರಸ್ತಾವನೆಯನ್ನು ಕೈಬಿಡಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಇದೇ 16ರಂದು ಬರೆದ ಪತ್ರದಲ್ಲಿ ಪ್ರಭಾಕರ್‌ ಅವರು ಕೋರಿದ್ದಾರೆ.

ಈ ಹಿಂದೆ ವಲಯಗಳ ಕಾಮಗಾರಿಗಳು, ಯೋಜನೆ, ನಗರಯೋಜನೆ, ಗುಣಮಟ್ಟ ನಿರ್ವಹಣೆ ಮುಂತಾದ ಪ್ರಮುಖ ಜವಾಬ್ದಾರಿಗಳೆಲ್ಲವೂ ಪ್ರಧಾನ ಎಂಜಿನಿಯರ್‌ ಕಚೇರಿ ವ್ಯಾಪ್ತಿಯಲ್ಲಿದ್ದವು. ಈ ಹಿಂದೆ ಟೆಂಡರ್‌ಗಳಿಗೆ ಸಂಬಧಿಸಿದ ಕಡತಗಳನ್ನೂ ಪ್ರಧಾನ ಎಂಜಿನಿಯರ್‌ ಗಮನಕ್ಕೆ ತರಬೇಕಾಗಿತ್ತು. ಅವರೂ ಅದಕ್ಕೆ ಸಂಬಂದಿಸಿದ ಟಿಪ್ಪಣಿಗಳನ್ನು ಬರೆಯುತ್ತಿದ್ದರು. ಕ್ರಮೇಣ ಈ ಹೊಣೆಗಳನ್ನು ಮುಕ್ತಗೊಳಿಸಲಾಗಿದೆ. ಈಗ ಕಾಮಗಾರಿಗಳ ಕುರಿತ ಪ್ರಮುಖ ತೀರ್ಮಾನಗಳೆಲ್ಲವೂ ಮುಖ್ಯ ಎಂಜಿನಿಯರ್‌ ಹಂತದಲ್ಲೇ ನಡೆಯುತ್ತಿವೆ. ಪ್ರಧಾನ ಎಂಜಿನಿಯರ್‌ ಹುದ್ದೆಗೆ ಅಂಕಿ–ಅಂಶಗಳ ನಿರ್ವಹಣೆ ಹೊರತಾಗಿ ಮಹತ್ವದ ಹೊಣೆಗಾರಿಕೆಗಳು ಇಲ್ಲ. ಮುಖ್ಯ ಎಂಜಿನಿಯರ್‌ ಹುದ್ದೆಗಿಂತಲೂ ಕಡಿಮೆ ಕಾರ್ಯದೊತ್ತಡವನ್ನುಪ್ರಧಾನ ಎಂಜಿನಿಯರ್‌ ಹುದ್ದೆ ಹೊಂದಿರುತ್ತದೆ ಎನ್ನುತ್ತವೆ ಬಿಬಿಎಂಪಿ ಮೂಲಗಳು.

ಒಂದು ವೇಳೆ ಪ್ರಭಾಕರ್‌ ಅವರ ಬಡ್ತಿ ನಿರಾಕರಣೆ ಕೋರಿಕೆಯನ್ನು ನಗರಾಭಿವೃದ್ಧಿ ಇಲಾಖೆ ಒಪ್ಪಿದ್ದೇ ಆದರೆ, ಮುಖ್ಯ ಎಂಜಿನಿಯ್‌ ಹುದ್ದೆಗೆ ಬಡ್ತಿ ಪಡೆಯಲು ಕಾಯುತ್ತಿರುವ ಮೂವರು ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳಾದ ಮೋಹನಕೃಷ್ಣ, ಸುಗುಣ, ನರಸರಾಮರಾವ್‌ ಅವರು ತಮ್ಮ ಬಡ್ತಿಗಾಗಿ ಇನ್ನಷ್ಟು ಕಾಯಬೇಕಾಗಿ ಬರುತ್ತದೆ. ಬಿಬಿಎಂಪಿಯಲ್ಲಿ ಒಟ್ಟು 11 ಮುಖ್ಯ ಎಂಜಿನಿಯರ್‌ ಹುದ್ದೆಗಳಿದ್ದು, ಅವುಗಳಲ್ಲಿ ಎರಡು ಹುದ್ದೆಗಳನ್ನು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ನಿಯೋಜನೆ ಮೂಲಕ ಭರ್ತಿ ಮಾಡಲಾಗುತ್ತದೆ. ಉಳಿದ ಹುದ್ದೆಗಳನ್ನು ಬಿಬಿಎಂಪಿ ಎಂಜಿನಿಯರ್‌ಗಳಿಗೆ ಬಡ್ತಿ ನೀಡುವ ಮೂಲಕ ತುಂಬಲಾಗುತ್ತದೆ.

ಪ್ರಭಾಕರ್‌ ಅವರ ಕೋರಿಕೆಯನ್ನು ನಗರಾಭಿವೃದ್ಧಿ ಇಲಾಖೆ ಒಪ್ಪುತ್ತದೋ ಅಥವಾ ಅವರಿಗೆ ಪ್ರಧಾನ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಲಾಗುತ್ತದೋ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT