ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಕ್ಕಾದವರ ಕೈ ಸೇರದ ಬೆವರಿನ ಹಣ: ಭರವಸೆ ಮರೆತ ಬಿಬಿಎಂಪಿ

ಪ್ರತಿ ಕೋವಿಡ್‌ ಪರೀಕ್ಷೆಗೆ ₹30 ನೀಡುವ ಭರವಸೆ
Last Updated 9 ಏಪ್ರಿಲ್ 2021, 22:07 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 2020ರ ಆಗಸ್ಟ್‌–ಸೆಪ್ಟೆಂಬರ್‌ ತಿಂಗಳುಗಳಲ್ಲಿ ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗಿದ್ದವು. ಆಗ ಕೋವಿಡ್‌ ಪರೀಕ್ಷೆಗಾಗಿ ಜನರ ಗಂಟಲ ದ್ರವ ಸಂಗ್ರಹಕ್ಕೆ ಯಾರೂ ಮುಂದೆ ಬಾರದಿದ್ದಾಗ ಬಿಬಿಎಂಪಿಯ ನೆರವಿಗೆ ಧಾವಿಸಿದ್ದು ಸಂಪರ್ಕ ಕಾರ್ಯಕರ್ತೆಯರು. ಕಷ್ಟ ಕಾಲದಲ್ಲಿ ಕೈ ಹಿಡಿದ ಕಾರ್ಯಕರ್ತೆಯರಿಗೆ ಪ್ರತಿ ಕೋವಿಡ್‌ ಪರೀಕ್ಷೆಗೆ ₹30 ಪ್ರೋತ್ಸಾಹಧನ ನೀಡುವುದಾಗಿ ಬಿಬಿಎಂಪಿ ವಾಗ್ದಾನ ಮಾಡಿತ್ತು. ಆದರೆ, ಈ ಹಣಇನ್ನೂ ಅವರ ಕೈಸೇರಿಲ್ಲ.

ಸಂಪರ್ಕ ಕಾರ್ಯಕರ್ತೆಯರಿಗೆ ತರಬೇತಿ ನೀಡಿ, ಕೋವಿಡ್ ಪರೀಕ್ಷೆಗೆ ಗಂಟಲ ದ್ರವ ಸಂಗ್ರಹಿಸುವ ಕಾರ್ಯಕ್ಕೆ ಅವರನ್ನು ಬಳಸಿಕೊಳ್ಳಬಹುದು. ಪ್ರತಿ ಪರೀಕ್ಷೆಗೆ ಅವರಿಗೆ ₹ 30 ನೀಡಬೇಕು. ಇದರ ವೆಚ್ಚವನ್ನು ಬಿಬಿಎಂಪಿ ಬಜೆಟ್‌ನ ನೈಸರ್ಗಿಕ ವಿಕೋಪ ನಿಧಿ ಅಥವಾ ಕೋವಿಡ್‌ ನಿಧಿಯಿಂದ ಭರಿಸಬೇಕು ಎಂದು ಬಿಬಿಎಂಪಿ ಆಯುಕ್ತರು 2020ರ ಆ.12ರಂದು ಆದೇಶ ಮಾಡಿದ್ದರು.

ಕೆಲವು ವಲಯಗಳಲ್ಲಿ ಸಂಪರ್ಕ ಕಾರ್ಯಕರ್ತೆಯರಿಗೆ ನಾಲ್ಕು ತಿಂಗಳುಗಳಿಂದ ಸಂಬಳವೂ ಆಗಿಲ್ಲ. ಅತ್ತ ಸಂಬಳವೂ ಇಲ್ಲದೇ, ಇತ್ತ ಪ್ರೋತ್ಸಾಹಧನವೂ ಇಲ್ಲದೇ, ಪ್ರತಿ ಕೋವಿಡ್‌ ಪರೀಕ್ಷೆಯ ಹಣವೂ ಕೈಸೇರದೇ ಅವರ ಬದುಕು ಹೈರಾಣಾಗಿದೆ.

‘ಪುಡಿಗಾಸಿನ ಆಸೆಗೆ ಜೀವ ಪಣಕ್ಕಿಟ್ಟು ಗಂಟಲ ದ್ರವ ಸಂಗ್ರಹಿಸುವ ಕಾರ್ಯದಲ್ಲಿ ಹುಮ್ಮಸ್ಸಿನಿಂದ ತೊಡಗಿಸಿಕೊಂಡೆವು. ನಿತ್ಯ 100 ಮಂದಿಯ ಕೋವಿಡ್‌ ಪರೀಕ್ಷೆ ನಡೆಸುವ ಗುರಿ ನಿಗದಿಪಡಿಸಲಾಗಿತ್ತು. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಸತತವಾಗಿ ಕೆಲಸ ಮಾಡಿ ಗುರಿ ಸಾಧಿಸಿದ್ದೆವು. ಪ್ರತಿ ಪರೀಕ್ಷೆಗೆ ನಮಗೆ ಬರಬೇಕಾದ ₹ 30 ಇನ್ನೂ ಕೈಸೇರಿಲ್ಲ. ಈ ಬಗ್ಗೆ ಕೇಳಿದರೆ, ಒಬ್ಬೊಬ್ಬ ಅಧಿಕಾರಿ ಒಂದೊಂದು ಸಬೂಬು ಹೇಳುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಂಪರ್ಕ ಕಾರ್ಯಕರ್ತೆಯೊಬ್ಬರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಆಗ ಕೋವಿಡ್‌ ಬಗ್ಗೆ ವಿಪರೀತ ಭಯದ ವಾತಾವರಣವಿತ್ತು. ಕೋವಿಡ್‌ ಕೆಲಸಕ್ಕೆ ಹೋಗದಂತೆ ಮನೆಯವರು ಒತ್ತಡ ಹೇರುತ್ತಿದ್ದರು. ನಮ್ಮ ಮಕ್ಕಳು, ಮನೆಯವರ ಜೀವವನ್ನು ಅಪಾಯಕ್ಕೊಡ್ಡಿ ಕೆಲಸ ಮಾಡಿದ್ದೇವೆ. ನಮ್ಮ ಕೆಲಸ ಎಷ್ಟು ಅಪಾಯಕಾರಿಯಾಗಿತ್ತು ಎಂದರೆ, 15ಕ್ಕೂ ಅಧಿಕ ಕಾರ್ಯಕರ್ತೆಯರಿಗೆ ಕೋವಿಡ್‌ ದೃಢಪಟ್ಟಿತ್ತು. ಅದೃಷ್ಟವಶಾತ್‌ ಅವರೆಲ್ಲ ಗುಣಮುಖರಾದರು. ಇಷ್ಟಾದರೂ ಬಿಬಿಎಂಪಿ ನಮಗೆ ನೀಡಿದ ವಾಗ್ದಾನವನ್ನು ಇನ್ನೂ ಈಡೇರಿಸಿಲ್ಲ. ಕೆಲವು ಕಾರ್ಯಕರ್ತೆಯರಿಗೆ ₹ 25 ಸಾವಿರದಿಂದ ₹ 50 ಸಾವಿರದಷ್ಟು ಮೊತ್ತ ಬಾಕಿ ಇದೆ. ನಮ್ಮ ಪಾಲಿಗೆ ಇದು ದೊಡ್ಡ ಮೊತ್ತ. ನಮ್ಮ ಬೆವರಿನ ಹಣವನ್ನು ಬಿಬಿಎಂಪಿ ಇನ್ನಾದರೂ ಬಿಡುಗಡೆ ಮಾಡಬೇಕು’ ಎಂದು ಮತ್ತೊಬ್ಬ ಸಂಪರ್ಕ ಕಾರ್ಯಕರ್ತೆ ಒತ್ತಾಯಿಸಿದರು.

ಕೋವಿಡ್‌ 2ನೇ ಅಲೆ: ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ
ನಗರದಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆ ಕಂಡಿದ್ದರಿಂದ ಹೆಚ್ಚಿನ ವಲಯಗಳಲ್ಲಿ 2020ರ ಡಿಸೆಂಬರ್‌ ಬಳಿಕ ಸಂಪರ್ಕ ಕಾರ್ಯಕರ್ತೆಯರನ್ನು ಕೋವಿಡ್‌ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿತ್ತು. ಅವರಿಗೆ ಹಿಂದಿನಂತೆ ಕಸ ನಿರ್ವಹಣೆ ಜಾಗೃತಿ ಕಾರ್ಯದ ಹೊಣೆ ವಹಿಸಲಾಗಿತ್ತು. ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿದ್ದರಿಂದ ಮತ್ತೆ ಕೋವಿಡ್‌ ಕರ್ತವ್ಯಕ್ಕೆ ಅವರನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.

‘ಕೋವಿಡ್‌ ಕರ್ತವ್ಯಕ್ಕೆ ಹಾಜರಾಗದಿದ್ದರೆ ಸಾಂಕ್ರಾಮಿಕ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆ ಅಡಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದ ಬಿಬಿಎಂಪಿ ಬಡಪಾಯಿ ಸಂಪರ್ಕ ಕಾರ್ಯಕರ್ತೆಯರಿಗೆ ಈ ರೀತಿ ಬೆದರಿಕೆ ಒಡ್ಡಿ ಕೋವಿಡ್‌ ಕರ್ತವ್ಯ ಮಾಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಸಂಪರ್ಕ ಕಾರ್ಯಕರ್ತೆಯೊಬ್ಬರು ಪ್ರಶ್ನಿಸಿದರು.

‘ನಮಗೆ ಭವಿಷ್ಯ ನಿಧಿ ಹಾಗೂ ಕಾರ್ಮಿಕರ ರಾಜ್ಯ ವಿಮೆ (ಇಎಸ್‌ಐ) ಸೌಲಭ್ಯವಾಗಲೀ ಇಲ್ಲ. ನಮ್ಮನ್ನು ಈಗಲೂ ಕೋವಿಡ್‌ ಯೋಧರೆಂದು ಪರಿಗಣಿಸುತ್ತಾರೋ ಇಲ್ಲವೋ ಗೊತ್ತಿಲ್ಲ’ ಎಂದರು.

ಕೊವಿಡ್‌ ಪ್ರೋತ್ಸಾಹ ಧನದಲ್ಲೂ ತಾರತಮ್ಯ
ವೈದ್ಯರಿಂದ ಹಿಡಿದು ಡಿ– ಗುಂಪಿನ ಸಿಬ್ಬಂದಿವರೆಗೆ ಕೋವಿಡ್‌ ಕರ್ತವ್ಯ ನಿರ್ವಹಿಸಿದ ಎಲ್ಲ ಸಿಬ್ಬಂದಿಗೂ ಪ್ರೋತ್ಸಾಹ ಧನ ನೀಡಿದೆ. ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿಗೂ ₹ 8 ಸಾವಿರ ಪ್ರೋತ್ಸಾಹ ಧನ ನೀಡಲಾಗಿದೆ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ (ಎನ್‌ಯುಎಚ್‌ಎಂ) ಅಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆಲ್ಲ ಈ ಸೌಕರ್ಯ ಸಿಕ್ಕಿದೆ. ಆದರೆ, ಬಿಬಿಎಂಪಿಯಿಂದ ನೇಮಕಗೊಂಡ ಸಂಪರ್ಕ ಕಾರ್ಯಕರ್ತೆಯರು ಅವರಷ್ಟೇ ಅಪಾಯಕ್ಕೊಡ್ಡಿಕೊಂಡು ಕೋವಿಡ್‌ ಕೆಲಸ ಮಾಡಿದ್ದರೂ ಅವರಿಗೆ ಮಾತ್ರ ಈ ಸವಲತ್ತು ಇಲ್ಲ!

‘ನಾವೂ ಇತರ ಸಿಬ್ಬಂದಿಯಷ್ಟೇ ಅಪಾಯಕ್ಕೆ ಒಡ್ಡಿಕೊಂಡು ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆವು. ಬಸ್‌ನಿಲ್ದಾಣ, ರೈಲು ನಿಲ್ದಾಣ, ಅಪಾರ್ಟ್‌ಮೆಂಟ್‌ ಸಮುಚ್ಚಯ, ಕೊಳೆಗೇರಿಗಳ ಓಣಿ ಓಣಿಗಳಲ್ಲಿ ಅಲೆದು ಕೋವಿಡ್‌ ಪರೀಕ್ಷೆ ಮಾಡಿಸಿದ್ದೆವು. ಜನರಿಂದ ಸಾಕಷ್ಟು ಬೈಗುಳ ತಿಂದಿದ್ದೆವು. ಕೆಲವರ ಮೇಲೆ ಹಲ್ಲೆ ಯತ್ನವೂ ನಡೆದಿತ್ತು. ಜೀವ ಪಣಕ್ಕಿಟ್ಟು ಕೆಲಸ ಮಾಡಿದ ನಮಗೆ ಈ ರೀತಿ ಅನ್ಯಾಯ ಮಾಡುವುದು ಸರಿಯೇ’ ಎಂದು ಸಂಪರ್ಕ ಕಾರ್ಯಕರ್ತೆಯೊಬ್ಬರು ಪ್ರಶ್ನಿಸಿದರು.

**
ಸಂಪರ್ಕ ಕಾರ್ಯಕರ್ತೆಯರು ಗಂಟಲ ದ್ರವ ಸಂಗ್ರಹಿಸಿದ್ದಕ್ಕೆ ಪ್ರತಿ ಕೋವಿಡ್‌ ಪರೀಕ್ಷೆಗೆ ₹ 30 ಪ್ರೊತ್ಸಾಹ ಧನ ಪಾವತಿ ಆಗದ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.
–ರಾಜೇಂದ್ರ ಚೋಳನ್‌, ವಿಶೇಷ ಆಯುಕ್ತ ( ಆರೋಗ್ಯ), ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT