ಶನಿವಾರ, ಮೇ 28, 2022
26 °C
ಯಲಹಂಕ ವಲಯ: 9 ವಾರ್ಡ್‌ಗಳ ಸಹಾಯಕ ಎಂಜಿನಿಯರ್‌ಗಳಿಗೆ ಶಿಕ್ಷೆ

ಕೋವಿಡ್‌ ಆಹಾರದ ಕಿಟ್‌ ಹಂಚದ ತಪ್ಪಿಗೆ ಸಂಬಳಕ್ಕೆ ಕತ್ತರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದಾಗ ನಿರ್ಮಿಸಿದ್ದ ಕಂಟೋನ್ಮೆಂಟ್‌ ಪ್ರದೇಶದ ನಿವಾಸಿಗಳಿಗೆ ತಲುಪಿಸಲು ಖರೀದಿಸಿದ್ದ ಆಹಾರ ಧಾನ್ಯಗಳ ಕಿಟ್‌ಗಳು ಇಲಿ–ಹೆಗ್ಗಣಗಳ ಪಾಲಾಗುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಬಿಎಂಪಿಯ ಒಂಬತ್ತು ವಾರ್ಡ್‌ಗಳ ಎಂಜಿನಿಯರ್‌ಗಳು ಬೆಲೆ ತೆರಬೇಕಾಗಿದೆ. ಕಿಟ್‌ನ ವೆಚ್ಚವನ್ನು ಈ ಅಧಿಕಾರಿಗಳ ಸಂಬಳದಿಂದ ವಸೂಲಿ ಮಾಡುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಬುಧವಾರ ಆದೇಶ ಮಾಡಿದ್ದಾರೆ. 

ಯಲಹಂಕ ವಲಯದ ವಿವಿಧ ವಾರ್ಡ್‌ಗಳಲ್ಲಿ ಕಂಟೋನ್ಮೆಂಟ್‌ ಪ್ರದೇಶಗಳಲ್ಲಿ ಬಡ ನಿವಾಸಿಗಳಿಗೆ ಹಂಚಲು 4,300 ಆಹಾರದ ಕಿಟ್‌ಗಳನ್ನು ಪಾಲಿಕೆ ಒದಗಿಸಿತ್ತು. ಅವುಗಳಲ್ಲಿ 1,100 ಕಿಟ್‌ಗಳನ್ನು ಮಾತ್ರ ವಿತರಣೆ ಮಾಡಲಾಗಿತ್ತು. ಇನ್ನುಳಿದ 3,200 ಕಿಟ್‌ಗಳು ಹಾಗೆಯೇ ಇದ್ದವು. ಅವುಗಳಲ್ಲಿ 750 ಕಿಟ್‌ಗಳು ಇಲಿ– ಹೆಗ್ಗಣಗಳ ಪಾಲಾಗಿವೆ. 2,450 ಕಿಟ್‌ಗಳು ಹಾಗೆಯೇ ಇವೆ.

‘ಪ್ರತಿಯೊಂದು ಕಿಟ್‌ ಮೌಲ್ಯ ₹ 500. ಇಲಿಗಳ ಪಾಲಾದ 750 ಕಿಟ್‌ಗಳಿಂದ ಪಾಲಿಕೆಗೆ ಒಟ್ಟು ₹ 3.75 ಲಕ್ಷ ನಷ್ಟ ಉಂಟಾಗಿದೆ. ಇವುಗಳನ್ನು ಈ ವಲಯದ ವಿವಿಧ ವಾರ್ಡ್‌ಗಳಲ್ಲಿ ಸಹಾಯಕ ಎಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಿನಾಥ ಮಲ್ಕಾಪುರ್, ಚಂದ್ರಕಾಂತ ರಾಜು, ಕೃಷ್ಣಪ್ಪ, ರಾಮ್‌ ಸಂಜೀವಯ್ಯ, ಮಹಾಂತೇಶ್‌, ಸುರೇಶ್‌ ದೇವತರಾಜ್‌, ಪುಷ್ಪಲತಾ, ಸೋಮನಾಥ ಜಾಧವ್‌ ಸಂಬಳದಿಂದ ವಸೂಲಿ ಮಾಡಲು ಆದೇಶ ಮಾಡಿದ್ದೇನೆ’ ಎಂದು ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಡಿಗೆಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿಯಿಂದ ಪಡೆದು ಬಡವರಿಗೆ, ನಿರ್ಗತಿಕರಿಗೆ ಹಂಚುವಂತೆ ಹಾಗೂ ಈ ಬಗ್ಗೆ ದಾಖಲೆ ಇಟ್ಟುಕೊಳ್ಳುವಂತೆ ಪ್ರತಿಯೊಂದು ವಾರ್ಡ್‌ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೂ (ಸಹಾಯಕ ಎಂಜಿನಿಯರ್‌) ಮೂರು ತಿಂಗಳ ಹಿಂದೆಯೇ ಆದೇಶ ಮಾಡಿದ್ದೆ. ಆದರೂ ಅವರು ಕಿಟ್‌ಗಳನ್ನು ಒಯ್ದಿರಲಿಲ್ಲ. ಹಾಗಾಗಿ ಅವರ ಸಂಬಳದಿಂದಲೇ ಕಿಟ್‌ ಮೊತ್ತವನ್ನು ವಸೂಲಿ ಮಾಡಿ’ ಎಂದು ಯಲಹಂಕ ವಲಯದ ಜಂಟಿ ಆಯುಕ್ತರು ಬಿಬಿಎಂಪಿ ಆಯುಕ್ತರಿಗೆ ಶಿಫಾರಸು ಮಾಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು