ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ಗುತ್ತಿಗೆದಾರರ ಬಿಲ್‌ ಪಾವತಿ ಡಿಜಿಟಲೀಕರಣ

ಬಿಬಿಎಂಪಿ ‘ವರ್ಕ್‌ ಬಿಲ್‌ ಮಾಡ್ಯೂಲ್’ ತಂತ್ರಾಂಶದ ಎಲ್ಲ ಪ್ರಕ್ರಿಯೆಯೂ ಆನ್‌ಲೈನ್‌
Published 6 ಜೂನ್ 2024, 23:51 IST
Last Updated 6 ಜೂನ್ 2024, 23:51 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆದಾರರು ಬಿಲ್‌ ಪಾವತಿ ವಿಳಂಬ ಹಾಗೂ ಹಲವು ಟೇಬಲ್‌ಗಳಲ್ಲಿ ಕಡತಗಳ ಚಲನೆಯನ್ನು ನಿಯಂತ್ರಿಸಲು ಬಿಬಿಎಂಪಿ ‘ವರ್ಕ್‌ ಬಿಲ್‌ ಮಾಡ್ಯೂಲ್’ ತಂತ್ರಾಂಶವನ್ನು ಅನುಷ್ಠಾನಗೊಳಿಸುತ್ತಿದ್ದು, ಎಲ್ಲ ಪ್ರಕ್ರಿಯೆಯೂ ಡಿಜಿಟಲ್‌ನಲ್ಲೇ ನಡೆಯಲಿದೆ.

ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ ಬಿಲ್‌ಗಳ ಎಲ್ಲ ದಾಖಲೆಗಳನ್ನು ಇಂಟಿಗ್ರೇಟೆಡ್‌ ಫೈನಾನ್ಶಿಯಲ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (ಐಎಫ್‌ಎಂಎಸ್‌) –  ‘ವರ್ಕ್‌ ಬಿಲ್‌ ಮಾಡ್ಯೂಲ್’ ಮೂಲಕ ಆನ್‌ಲೈನ್‌ನಲ್ಲೇ ಸಲ್ಲಿಸಬೇಕು. ಇದಾದ ನಂತರ ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್‌ ದಢೀಕರಿಸಿದ ಮೇಲೆ, ವಲಯವಾರು ಪ್ರೀ–ಆಡಿಟ್‌ನ ಕಾರ್ಯಪಾಲಕ ಎಂಜಿನಿಯರ್‌ ದಾಖಲೆ ಪರಿಶೀಲಿಸಿದರೆ ಸಿಬಿಆರ್‌ ಸೃಷ್ಟಿಯಾಗುತ್ತದೆ. ಜೇಷ್ಠತೆ ಆಧಾರದ ಮೇಲೆ ವಲಯ ಮುಖ್ಯ ಆಯುಕ್ತರು ಬಿಲ್‌ ಪಾವತಿಗೆ ಹಣಕಾಸು ವಿಭಾಗದ ಮುಖ್ಯ ಆಯುಕ್ತರಿಗೆ ವರ್ಗಾಯಿಸುತ್ತಾರೆ.

ಸಿಬಿಆರ್‌ ಸೃಷ್ಟಿಯಾಗಿ ಪಾವತಿಗೆ ಬಾಕಿ ಇರುವ ಬಿಲ್‌ಗಳನ್ನು ಪ್ರತಿ ತಿಂಗಳ ಮೊದಲನೆ ವಾರ ಮುಖ್ಯ ಲೆಕ್ಕಾಧಿಕಾರಿಗಳ ಹಂತದಲ್ಲಿ ಶೇಕಡವಾರು ಕಾಮಗಾರಿ ಬಿಲ್‌ಗಳನ್ನು ರ್‍ಯಾಂಡಮೈಸೇಷನ್‌ ಮಾಡಿ, ಟಿವಿಸಿಸಿ ವಿಭಾಗದಿಂದ ಪರಿಶೀಲಿಸಲು ಸೂಚಿಸುತ್ತಾರೆ. ಈ ಪ್ರಕ್ರಿಯೆಯ ಪ್ರತಿಯೊಂದು ಹಂತಕ್ಕೂ ದಿನಗಳನ್ನು ನಿಗದಿಪಡಿಸಲಾಗಿದ್ದು, ಆ ಅವಧಿಯಲ್ಲಿ ಸಂಬಂಧಪಟ್ಟ ಅಧಿಕಾರಿ ಪರಿಶೀಲನೆ ಮುಗಿಸಬೇಕು. ಇಲ್ಲದಿದ್ದರೆ ಅದು ಸಮ್ಮತಿ ಎಂದು ಪರಿಗಣಿಸಿ ಮುಂದಿನ ಹಂತಕ್ಕೆ ಹೋಗುತ್ತದೆ.

₹50 ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿ, ₹50 ಲಕ್ಷದಿಂದ ₹1 ಕೋಟಿ, ₹1 ಕೋಟಿಯಿಂದ ₹5 ಕೋಟಿ, ₹5 ಕೋಟಿಯಿಂದ ₹10 ಕೋಟಿ, ₹10 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳ ವರ್ಗವನ್ನು ನಿಗದಿ ಮಾಡಲಾಗಿದೆ. ಬಿಲ್‌ ಸಲ್ಲಿಸಿದ 15 ದಿನದಿಂದ 30 ದಿನದೊಳಗೆ ಪಾವತಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಬಿಬಿಎಂಪಿ ಗುತ್ತಿಗೆದಾರರು ಮನವಿ ಸಲ್ಲಿಸಿ, ಹಲವು ಬೇಡಿಕೆಗಳನ್ನು ಈಡೇರಿಸಲು ಕೇಳಿದ್ದಾರೆ. ಯೋಜನಾ ನಿರ್ವಹಣೆ ಸಮಿತಿಯವರಿಂದ ದೃಢೀಕರಣ ಪಡೆಯಲು, ಗುಣಭರವಸೆ ದೃಢೀಕರಣ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಸಿಬಿಆರ್‌ ದಾಖಲಿಸಲು ಸಾಕಷ್ಟು ವಿಳಂಬವಾಗುತ್ತಿದೆ. ಇದನ್ನು ಸರಳೀಕರಣ ಮಾಡಬೇಕೆಂದು ಕೋರಿದ್ದಾರೆ. ಹೀಗಾಗಿ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಜೂನ್‌ 6ರಂದು ಆದೇಶ ಹೊರಡಿಸಿದ್ದಾರೆ.

‘ಗುತ್ತಿಗೆದಾರರಿಗೆ ತಂತ್ರಾಂಶದ ಲಾಗಿನ್‌ ಐಡಿ ನೀಡಲಾಗುತ್ತದೆ. ಭೌತಿಕವಾಗಿ ಅವರು ಯಾವುದೇ ಕಡತಗಳನ್ನು ಸಲ್ಲಿಸಬೇಕಾಗಿಲ್ಲ. ಬಿಲ್‌ಗೆ ಸಂಬಂಧಿಸಿದಂತೆ ಎಲ್ಲವನ್ನೂ ಆನ್‌ಲೈನ್‌ನಲ್ಲೇ ಅಪ್‌ಲೋಡ್‌ ಮಾಡಬೇಕು. ಈ ಪ್ರಕ್ರಿಯೆಗೆ ಒಂದೆರಡು ವಾರ ಆಗಲಿದೆ. ಆದರೆ, ಶುಕ್ರವಾರದಿಂದಲೇ ಎಲ್ಲವನ್ನೂ ಆನ್‌ಲೈನ್‌ ಪ್ರಕ್ರಿಯೆಯಲ್ಲೇ ನಡೆಸಲಾಗುವುದು. ಗುತ್ತಿಗೆದಾರರಿಗೆ ಲಾಗಿನ್‌ ಐಡಿ ನೀಡುವವರೆಗೆ ನಮ್ಮ ಸಿಬ್ಬಂದಿಯೇ ಗುತ್ತಿಗೆದಾರರು ನೀಡುವ ಬಿಲ್‌ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡುತ್ತಾರೆ’ ಎಂದು ಹಣಕಾಸು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

ಶೇ 25ರಷ್ಟು ಬಿಲ್‌ ಪಾವತಿ: ಸರ್ಕಾರಕ್ಕೆ ಮನವಿ
‘ಬಿಬಿಎಂಪಿ ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಲಾಗಿರುವ ಬಿಲ್‌ಗಳಲ್ಲಿ ತಡೆಹಿಡಿಯಲಾಗಿರುವ ಶೇ 25ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಮತ್ತು ಪಾವತಿಸಲು ಬಾಕಿ ಇರುವ ಕಾಮಗಾರಿಗಳ ಬಿಲ್‌ಗಳನ್ನು ಶೇ 100ರಷ್ಟು ಬಿಡುಗಡೆಗೆ ಅನುಮತಿ ನೀಡಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಪತ್ರ ಬರೆದಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ಹಾಗೂ ಪದಾಧಿಕಾರಿಗಳು 9 ಬೇಡಿಕೆಗಳ ಮನವಿ ಸಲ್ಲಿಸಿ ಈಡೇರಿಸಲು ಜೂನ್‌ 10ರ ಗಡುವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ‘ನ್ಯಾಯಮೂರ್ತಿ ಎಚ್‌.ಎಸ್‌. ನಾಗಮೋಹನ್‌ ದಾಸ್‌ ನೇತೃತ್ವದ ವಿಚಾರಣಾ ಸಮಿತಿ ಕಾಮಗಾರಿಗಳ ತನಿಖೆ ನಡೆಸುತ್ತಿದೆ. ಈ ಕಾಮಗಾರಿಗಳಿಗೆ ಶೇ 75ರಷ್ಟು ಬಿಲ್‌ ಪಾವತಿಸಲಾಗಿದ್ದು ಉಳಿದ ಶೇ 25ರಷ್ಟನ್ನು ಪಾವತಿಸಲು ಕೋರಿದ್ದಾರೆ. 2021ರ ಏಪ್ರಿಲ್‌ನಿಂದ ಈವರೆಗಿನ ಎಲ್ಲ ಬಿಲ್‌ಗಳಲ್ಲಿ ತಡೆಹಿಡಿದಿರುವ ಶೇ 25ರಷ್ಟನ್ನು ಬಿಡುಗಡೆ ಮಾಡಲು ಕೋರಿದ್ದಾರೆ. ಪಾವತಿ ಮಾಡಿರುವ ಬಿಲ್‌ಗಳಿಗೂ ಶೇ 18ರಂತೆ ಜಿಎಸ್‌ಟಿ ಪಾವತಿಸಬೇಕಿರುವುದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಪೂರ್ಣ ಬಿಲ್‌ ಪಾವತಿಸಲು ಅನುಮತಿ ನೀಡಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT