ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: 534 ಮಕ್ಕಳಿಂದ ಭಿಕ್ಷಾಟನೆ

Last Updated 6 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 720 ಮಕ್ಕಳು ಶಾಲೆಯಿಂದ ಹೊರಗಿದ್ದು, 534 ಮಕ್ಕಳು ಭಿಕ್ಷಾಟನೆ ಹಾಗೂ 186 ಮಕ್ಕಳು ವ್ಯಾಪಾರ ಮಾಡುತ್ತಿದ್ದಾರೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಬಿಬಿಎಂಪಿಯ ಪೂರ್ವ ವಲಯದಲ್ಲಿ ಇಂತಹ ಮಕ್ಕಳು ಹೆಚ್ಚಿದ್ದಾರೆ. ಇವರನ್ನು ಶಾಲೆಗೆ ಸೇರಿಸಿ, ಅವರಿಗೆ ವಸತಿ ಕಲ್ಪಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಆದರೆ ಅವರು ಅಲ್ಲಿ ಉಳಿಯುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಶಿಕ್ಷಣ ಇಲಾಖೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಅಲ್ಲಿ ಸಾಕಷ್ಟು ಯೋಜನೆ ಗಳಿವೆ. ಆದರೆ ಮಕ್ಕಳು ನಿರಾಶ್ರಿತರ ಕೇಂದ್ರದ ಗೋಡೆ ಹಾರಿಕೊಂಡು ಹೊರಹೋಗುತ್ತಾರೆ. ಕಾರ್ಮಿಕರು ಹೆಚ್ಚಿರುವ ಸ್ಥಳದಲ್ಲಿ ಸಂಚಾರಿ ಶಾಲೆ ಪ್ರಾರಂಭಿಸಿದೆವು. ಅದೂ ಪರಿಣಾಮಕಾರಿಯಾಗಲಿಲ್ಲ. ಹೀಗಾಗಿ ನಾವು ಅವರ ಮನವೊಲಿಸಬೇಕು. ಪೋಷಕರಿಗೂ ಅರಿವು ಮೂಡಿಸಬೇಕಿದೆ. ಕೆಲವು ಎನ್‌ಜಿಒಗಳು ಇಂತಹ ಕೆಲಸ ಮಾಡು ತ್ತಿವೆ. ಅವರೊಂದಿಗೆ ಸೇರಿ ಇಂತಹ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಯತ್ನ ಮಾಡಲಾಗುತ್ತದೆ’ ಎಂದರು.

ಪಾವತಿ ಪಾರ್ಕಿಂಗ್ ಚರ್ಚೆ ಇಲ್ಲ: ನಗರದಲ್ಲಿ ಪೇ ಆ್ಯಂಡ್‌ ಪಾರ್ಕಿಂಗ್‌ ಜಾರಿಗೆ ತರುವ ಬಗ್ಗೆ ಯಾವುದೇ ರೀತಿಯ ಚರ್ಚೆ ಈಗ ಆಗುತ್ತಿಲ್ಲ. ಆದರೆ ಎಲ್ಲೆಲ್ಲಿ ಬಹು ಅಂತಸ್ತಿನ ಕಾರು ನಿಲುಗಡೆ ವ್ಯವಸ್ಥೆ ಇದೆಯೋ ಅದರ ಸುತ್ತಮುತ್ತ ಕಾರು ನಿಲುಗಡೆಗೆ ಅವಕಾಶ ನೀಡಬಾರದು ಎಂಬ ಚರ್ಚೆ ಇದೆ ಎಂದು ಮುಖ್ಯ ಆಯುಕ್ತರು ಹೇಳಿದರು.

ಸ್ವಾತಂತ್ರ್ಯ ಉದ್ಯಾನದ ಕಾಮಗಾರಿ ವಿಳಂಬವಾಗಿದೆ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಸಮಸ್ಯೆಯಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿ, ಪ್ರವೇಶ ಕಲ್ಪಿಸಲಾಗುತ್ತದೆ ಎಂದರು.

ರೈಲ್ವೆ ಗೂಡ್ಸ್‌ ರಸ್ತೆಯನ್ನು ಸಂಚಾರಕ್ಕೆ ಸದ್ಯದಲ್ಲಿಯೇ ಮುಕ್ತಗೊಳಿಸಲಾಗುತ್ತದೆ. ಇನ್ನೊಂದು ವಾರದಲ್ಲಿ ವಾಹನ ಸಂಚರಿಸಬಹುದು ಎಂದರು.

‘ಮಂತ್ರಿ ಮಾಲ್‌ ಸೇರಿದಂತೆ ಮಾಲ್‌‌ಗಳ ಆಸ್ತಿ ತೆರಿಗೆ ವಿಷಯದಲ್ಲಿ ಬ್ಯಾಂಕ್‌ ಖಾತೆ ಜಪ್ತಿಗೆ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲು ಕಾನೂನು ವಿಭಾಗ ದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಶೀಘ್ರವೇ ಕ್ರಮವಾಗಲಿದೆ. ಈ ಕೆಲಸವನ್ನು ನಾವು ಈ ಮೊದಲೇ ಮಾಡಬೇಕಿತ್ತು. ನಮ್ಮಿಂದ ವಿಳಂಬವಾಗಿದೆ’ ಎಂದು ತುಷಾರ್‌ ಗಿರಿನಾಥ್‌ ಒಪ್ಪಿಕೊಂಡರು.

ಬೀದಿಬದಿ ವ್ಯಾಪಾರಿಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ದಾಸರಹಳ್ಳಿ ವ್ಯಾಪ್ತಿಯಲ್ಲಿ ಎನ್‌ಜಿಒ ಉತ್ತಮ ಪ್ರಕ್ರಿಯೆ ನಡೆಸುತ್ತಿದೆ. ಅದನ್ನು ಅಳವಡಿಸಿಕೊಳ್ಳುವ ಬಗ್ಗೆ ಚಿಂತಿ ಸಲಾಗುತ್ತಿದೆ. ಆಹಾರದ ಗುಣಮಟ್ಟ, ಸ್ವಚ್ಛತೆ ಬಗ್ಗೆಯೂ ತರಬೇತಿ ನೀಡಲು ಯೋಜಿಸಲಾಗಿದೆ ಎಂದರು.

ಡೆಂಗಿ ನಿಯಂತ್ರಣಕ್ಕಾಗಿ ಲಾರ್ವಾ ನಿವಾರಣೆ, ಮನೆಗಳ ಬಳಿ ಔಷಧ ಸಿಂಪಡಣೆ ಕಾರ್ಯ ನಡೆಯುತ್ತಿದೆ ಎಂದರು.

ಪೊರಕೆಗೆ ₹300 ನಗದು

ಪೌರಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೊರಕೆ ಖರೀದಿಸಲು ₹300 ನಗದು ನೀಡಲು ನಿರ್ಧರಿಸಲಾಗಿದೆ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ಸಾಮಗ್ರಿಗಳ ಖರೀದಿಗೂ ನಗದು ನೀಡಬೇಕೆಂಬ ಬೇಡಿಕೆ ಇತ್ತು. ಆದರೆ ಎಲ್ಲದ್ದಕ್ಕೂ ಹಣ ನೀಡಿದರೆ ಅದು ಬೇರೆಯದ್ದಕ್ಕೆ ವ್ಯಯವಾಗುವ ಸಾಧ್ಯತೆ ಇರುವುದರಿಂದ ಪೊರಕೆಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT