ಶನಿವಾರ, ಜುಲೈ 31, 2021
27 °C
ಉಪಸಮಿತಿ ಮಂಡಿಸಿದ ವರದಿಯಲ್ಲೂ ಲೋಪ: ಸರಿಪಡಿಸುವ ಭರವಸೆ

ತೆರಿಗೆ ಕಡಿತ: ಅಧಿಕಾರಿ ವಿರುದ್ಧ ಕ್ರಮಕ್ಕೆ ಸದಸ್ಯರ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಟೋಟಲ್ ಸ್ಟೇಷನ್ ಸರ್ವೆ ಬಳಿಕ ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆಯನ್ನು ಕಾನೂನುಬಾಹಿರವಾಗಿ ಕಡಿತ ಮಾಡಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲೇಬೇಕು’ ಎಂದು ಪಾಲಿಕೆಯ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಶುಕ್ರವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಪಟ್ಟು ಹಿಡಿದರು.

ಕಾನೂನುಬಾಹಿರವಾಗಿ ತೆರಿಗೆ ವಿನಾಯಿತಿ ನೀಡಿದ್ದ ಪ್ರಕರಣಗಳ ಪರಿಶೀಲನೆ ನಡೆಸಿ ಪಾಲಿಕೆಯ ಉಪ ಆಯುಕ್ತರ ನೇತೃತ್ವದ ಉಪಸಮಿತಿ ಸಲ್ಲಿಸಿದ್ದ ವರದಿಯ ಶ್ವೇತಪತ್ರವನ್ನು ಕೌನ್ಸಿಲ್‌ ಸಭೆಯಲ್ಲಿ ಶುಕ್ರವಾರ ಆಯುಕ್ತರು ಮಂಡಿಸಿದರು.

ಬಿಜೆಪಿ ಸದಸ್ಯ ಪದ್ಮನಾಭರೆಡ್ಡಿ ಮಾತನಾಡಿ, ’ಪೂರ್ವ, ಯಲಹಂಕ, ಬೊಮ್ಮನಹಳ್ಳಿ, ದಕ್ಷಿಣ, ಮಹದೇವಪುರ ವಲಯಗಳಲ್ಲಿ 105 ವಾಣಿಜ್ಯ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ ಮಾಡಲಾಗಿದೆ. ಈ ಪೈಕಿ ಪೂರ್ವ ವಲಯದ 9 ಮತ್ತು ಬೊಮ್ಮನಹಳ್ಳಿಯ 2 ಆಸ್ತಿಗಳಿಗೆ ಹಿಂದಿನ ಜಂಟಿ ಆಯುಕ್ತರು ತೆರಿಗೆ ಕಡಿತ ಮಾಡಿದ್ದಾರೆ. ಇದರಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿದೆ. ಈ 11 ಆಸ್ತಿಗಳಿಂದ ವ್ಯತ್ಯಾಸದ ತೆರಿಗೆ, ದುಪ್ಪಟ್ಟು ದಂಡ, ಬಡ್ಡಿ ಸೇರಿ ₹321.83 ಕೋಟಿ ಪಾಲಿಗೆ ಬರಬೇಕಿದೆ’ ಎಂದು ಹೇಳಿದರು.

‘ಈ ಬಗ್ಗೆ ಪರಿಶೀಲಿಸಲು ನೇಮಿಸಿದ್ದ ಉಪಸಮಿತಿ ಕೂಡ ಈ ಲೆಕ್ಕವನ್ನು ಸರಿಯಾಗಿ ಮಾಡಿಲ್ಲ. ಸಮಿತಿಯಲ್ಲಿದ್ದ ಉಪ ಆಯುಕ್ತರ ಮೇಲೆಯೇ ಅನುಮಾನ ಮೂಡುತ್ತಿದೆ. ಅವರನ್ನು ಸಭೆಗೆ ಕರೆಸಿ ಅವರಿಂದ ಉತ್ತರ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಕಾನೂನು ಬಾಹಿರವಾಗಿ ತೆರಿಗೆ ಕಡಿತ ಮಾಡಿ ಪಾಲಿಕೆಗೆ ನಷ್ಟ ಉಂಟು ಮಾಡಿರುವ ಅಧಿಕಾರಿಯೊಬ್ಬರು ಈಗ ಸಚಿವರೊಬ್ಬರ ಹಿಂದೆ–ಮುಂದೆ ಓಡಾಡಿಕೊಂಡಿದ್ದಾರೆ. ಎರವಲು ಸೇವೆಯಿಂದ ಬಂದ ಅಧಿಕಾರಿಗಳು ಪಾಲಿಕೆಗೆ ನಷ್ಟ ಉಂಟು ಮಾಡಿ ಶಿಸ್ತು ಕ್ರಮಕ್ಕೂ ಸಿಗದೆ ಮಾತೃ ಇಲಾಖೆಗೆ ವಾಪಸ್ ಹೋಗುತ್ತಿದ್ದಾರೆ. ಪಾಲಿಕೆಗೆ ನಷ್ಟ ಮಾಡಿದವರಿಗೆ ಶಿಕ್ಷೆ ಆಗಲೇಬೇಕು’ ಎಂದು ಪದ್ಮನಾಭರೆಡ್ಡಿ ಮತ್ತು ಉಮೇಶ್‌ ಶೆಟ್ಟಿ ಪಟ್ಟು ಹಿಡಿದಿರು. ಇದಕ್ಕೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿದರು. 

ಮೇಯರ್ ಎಂ. ಗೌತಮ್‌ಕುಮಾರ್, ‘ಇದೊಂದು ದೊಡ್ಡ ಹಗರಣ. ತಪ್ಪೆಸಗಿದ ಅಧಿಕಾರಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 24 ಲಕ್ಷಕ್ಕಿಂತಲೂ ಹೆಚ್ಚು ಸ್ವತ್ತುಗಳಿವೆ. ಆದರೆ, ಸುಮಾರು 14 ಲಕ್ಷ ಆಸ್ತಿ ಮಾಲೀಕರು ಮಾತ್ರ ತೆರಿಗೆ ಪಾವತಿಸುತ್ತಿದ್ದಾರೆ. ಉಳಿದವರನ್ನೂ ತೆರಿಗೆ ವ್ಯಾಪ್ತಿಗೆ ತರಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉತ್ತರ ನೀಡಿದ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್, ‘ತಪ್ಪೆಸಗಿರುವ ಅಧಿಕಾರಿ ಯಾವುದೇ ಇಲಾಖೆಯಲ್ಲಿದ್ದರೂ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಕಟ್ಟಡಗಳ ಮಾಲೀಕರಿಂದ ವ್ಯತ್ಯಾಸದ ತೆರಿಗೆಯನ್ನು ದುಪ್ಪಟ್ಟು ಪ್ರಮಾನದಲ್ಲಿ ದಂಡ ಸಹಿತ ವಸೂಲಿ ಮಾಡಲಾಗುವುದು. ನ್ಯಾಯಾಲಯದಲ್ಲಿ ಅವರು ತಡೆಯಾಜ್ಞೆ ತರದಂತೆ ನೋಟಿಸ್ ನೀಡುವ ಮುನ್ನ ಕೇವಿಯಟ್ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಉಪಸಮಿತಿ ಮಂಡಿಸಿರುವ ವರದಿ ಅಪೂರ್ಣವಾಗಿದೆ ಎಂದು ನನಗೂ ಎನಿಸಿದೆ. ಸಂಪೂರ್ಣ ಮಾಹಿತಿ ಒಳಗೊಂಡ ವರದಿಯನ್ನು 15 ದಿನಗಳಲ್ಲಿ ಮಂಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಹೊರಗುತ್ತಿಗೆ ಶಿಕ್ಷಕ ಸೇವೆ ರದ್ದುಗೊಳಿಸಿಲ್ಲ’ 
‘ಪಾಲಿಕೆ ಶಾಲೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕಿಲ್ಲ’ ಎಂದು ಆಯುಕ್ತರು ತಿಳಿಸಿದರು.

‘ಶಿಕ್ಷಕರನ್ನು ಏಕಾಏಕಿ ತೆಗೆದು ಹಾಕಲಾಗಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ ಬೆದರಿಕೆ ಒಡ್ಡಿ ಕೆಲಸ ಬಿಡಿಸಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಬಗ್ಗೆ ಸಾಕಷ್ಟು ದೂರುಗಳಿದ್ದು, ಕೂಡಲೇ ಬದಲಾವಣೆ ಮಾಡಬೇಕು’ ಎಂದು ಬಿಜೆಪಿ ಸದಸ್ಯೆ ಶಾಂತಕುಮಾರಿ ಆರೋಪಿಸಿದರು.

‘ಇಂದಿರಾ ಕ್ಯಾಂಟೀನ್ ವಿಷಯದ ಬಗ್ಗೆ ಸದ್ಯ ಉತ್ತರ ನೀಡುವುದಿಲ್ಲ’ ಎಂದು ಆಯುಕ್ತರು ತಿಳಿಸಿದರು.

‘ಮಾಸ್ಕ್ ಧರಿಸದ ಸದಸ್ಯರಿಗೆ ದಂಡ ಹಾಕಿ’
‘ಮಾಸ್ಕ್ ಧರಿಸದೆ ಮಾತನಾಡಲು ಮುಂದಾದ ಬಿಜೆ‍ಪಿ ಸದಸ್ಯ ಡಾ. ರಾಜು ಅವರಿಗೆ ದಂಡ ವಿಧಿಸಬೇಕು’ ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

‘ಮಾಸ್ಕ್ ಧರಿಸದ ಜನರಿಗೆ ₹200 ದಂಡ ಹಾಕಲಾಗುತ್ತದೆ. ಸದಸ್ಯರೇ ಈ ತಪ್ಪು ಮಾಡಿದರೆ ದಂಡ ಹಾಕಬಾರದೇ’ ಎಂದು ಸದಸ್ಯ ಸಂಪತ್‌ರಾಜ್‌ ಪ್ರಶ್ನಿಸಿದರು.

‘ಹಿರಿಯ ಸದಸ್ಯರು ಸಲಹೆ ನೀಡುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡೇ ಮಾತನಾಡಿ’ ಎಂದು ಮೇಯರ್ ಸೂಚನೆ ನೀಡಿದರು.

ವಾರ್ಡ್‌ಗಳಲ್ಲಿ ಜನೌಷಧ ಕೇಂದ್ರ
ನಗರದ 198 ವಾರ್ಡ್‌ಗಳಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯಲು ಬಿಬಿಎಂಪಿ ನಿರ್ಣಯಿಸಿದೆ.

‘ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೇಂದ್ರಗಳನ್ನು ತೆರೆಯಬೇಕು’ ಎಂಬ ಆಯುಕ್ತರು ಮಂಡಿಸಿದ್ದ ಟಿಪ್ಪಣಿಯನ್ನು ಸಭೆ ಸರ್ವಾನುಮತದಿಂದ ಒಪ್ಪಿತು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ 65 ವಾರ್ಡ್‌ಗಳಲ್ಲಿ ಹೊಸದಾಗಿ ತೆರೆಯುವ ಪ್ರಸ್ತಾವನೆಗೂ ಕೌನ್ಸಿಲ್ ಒಪ್ಪಿಗೆ ಸೂಚಿಸಿದೆ. ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರದಿಂದ ಪಡೆದುಕೊಳ್ಳಲು ನಿರ್ಧರಿಸಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರ, ಹೆರಿಗೆ ಆಸ್ಪತ್ರೆಗಳು, ರೆಫರಲ್ ಆಸ್ಪತ್ರೆಗಳಿಗೆ ಆಮ್ಲಜನಕ ಮತ್ತು ಇನ್ನಿತರ ಸಲಕರಣೆಗಳನ್ನು ಒದಗಿಸುವ ಪ್ರಸ್ತಾವನೆಗೂ ಸಭೆ ಒಪ್ಪಿಗೆ ನೀಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು