ಭಾನುವಾರ, ಮೇ 22, 2022
28 °C
ಸಾಮೂಹಿಕ ರಜೆ ಹಾಕುವ ಮೂಲಕ ಆಕ್ರೋಶ ಹೊರಹಾಕಿದ ಪಾಲಿಕೆ ನೌಕರರು

ಮೃತರ ಕುಟುಂಬಕ್ಕೆ ಸಿಗದ ಪರಿಹಾರ: ನೌಕರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ವಿಮಾ ಪರಿಹಾರ ಪಾವತಿಸುವಂತೆ ಒತ್ತಾಯಿಸಿ ಬಿಬಿಎಂಪಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸಾಮೂಹಿಕ ರಜೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯ ಎದುರು ಜಮಾಯಿಸಿದ ನೌಕರರು, ಘೋಷಣೆಗಳನ್ನು ಕೂಗಿದರು.

ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದ ಬಿಬಿಎಂಪಿಯ 18 ನೌಕರರು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಈವರೆಗೆ ವಿಮಾ ಪರಿಹಾರ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಜೀವವನ್ನೂ ಲೆಕ್ಕಿಸದೆ ಬಿಬಿಎಂಪಿ ನೌಕರರು ಕರ್ತವ್ಯ ನಿರ್ವಹಿಸಿದ್ದಾರೆ. ಮೃತಪಟ್ಟ ಕುಟುಂಬದವರ ರಕ್ಷಣೆಗೆ ತಕ್ಷಣವೇ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಈವರೆಗೆ ಅವರ ಕುಟುಂಬಗಳಿಗೆ ₹30 ಲಕ್ಷ ವಿಮಾ ಪರಿಹಾರ ದೊರಕಿಸದೆ ಇರುವುದು ಅನ್ಯಾಯ’ ಎಂದು ನೌಕರರು ಹೇಳಿದರು.

‘3 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅಧಿಕಾರಿಗಳು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ಮಹಾನಗರದ ಉಸ್ತುವಾರಿಯನ್ನು ಮುಖ್ಯಮಂತ್ರಿಯವರೇ ಹೊಂದಿದ್ದು, ಒಮ್ಮೆಯೂ ಬಿಬಿಎಂಪಿ ನೌಕರರ ಕುಂದು–ಕೊರತೆಗಳನ್ನು ಆಲಿಸಿಲ್ಲ. ಕೋವಿಡ್ ನಿರ್ವಹಣೆ ಮಾಡಿದ ನೌಕರರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

’ಪಾಲಿಕೆ ನೌಕರರ ವೃಂದ ಮತ್ತು ನೇಮಕಾತಿ ಹೊಸ ನಿಯಮಗಳು ನೌಕರರಿಗೆ ಪ್ರತಿಕೂಲವಾಗಿವೆ. ಮಂಜೂರಾದ ಸಾವಿರಾರು ಹುದ್ದೆಗಳು ಖಾಲಿ ಇವೆ. ಕೆಲಸದ ಹೊರೆ ಹೆಚ್ಚಾಗಿದೆ. ನೌಕರರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿ ಇದೆ‘ ಎಂದು ಹೇಳಿದರು.

‘ಬಡ್ತಿ ವಿಷಯದಲ್ಲೂ ಪಾಲಿಕೆ ನೌಕರರಿಗೆ ಅನ್ಯಾಯ ಆಗುತ್ತಲೇ ಇದೆ. ಕಂದಾಯ ಪರಿವೀಕ್ಷಕರ ಬಡ್ತಿಯಲ್ಲಿ ಶೇ 28ರಷ್ಟು ನೇರ ನೇಮಕಾತಿಗೆ ಅವಕಾಶ ನೀಡಲಾಗಿದೆ. ಈ ರೀತಿಯ ನಿಯಮಗಳು ನೌಕರರ ಮನೋಬಲ ಕುಗ್ಗಿಸಿವೆ. ಅಧಿಕಾರಿ ಮತ್ತು ನೌಕರರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ರಜೆ ಪಡೆದಿಲ್ಲ: ಆಯುಕ್ತರ ಸ್ಪಷ್ಟನೆ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು ಯಾರೂ ರಜೆ ಪಡೆದಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಸ್ಪಷ್ಪಪಡಿಸಿದರು.

‘ಪ್ರತಿಭಟನೆ ಬಳಿಕ ಕೆಲವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಜೆ ಹಾಕದೆ ಕರ್ತವ್ಯಕ್ಕೂ ಹಾಜರಾಗದೆ ಇದ್ದರೆ ಅಂತವರ ಒಂದು ದಿನದ ವೇತನ ಕಡಿತಗೊಳಿಸಲು ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು