ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ವಿಡಿಯೊ ಕಾನ್ಫರೆನ್ಸ್‌ ಮೂಲಕ ವಾರ್ಡ್ ಸಭೆ ನಡೆಸಿದ ಆಯುಕ್ತ

ಕೊರೊನಾ ಚಿಕಿತ್ಸೆ ಬಳಿಕೆ ವಿಶ್ರಾಂತಿಯಲ್ಲಿರುವ ಮಂಜುನಾಥ ಪ್ರಸಾದ್‌
Last Updated 2 ಜನವರಿ 2021, 11:23 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಸಂತ ನಗರ ವಾರ್ಡ್‌ ಸಮಿತಿ ಸಭೆಯನ್ನುಶನಿವಾರ ನಡೆಸಿದರು.

ಜೈನ್ ಆಸ್ಪತ್ರೆ ಹಿಂಭಾಗ, ಮಿಲ್ಲರ್ಸ್ ರಸ್ತೆ (ಶೆಲ್ ಪೆಟ್ರೋಲ್ ಬಂಕ್ ಬಳಿ), ವಸಂತನಗರ 1ನೇ ಹಾಗೂ 7ನೇ ಅಡ್ಡರಸ್ತೆ, ಅರಮನೆ ಅಡ್ಡರಸ್ತೆ, ಆನೆ ಪಾರ್ಕ್ ಸೇರಿದಂತೆ ಆಟ್ಟು ಆರು ಕಡೆ ಜನ ಸಾರ್ವಜನಿಕ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ (ಹಳದಿ ತಾಣ). ಈ ಸ್ಥಳಗಳನ್ನು ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಬೇಕುಎಂದು ಸ್ಥಳೀಯರು ಆಯುಕ್ತರಲ್ಲಿ ಮನವಿ ಮಾಡಿದರು.

ವಾರ್ಡ್‌ನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಮೂತ್ರ ವಿಸರ್ಜನೆ ಮಾಡಿರುವ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಹಾಗೂ ಭವಿಷ್ಯದಲ್ಲಿ ಯಾರೂ ಈ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ತಡೆಯಲು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಆಯುಕ್ತರು ಸಲಹೆ ನೀಡಿದರು.

ಅರಮನೆ ಕ್ರಾಸ್ ರಸ್ತೆ ಬಳಿ ಸರಿಯಾಗಿ ಡಾಂಬರೀಕರಣ ಮಾಡಿಲ್ಲ. ವಸಂತನಗರದ 7ನೇ ಹಾಗೂ 14ನೇ ಅಡ್ಡರಸ್ತೆಗಳಲ್ಲಿ ಡಾಂಬರೀಕರಣ ಮಾಡಬೇಕು ಎಂದು ಸ್ಥಳಿಯರು ಗಮನಕ್ಕೆ ತಂದರು. ಈ ಬಗ್ಗೆ ಕ್ರಮ ವಹಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೈಗ್ರೌಂಡ್ ಜಂಕ್ಷನ್ ಬಳಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತದೆ. ಇಲ್ಲಿ ದಟ್ಟಣೆ ನಿವಾರಣೆಗಾಗಿ ಡ್ರೋನ್ ಮೂಲಕ ಸರ್ವೇ ಮಾಡಿ ವರದಿ ತಯಾರಿಸಲಾಗಿದೆ. ಇದರ ಅನುಷ್ಠಾನದ ಬಗ್ಗೆ ಸಂಚಾರ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಸಮಾಲೋಚನೆಯನ್ನೂ ನಡೆಸಿದ್ದರು. ಬಳಿಕ ಈ ವರದಿಯ ಶಿಫಾರಸುಗಳು ಅನುಷ್ಠಾನಗೊಳ್ಳಲೇ ಇಲ್ಲ. ಈ ಶಿಫಾರಸುಗಳು ಅನುಷ್ಠಾನವಾದರೆ ಈ ಪ್ರದೇಶದ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯಲಿದೆ ಎಂದು ಸ್ಥಳೀಯರೊಬ್ಬರು ಗಮನಕ್ಕೆ ತಂದರು.

ಪಾಲಿಕೆಯ ಸ್ಥಳೀಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಸಂಚಾರ ಪೊಲೀಸ್ ಇಲಾಖೆಯ ಜೊತೆ ಮತ್ತೊಮ್ಮೆ ಚರ್ಚಿಸಿ ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಸೂಚನೆ ನೀಡಿದರು. ವಾರ್ಡ್‌ನ ಬಹುತೇಕ ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಇನ್ನೂ ಎಲ್ಲಾದರೂ ಬಾಕಿ ಇದ್ದರೆ ಮಾಹಿತಿ ಕೊಡುವಂತೆ ಆಯುಕ್ತರು ಕೋರಿದರು.

‌ಈ ವಾರ್ಡ್‌ನ ನೋಡಲ್‌ ಅಧಿಕಾರಿಯೂ ಆಗಿರುವ ಮಂಜುನಾಥ್‌ ಪ್ರಸಾದ್‌ ಅವರಿಗೆ ಇತ್ತೀಚೆಗೆ ಕೋವಿಡ್‌ ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ತಿಂಗಳ ಮೊದಲ ಶನಿವಾರ ನಡೆಯಬೇಕಾದ ವಾರ್ಡ್‌ ಸಮಿತಿ ಸಭೆಯನ್ನು ಮುಂದೂಡಬಾರದು ಎಂಬ ಉದ್ದೇಶದಿಂದ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ವಾರ್ಡ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಾವಿದ್ ಅಹಮ್ಮದ್, ಸಹಾಯಕ ಎಂಜಿನಿಯರ್‌ ರಾಜಶೇಖರ ಮೂರ್ತಿ, ಸ್ಥಳೀಯ ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT