ಬುಧವಾರ, ಜುಲೈ 28, 2021
21 °C
ದಿನವೊಂದರಲ್ಲಿ 65 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ

ಬಿಬಿಎಂಪಿ: ಕೋವಿಡ್‌ ಲಸಿಕೆ– ವಿಶೇಷ ಅಭಿಯಾನ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಅರ್ಹರಿಗೆ ಕೋವಿಡ್‌ ಲಸಿಕೆ ನೀಡಲು ಬಿಬಿಎಂಪಿ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ದಿನವೊಂದರಲ್ಲಿ ಸರಾಸರಿ 65 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಿರುವ ಬಿಬಿಎಂಪಿ, ಈ ಸಲುವಾಗಿ 360 ಸೆಷನ್‌ಗಳನ್ನು ಏರ್ಪಡಿಸಲು ಸಿದ್ಧತೆ ನಡೆಸಿದೆ. ಲಸಿಕೆ ನೀಡುವುದಕ್ಕಾಗಿ 433 ಲಸಿಕಾ ಸಿಬ್ಬಂದಿಯನ್ನು ನೇಮಿಸಿದೆ.

ಲಸಿಕಾ ಅಭಿಯಾನದ ಸಿದ್ಧತೆಗಳನ್ನು ಪರಿಶೀಲಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಅಧಿಕಾರಿಗಳ ಸಭೆಯನ್ನು ವರ್ಚ್ಯುವಲ್‌ ರೂಪದಲ್ಲಿ ಭಾನುವಾರ ನಡೆಸಿದರು.

‘ಪ್ರತಿ ವಲಯಗಳಲ್ಲೂ ತಳಹಂತದಲ್ಲಿ ಯೋಜನೆ ರೂಪಿಸಿಕೊಂಡು ಅರ್ಹ ಫಲಾನುಭವಿಗಳಿಗೆ ಲಸಿಕೆ ಸಿಗುವಂತೆ ನೋಡಿಕೊಳ್ಳಬೇಕು. ಲಸಿಕಾ ಶಿಬಿರಗಳನ್ನು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಏರ್ಪಡಿಸಬೇಕು. ಅಗತ್ಯ ಸಿಬ್ಬಂದಿಯ ತಂಡಗಳನ್ನು ನಿಯೋಜನೆ ಮಾಡಿಕೊಂಡು ಆದಷ್ಟು ಹೆಚ್ಚು ಮಂದಿ ಶೀಘ್ರವೇ ಲಸಿಕೆ ಪಡೆಯುವಂತೆ ನೋಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು. 

‘ಲಸಿಕೆ ನೀಡಲು ಗೊತ್ತುಪಡಿಸಲಾದ ಸ್ಥಳಗಳ ಕುರಿತು ಸ್ಥಳೀಯರಿಗೆ ಸಮರ್ಪಕ ಮಾಹಿತಿ ನೀಡಬೇಕು. ಲಸಿಕಾ ಶಿಬಿರಗಳಲ್ಲಿ ಕೋವಿಡ್ ಹರಡುವಿಕೆ ತಡೆಯಲು, ಪ್ರತಿಯೊಬ್ಬರೂ ಮಾಸ್ಕ್ ಧರಿಸಿರುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಈ ಬಗ್ಗೆ ನಿಗಾ ಇಡಲು ಮಾರ್ಷಲ್‌ಗಳನ್ನು ನಿಯೋಜಿಸಲಾಗುತ್ತದೆ’ ಎಂದರು.

ಲಸಿಕಾ ಶಿಬಿರಗಳಿಗೆ ದಿಢೀರ್‌ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. 

ಬೀದಿ ಬದಿ ವ್ಯಾಪಾರಿಗಳು, ಗಾರ್ಮೆಂಟ್ಸ್ ಕಾರ್ಖಾನೆಗಳ ಕಾರ್ಮಿಕರು, ಕ್ಯಾಬ್ ಮತ್ತು ಆಟೊರಿಕ್ಷಾ ಚಾಲಕರು, ಎಪಿಎಂಸಿ ಮಾರುಕಟ್ಟೆಯ ವರ್ತಕರು, ಬ್ಯಾಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಡೆಗಳಲ್ಲೆಲ್ಲ ಲಸಿಕಾ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಕೇಂದ್ರ ಸರ್ಕಾರದ ನಿರ್ದೇಶನದಂತೆ, ಸೋಮವಾರದಿಂದ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. 2ನೇ ಡೋಸ್ ಪಡೆಯಲು ಬಾಕಿ ಇರುವವರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು, 18 ರಿಂದ 44 ವರ್ಷದೊಳಗಿನವರಲ್ಲಿ ಸರ್ಕಾರ ಗೊತ್ತುಪಡಿಸಿರುವ ಅರ್ಹ ಫಲಾನುಭವಿಗಳು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕರ್ತವ್ಯ ಸಲ್ಲಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ನೀಡಲು ಸರ್ಕಾರ ನಿರ್ದೇಶಿಸಿದೆ.  

ಸಭೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರಾದ ಡಿ.ರಂದೀಪ್, ತುಳಸಿ ಮದ್ದಿನೇನಿ, ಡಾ.ಹರೀಶ್ ಕುಮಾರ್, ರೆಡ್ಡಿ ಶಂಕರಬಾಬು, ರವೀಂದ್ರ,  ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ.ವಿಜಯೇಂದ್ರ ಹಾಗೂ ವಿವಿಧ ವಲಯಗಳ ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಭಾಗವಹಿಸಿದರು.

ಕೊವ್ಯಾಕ್ಸಿನ್ ಲಭ್ಯ
ಕೊವ್ಯಾಕ್ಸಿನ್ ಲಸಿಕೆಯೂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. 45 ವರ್ಷ ಮೇಲ್ಪಟ್ಟವರೂ ಈ ಲಸಿಕೆಯ ಮೊದಲ ಡೋಸ್‌ ಪಡೆಯುವುದಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು