ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ- ನಿಯಂತ್ರಣದತ್ತ ಡೆಂಗಿ ಪ್ರಕರಣ

ಒಂದು ತಿಂಗಳಿಂದ ವರದಿಯಾಗದ ಚಿಕೂನ್‌ಗುನ್ಯಾ ಪ್ರಕರಣ
Published 17 ಅಕ್ಟೋಬರ್ 2023, 19:51 IST
Last Updated 17 ಅಕ್ಟೋಬರ್ 2023, 19:51 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗಿ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದ್ದು, ಕಳೆದ 17 ದಿನಗಳಲ್ಲಿ 337 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ. 

ಬಿಸಿಲು–ಮಳೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ಡೆಂಗಿ ಪ್ರಕರಣಗಳ ಸಂಖ್ಯೆ ಆಗಸ್ಟ್ ಮೊದಲ ವಾರದ ಬಳಿಕ ಏರಿಕೆ ಕಂಡಿತ್ತು. ನಿರಂತರ ಸುರಿದ ಮಳೆಯಿಂದಾಗಿ ವಾತಾವರಣವು ಈಡಿಸ್ ಜಾತಿಯ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿತ್ತು. ಇದರಿಂದಾಗಿ ಈ ವರ್ಷ ದಿಢೀರ್ ಪ್ರಕರಣಗಳು ಹೆಚ್ಚಳವಾದವು. ಕಳೆದ ತಿಂಗಳು 2,302 ಪ್ರಕರಣಗಳು ದೃಢಪಟ್ಟಿದ್ದವು. ಇದರಿಂದಾಗಿ ಬಿಬಿಎಂಪಿ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದ ಸ್ಥಳಗಳನ್ನು ಗುರುತಿಸಿ, ಲಾರ್ವಾ ಉತ್ಪತ್ತಿ ತಾಣಗಳ ನಾಶ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಹೀಗಾಗಿ, ಎರಡು ವಾರಗಳಿಂದ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದೆ.

ಈ ವರ್ಷ ರಾಜ್ಯದಲ್ಲಿ ಡೆಂಗಿ ಜ್ವರಕ್ಕೆ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ನಾಲ್ಕು ಮರಣ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ವರದಿಯಾಗಿದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಈವರೆಗೆ 33,511 ಮಂದಿಯಲ್ಲಿ ಡೆಂಗಿ ಶಂಕೆ ವ್ಯಕ್ತವಾಗಿದೆ. ಅವರಲ್ಲಿ 22,241 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆ ಮಾಡದಲಾಗಿದೆ. ಒಟ್ಟು 6,093 ಮಂದಿಯಲ್ಲಿ ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ (11,434) ಅರ್ಧಕ್ಕೂ ಅಧಿಕ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ವರದಿಯಾ ಗಿವೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಈವರೆಗೆ 393 ಶಂಕಿತರನ್ನು ಗುರುತಿಸಿ, 188 ಮಂದಿಯ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಅವರಲ್ಲಿ 46 ಮಂದಿಯಲ್ಲಿ ಡೆಂಗಿ ದೃಢಪಟ್ಟಿದೆ.

ಕಳೆದ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ 75,035 ಶಂಕಿತರನ್ನು ಗುರುತಿಸಿ, 10,866 ಮಂದಿಗೆ ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿತ್ತು. ಅವರಲ್ಲಿ 2,313 ಮಂದಿಗೆ ಡೆಂಗಿ ಖಚಿತಪಟ್ಟಿತ್ತು. 

34 ಚಿಕೂನ್‌ಗುನ್ಯಾ ಪ್ರಕರಣ: ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ 415 ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿದ್ದು, 75 ಮಂದಿಗೆ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. 34 ಮಂದಿಗೆ ಚಿಕೂನ್‌ಗುನ್ಯಾ ದೃಢಪಟ್ಟಿದೆ. ಕಳೆದ ಒಂದು ತಿಂಗಳಿಂದ ಚಿಕೂನ್‌ಗುನ್ಯಾ ಪ್ರಕರಣ ಬಿಬಿಎಂಪಿ ವ್ಯಾಪ್ತಿಯಲ್ಲಿ ವರದಿಯಾಗಿಲ್ಲ. ಕಳೆದ ವರ್ಷ 1,623 ಶಂಕಿತರನ್ನು ಗುರುತಿಸಲಾಗಿತ್ತು. ಅವರಲ್ಲಿ 14 ಮಂದಿಯಲ್ಲಿ ಮಾತ್ರ ಈ ಜ್ವರ ದೃಢಪಟ್ಟಿತ್ತು. 

‘ಕಳೆದ ತಿಂಗಳು ಪ್ರತಿ ವಾರ 500ರಿಂದ 600 ಡೆಂಗಿ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಲಾರ್ವಾ ಉತ್ಪತ್ತಿ ತಾಣಗಳ ನಾಶ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳಿಂದ ಡೆಂಗಿ ನಿಯಂತ್ರಣಕ್ಕೆ ಬಂದಿದೆ. ಈ ತಿಂಗಳ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಲಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT