ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾನಂದ ವೃತ್ತದ ಬಳಿ ಮೇಲ್ಸೇತುವೆ: ತ್ವರಿತವಾಗಿ ಕಾಮಗಾರಿ ಪೂರ್ಣಕ್ಕೆ ಸೂಚನೆ

ಶಿವಾನಂದ ವೃತ್ತದ ಬಳಿ ಮೇಲ್ಸೇತುವೆ
Last Updated 12 ಜೂನ್ 2021, 19:17 IST
ಅಕ್ಷರ ಗಾತ್ರ

ಬೆಂಗಳೂರು: ‌‘ಶಿವಾನಂದ ವೃತ್ತದ ಬಳಿ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಇದ್ದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಬಾಕಿಯಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶಿವಾನಂದ ವೃತ್ತದ ಬಳಿ 493 ಮೀಟರ್ ಉದ್ದದ ಮೇಲ್ಸೇತುವೆಯ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ಶನಿವಾರ ನಡೆಸಿದ ಅವರು, ‘ಈ ಮೇಲುಸೇತುವೆಗೆ 16 ಕಂಬಗಳು ಬರಲಿದ್ದು, ಅದರಲ್ಲಿ ಈಗಾಗಲೇ 15 ಕಂಬಗಳ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಮಾಹಿತಿ ನೀಡಿದರು.

‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಜಲಮಂಡಳಿಯಿಂದ 450 ಎಂ.ಎಂನ ನೀರಿನ ಪೈಪ್‌ಲೈನ್‌ ಅನ್ನು ಈಗಾಗಲೇ ಬೇರೆಡೆ ಸ್ಥಳಾಂತರಿಸಿದ್ದು, ಅದರಡಿ 700 ಎಂ.ಎಂನ ಪೈಪ್‌ಲೈನ್‌ ಇದ್ದ ಪರಿಣಾಮ ಪಿಲ್ಲರ್ ಕಾಮಗಾರಿ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಈಗ ಅದನ್ನು ಬದಲಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.

ಸರ್ವಿಸ್‌ ರಸ್ತೆಯಲ್ಲಿ ಸಂಚಾರ:

‘ಮೇಲ್ಸೇತುವೆಯ ಎರಡೂ ಕಡೆ ರಸ್ತೆ ದುರಸ್ತಿ ಮಾಡಿದ ನಂತರ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಮುಚ್ಚಿರುವ ರಸ್ತೆಗಳನ್ನು ಹಂತ-ಹಂತವಾಗಿ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಮೇಲ್ಸೇತುವೆ ಅಡಿಯಲ್ಲಿ ಕಾಮಗಾರಿ ಮುಗಿದಿರುವ ಕಡೆ ಸರ್ವಿಸ್ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿಯ ಪ್ರಗತಿಯ ಬಗ್ಗೆ ನಿತ್ಯ ಪರಿಶೀಲನೆ ನಡೆಸಬೇಕು. ಎರಡೆರಡು ದಿನಗಳಲ್ಲಿ ಮುಗಿಸಬೇಕಾದ ಕಾಮಗಾರಿಗಳ ಬಗ್ಗೆ ನಿರ್ದಿಷ್ಟ ಗುರಿ ನಿಗದಿ ಪಡಿಸಿಕೊಂಡು, ಮೊದಲು ಯಾವ ಕೆಲಸ ಮಾಡಬೇಕೋ ಅದನ್ನು ತ್ವರಿತವಾಗಿ ಮುಗಿಸಲು ಕ್ರಮ ಕೈಗೊಂಡು ಇಡೀ ಯೋಜನೆಯನ್ನು ಗಡುವಿನೊಳಗೆ ಪೂರ್ಣಗೊಳಿಸಬೇಕು ಎಂದೂ ನಿರ್ದೇಶನ ನೀಡಿದರು.

ಜಂಟಿ ಆಯುಕ್ತರಾದ ಪಲ್ಲವಿ, ಸರ್ಫರಾಜ್ ಖಾನ್, ಪ್ರಧಾನ ಎಂಜಿನಿಯರ್‌‌ ಪ್ರಭಾಕರ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT